ಕಾಳು ಮೆಣಸಿನ ಸೊರಗುರೋಗ; ಬೆಳೆಗಾರರಿಗೆ ಆತಂಕ

7

ಕಾಳು ಮೆಣಸಿನ ಸೊರಗುರೋಗ; ಬೆಳೆಗಾರರಿಗೆ ಆತಂಕ

Published:
Updated:
Deccan Herald

ನಾಪೋಕ್ಲು: ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಹೋಬಳಿ ವ್ಯಾಪ್ತಿಯ ಬಹುತೇಕ ತೋಟಗಳಲ್ಲಿನ ಕಾಳುಮೆಣಸಿನ ಬಳ್ಳಿಗಳಿಗೆ ಕೊಳೆರೋಗ ತಗುಲಿದೆ. ಸೊರಗು ರೋಗಕ್ಕೆ ತುತ್ತಾದ ಬಳ್ಳಿಗಳಲ್ಲಿನ ಎಲೆಗಳು ಹಾಗೂ ಮೆಣಸು ಉದುರಿಹೋಗುತ್ತಿವೆ.

ಬೇಸಿಗೆಯಲ್ಲಿ ಸಕಾಲದಲ್ಲಿ ಮಳೆಯಾಗಿದ್ದು, ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಈಗ ಸುರಿಯುತ್ತಿರುವ ಮಳೆಯಿಂದ ಫಸಲು ನಷ್ಟವಾಗುವ ಆತಂಕ ಎದುರಾಗಿದೆ. ಕಾಳು ಮೆಣಸಿಗೆ ತಗುಲಿರುವ ರೋಗದಿಂದಾಗಿ ಇಳುವರಿ ಇಳಿಮುಖವಾಗುತ್ತಿದೆ.

ಕಾಳುಮೆಣಸಿನ ಬೆಳೆಗಾರರನ್ನು ಕಂಗೆಡಿಸುತ್ತಿರುವುದು ಬಳ್ಳಿಗಳಿಗೆ ತಗುಲುವ ಶೀಘ್ರ ಸೊರಗುರೋಗ. ಗಿಡದ ಬುಡಕ್ಕೆ ಈ ರೋಗ ಆಕ್ರಮಣ ಮಾಡುವುದರಿಂದ ಬೆಳೆಗಾರರ ಮೆಣಸಿನ ಉತ್ಪಾದನೆ ಲೆಕ್ಕಾಚಾರವು ಬುಡಮೇಲಾಗುತ್ತಿದೆ. ಮಳೆಗಾಲದ ಆರಂಭದಲ್ಲಿ ಸಮೃದ್ಧವಾಗಿ ಬೆಳೆದು ನಿಂತ ಮೆಣಸಿನ ಬಳ್ಳಿ ನಿರೀಕ್ಷೆಗೂ ಮೀರಿ ಫಸಲು ನೀಡುವಂತೆ ಗೋಚರವಾದರೂ ಮಳೆಗಾಲದಲ್ಲಿ ದಿಢೀರನೆ ಕಾಣಿಸಿಕೊಳ್ಳುವ ರೋಗದಿಂದ ಎಲೆಗಳೆಲ್ಲಾ ಕೊಳೆತು ಉದುರಿಹೋಗುತ್ತವೆ. ಇಳುವರಿಯೂ ನೆಲಕಚ್ಚುತ್ತದೆ.

ಹೋಬಳಿ ವ್ಯಾಪ್ತಿಯ ಹಲವು ತೋಟಗಳಲ್ಲಿ ಸೊರಗಿ ನಿಂತಿರುವ ಮೆಣಸಿನ ಬಳ್ಳಿಗಳು ರೋಗ ವ್ಯಾಪಕವಾಗಿ ಉಲ್ಬಣಿಸುತ್ತಿರುವುದನ್ನು ಸೂಚಿಸುತ್ತಿದೆ. ಶೀಘ್ರ ಸೊರಗು ರೋಗ ಅಥವಾ ಬುಡ ಕೊಳೆಯುವ ರೋಗದಲ್ಲಿ ಮೆಣಸಿನ ಬಳ್ಳಿಯ ಬೇರಿಗೆ ಶಿಲೀಂಧ್ರವು ಆಕ್ರಮಣ ಮಾಡಿ ನೀರಾಹಾರಗಳ ಚಲನೆಯನ್ನು ಅಡ್ಡಿಗೊಳಿಸುತ್ತದೆ. ಬೇರನ್ನು ಕೊಲ್ಲುತ್ತದೆ. ಮಳೆಗಾಲದಲ್ಲಿ ಉಲ್ಬಣಿಸುವ ಈ ರೋಗ ಬೇರನ್ನಲ್ಲದೆ ಗಿಡದ ಬಳ್ಳಿ, ಎಲೆಗಳನ್ನು ಆಕ್ರಮಿಸುತ್ತದೆ. ಜಂತು ಹುಳುವಿನಿಂದಲೂ ಸೊರಗು ರೋಗ ಬರುವುದಾದರೂ ಅಲ್ಲಿ ಗಿಡಗಳು ನಿಧಾನವಾಗಿ ಸೊರಗುತ್ತವೆ. ಇದು ನಿಧಾನ ಸೊರಗು ರೋಗ. ಈ ರೋಗಕ್ಕೆ ತುತ್ತಾದ ಬಳ್ಳಿಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿ ಉದುರುತ್ತಾ ಒಣಗಿ ಹೋಗುತ್ತವೆ.

ರಭಸದ ಮಳೆಯಿಂದ ಸೊರಗು ರೋಗ ಕಾಣಿಸಿಕೊಂಡು ತೋಟಗಳ ಉದ್ದಕ್ಕೂ ವ್ಯಾಪಿಸುತ್ತಿರುವುದು ಬೆಳೆಗಾರರ ಚಿಂತೆಗೆ ಕಾರಣವಾಗಿದೆ. ಕಾಳು ಮೆಣಸಿನ ಎಲೆ ಕೊಳೆರೋಗವನ್ನು ಹತೋಟಿಗೆ ತರಲು ಶೇ.1ರ ಬೋರ್ಡೋ ದ್ರಾವಣವನ್ನು ಕಾಳುಮೆಣಸಿನ ಬಳ್ಳಿಗಳಿಗೆ ಸಿಂಪಡಿಸಬೇಕು. 2 ಕೆ.ಜಿ. ಮೈಲುತುತ್ತು, 2 ಕೆ.ಜಿ.ಸುಣ್ಣವನ್ನು 200 ಲೀಟರ್ ನೀರಿಗೆ ಮಿಶ್ರಣ ಮಾಡಿ ಸುರಿಯಬೇಕು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಸಲಹೆ ನೀಡುತ್ತಾರೆ. ನಾಲ್ಕುನಾಡು ವ್ಯಾಪ್ತಿಯಲ್ಲಿನ ಕಾಫಿ ತೋಟಗಳಲ್ಲಿ ಕಾಳುಮೆಣಸಿನ ಬಳ್ಳಿಗಳಿಗೆ ಸೊರಗುರೋಗ ವ್ಯಾಪಿಸುತ್ತಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

‘ಬಿಸಿಲು ಕಾಣಿಸಿಕೊಂಡರೆ ಔಷಧಿ ಸಿಂಪಡಣೆ ಮಾಡಿ ಹರಡುವ ರೋಗವನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಬಹುದು. ಆದರೆ ನಿರಂತರ ಸುರಿಯುತ್ತಿರುವ ಮಳೆ ಔಷಧಿ ಸಿಂಪಡಣೆಗೆ ಅಡ್ಡಿಯಾಗಿದೆ’ ಎನ್ನುತ್ತಾರೆ ಪುಲಿಕೋಟು ಗ್ರಾಮದ ಕಾಫಿ ಬೆಳೆಗಾರ ಲವ ನಾಣಯ್ಯ.

 

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !