ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊನ್ನಂಪೇಟೆ: ಹುಲಿ ಸೆರೆಗೆ ಒತ್ತಾಯಿಸಿ ಮುಂದುವರಿದ ಧರಣಿ

ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ನೇತೃತ್ವದಲ್ಲಿ ಪ್ರತಿಭಟನೆ
Last Updated 15 ಮಾರ್ಚ್ 2021, 4:05 IST
ಅಕ್ಷರ ಗಾತ್ರ

ಪೊನ್ನಂಪೇಟೆ: ನಾಗರಿಕರು ಹಾಗೂ ಜಾನುವಾರು ಮೇಲೆ ದಾಳಿ ನಡೆಸಿರುವ ಹುಲಿಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿ ಸಮೀಪ‍ದ ಬೆಳ್ಳೂರು ಗ್ರಾಮದಲ್ಲಿ ರೈತ ಸಂಘ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆ ಭಾನುವಾರವೂ ಮುಂದುವರಿದಿದೆ.

ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಮಾತನಾಡಿ, ‘ಹುಲಿ ಸೆರೆ ಕಾರ್ಯಾಚರಣೆ ಸಂದರ್ಭದಲ್ಲಿ ಸಾಕಾನೆಗಳಿಂದ ತೋಟದಲ್ಲಿ ಆಗಿರುವ ನಷ್ಟವನ್ನು ಅರಣ್ಯ ಇಲಾಖೆಯು ಮಾರ್ಚ್ ತಿಂಗಳ ಅಂತ್ಯದಲ್ಲಿ ಭರಿಸಲಿದೆ. ಸಾಕಾನೆಗಳ ಸಹಾಯವನ್ನು ಗದ್ದೆಗಳಲ್ಲಿ ಮಾತ್ರ ಪಡೆಯಲಾಗುತ್ತದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ’ ಎಂದು ಗ್ರಾಮಸ್ಥರಿಗೆ ತಿಳಿಸಿದರು.

15ಕ್ಕೆ ಪ್ರತಿಭಟನೆ: ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಇದೇ 15ರ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಬೆಳಗ್ಗೆ 11 ಗಂಟೆಗೆ ಜನರಲ್‌ ತಿಮ್ಮಯ್ಯ ವೃತ್ತದಲ್ಲಿ ರೈತರು ಜಮಾಯಿಸಲಿದ್ದು, ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮಾಡಲಿದ್ದಾರೆ ಎಂದು ಮನು ಸೋಮಯ್ಯ ಮಾಹಿತಿ ನೀಡಿದರು.

‘ಎಚ್.ಡಿ ಕೋಟೆ, ಚನ್ನರಾಯಪಟ್ಟಣ ಹಾಗೂ ಹಾಸನ ಭಾಗದ ರೈತರು ಮೈಸೂರು ಅರಣ್ಯ ಭವನದ ಎದುರು ಹೋರಾಟ ಮಾಡಲು ಸಿದ್ದವಿರುವುದಾಗಿ ತಿಳಿಸಿದ್ದಾರೆ. ಮೈಸೂರು ವಿಭಾಗದ 9 ಜಿಲ್ಲೆಗಳ ರೈತರ ಬೆಂಬಲ ಲಭಿಸಲಿದೆ. ಮಂಡ್ಯ ಹಾಗೂ ಮದ್ದೂರು ಭಾಗದ ರೈತರು ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ’ ಎಂದು ಹೇಳಿದರು.

‘ಹುಲಿಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅರಣ್ಯ ಇಲಾಖೆ ವಿಫಲವಾದಲ್ಲಿ ಮುಂದಿನ ಹೋರಾಟ ಹೇಗಿರಬೇಕು ಮತ್ತು ಯಾವ ಸ್ವರೂಪದಲ್ಲಿರಬೇಕು ಎಂಬುದನ್ನು ಸಭೆ ನಡೆಸಿ ನಿರ್ಧರಿಸಲಾಗುವುದು. ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಶೀಘ್ರ ಚರ್ಚೆ ನಡೆಸಲಾಗುವುದು’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಬೇಗೂರು ಹಾಗೂ ಬಿರುನಾಣಿ ಗ್ರಾಮಸ್ಥರು ಪಾಲ್ಗೊಂಡರು. ಈ ಸಂದರ್ಭ ಪ್ರತಿಭಟನಾ ಸ್ಥಳದಲ್ಲಿ ಪ್ರತಿಭಟನನಿರತರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಯಿತು.

ಶಾರ್ಪ್ ಶೂಟರ್ ನಿರ್ಗಮನ; ಆತಂಕ: ಜನ ಹಾಗೂ ಜಾನುವಾರು ಸಾವಿಗೆ ಕಾರಣವಾಗಿರುವ ಹುಲಿಯನ್ನು ಅರವಳಿಕೆ ನೀಡಲು ಅಥವಾ ಗುಂಡಿಕ್ಕಲು ಆದೇಶ ನೀಡಿದ ನಂತರ ಜಿಲ್ಲೆ ಆಗಮಿಸಿದ್ದ ಶಾರ್ಪ್ ಶೂಟರ್ ಸುಶೀಲ್ ಹಾಗೂ ತಂಡ ಕಾರ್ಯಾಚರಣೆ ಕೈಬಿಟ್ಟು ಬೆಂಗಳೂರಿಗೆ ಹಿಂತಿರುಗಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ವ್ಯಕ್ತಿಯೊಬ್ಬರು ಸಭೆಯೊಂದಲ್ಲಿ ಮಾತನಾಡಿರುವುದು ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಹುಲಿಗೆ ಗುಂಡಿಕ್ಕಲು ಮುಂದಾದ ಶಾರ್ಪ್ ಶೂಟರ್‌ಗಳನ್ನು ‘ಗುಂಡು ಹೊಡೆಯಬೇಡಿ ತಪ್ಪಿದಲ್ಲಿ ಪರಿಣಾಮಗಳಿಗೆ ನೀವೆ ಹೊಣೆ, ಗುಂಡುಹೊಡೆದರೆ ಮುಂದಾಗುವ ತೊಂದರೆಗಳನ್ನು ನೀವೇ ಎದುರಿಸಿ. ಅರವಳಿಕೆ ನೀಡಿದರೆ ಸಾಕು ’ ಎಂದು ಹೇಳಿರುವ ವಿಡಿಯೊ ವೈರಲ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT