ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೋಡುನಮ್ಮೆ ಕುದುರೆಗೆ ಕೊರೊನಾ ಕಡಿವಾಣ

ಹಬ್ಬಗಳ ನಾಡಿನಲ್ಲಿ ಸೂತಕದ ಛಾಯೆ
Last Updated 20 ಮೇ 2020, 13:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡಗು ಹಬ್ಬಗಳ ನಾಡು. ಪ್ರಕೃತಿಯಲ್ಲಿರುವ ವೈವಿಧ್ಯತೆಯಷ್ಟೇ ಇಲ್ಲಿ ಹಲವು ಬಗೆಯ ಸಂಸ್ಕೃತಿಯೂ ಅಡಗಿದೆ. ಬೇಸಿಗೆ ಕಳೆದು ವರ್ಷದ ಮೊದಲ ಮಳೆ ಭೂದೇವಿಯ ಒಡಲನ್ನು ತಣಿಸುತ್ತಿದ್ದಂತೆ ಹತ್ತಾರು ದೇವತೆಗಳ ಹಬ್ಬವೂ ಆರಂಭಗೊಳ್ಳುತ್ತದೆ. ಆದರೆ, ಈ ಬಾರಿ ಕೊರೊನಾ ಎಲ್ಲದಕ್ಕೂ ಕಡಿವಾಣ ಹಾಕಿದೆ.

ಏಪ್ರಿಲ್, ಮೈ ನಲ್ಲಿ ನಡೆಯುತ್ತಿದ್ದ ಎಲ್ಲ ಬಗೆಯ ಹಬ್ಬಗಳಿಗೂ ಕಡಿವಾಣ ಬಿದ್ದಿದೆ. ಸುಣ್ಣ ಬಣ್ಣಗಳಿಂದ ಕಂಗೊಳಿಸುತ್ತಿದ್ದ ದೇವಾಲಯಗಳು ಕಳೆಗುಂದಿವೆ. ದೇವಾಲಯದ ಮುಂದೆ ಬೆಳೆದಿರುವ ಗಿಡಗಂಟಿಗಳೂ ತೆರವಾಗಿಲ್ಲ.

ಸದ್ದಿಲ್ಲದಾದ ಬೋಡು ನಮ್ಮೆ: ಪೊನ್ನಂಪೇಟೆ ಸಮೀಪದ ಹಳ್ಳಿಗಟ್ಟು ಭದ್ರಕಾಳಿ ಹಾಗೂ ಗುಂಡಿಯತ್ ಅಯ್ಯಪ್ಪ ದೇವರ ಬೇಡು ಹಬ್ಬ ವಾರ್ಷಿಕ ಉತ್ಸವ ಮೇ ತಿಂಗಳ ಎರಡನೇ ವಾರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಈ ಬಾರಿ ಅದಕ್ಕೂ ಕೊರೊನಾ ಸೋಂಕು ಸುತ್ತಿಕೊಂಡಿತು.

ಗುಂಡಿಯತ್ ಅಯ್ಯಪ್ಪ ದೇವರ ಅವುಲ್, ಪೊಲವಪ್ಪ ದೇವರ ವಿಶೇಷ ತೆರೆಯಾದ ಮನೆಮನೆ ಕಳಿ ವಿಶೇಷವಾಗಿ ನಡೆಯುತ್ತಿತ್ತು. ಜೋಡುಬೀಟಿಯಿಂದ ಹಳ್ಳಿಗಟ್ಟು ಕುಂದಕ್ಕೆ ತೆರಳುವ ಮೂಕಳೇರ ಬಲ್ಯಮನೆ ಹತ್ತಿರದ ಪೊಲವಂಡ ದೇವಸ್ಥಾನದಲ್ಲಿ ವಿಶೇಷ ಪೂಜಾ ಪುನಸ್ಕಾರಗಳು ನಡೆಯುತ್ತಿದ್ದವು. ಭಕ್ತರು ಹರಕೆ ಮತ್ತಿತರ ಕಾಣಿಕೆಗಳನ್ನು ಅರ್ಪಿಸುವುದು ವಾಡಿಕೆಯಾಗಿತ್ತು. ಇದಾವುದೂ ಈಗ ಕಾಣುತ್ತಿಲ್ಲ.

ಗುಂಡಿಯತ್ ಅಯ್ಯಪ್ಪ ದೇವಸ್ಥಾನದಲ್ಲಿ ಕೊಡವ ಜನಾಂಗದವರೆ ಅರ್ಚಕರಾಗಿರುವುದು ವಿಶೇಷ. ಹಳ್ಳಿಗಟ್ಟು ಗ್ರಾಮದ ಚಮ್ಮಟೀರ ಹಾಗೂ ಮೂಕಳೇರ ಮನೆಯಿಂದ ತಲಾ ಒಂದೊಂದು ಕುದುರೆಗಳು (ಬೆತ್ತದಲ್ಲಿ ತಯಾರಿಸಿದ ಕುದುರೆ) ಹೊರಡುತ್ತಿದ್ದವು. ಇವು ಹಬ್ಬದ ದಿನ ಸಂಜೆ 5 ಗಂಟೆ ವೇಳೆಗೆ ಹಳ್ಳಿಗಟ್ಟುವಿನ ಭದ್ರಕಾಳಿ ದೇವಸ್ಥಾನದ ಹತ್ತಿರದ ಅಂಬಲದಲ್ಲಿ ಮುಖಾಮುಖಿಯಾಗುತ್ತಿದ್ದವು. ಕುದುರೆ ಜತೆ ಊರಿನವರು ಸೇರಿ ಕುಣಿದು ಸಂಭ್ರಮಿಸುತ್ತಿದ್ದರು.

ಬಳಿಕ ಗದ್ದೆ ಬಯಲಿನ ಕೆರೆಯ ಕೆಸರು ಮಣ್ಣನ್ನು ಮುಖ ಮೈಗಳಿಗೆಲ್ಲ ಬಳಿದುಕೊಂಡು, ಪರಸ್ಪರ ಎರಚಾಡಿ ಸಂತಸ ಪಡುತ್ತಿದ್ದರು. ಆ ಸಂಭ್ರಮವೂ ಈ ವರ್ಷ ಇಲ್ಲದಾಗಿದೆ.

ಕಾವೇರಿ ಸಂಕ್ರಮಣ (ಅ.17) ದಂದು ಕುಂದ ಬೆಟ್ಟಕ್ಕೆ ಜಿಗಿದಿದ್ದ ಬೋಡುನಮ್ಮೆ ಕುದುರೆ ಮೇ 30 ರವರೆಗೂ ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಕೊನೆಗೆ ಪಾರಾಣೆ ಮೈದಾನದಲ್ಲಿ ಬಂದು ನಿಲ್ಲುತ್ತಿತ್ತು. ಮೇ 30 ಮತ್ತು 31ರಂದು ಪಾರಾಣೆಯಲ್ಲಿ ಕುದುರೆಯನ್ನು ಕಟ್ಟಿ ಹಾಕುವ ಸಂಪ್ರದಾಯದ ಮೂಲಕ ಪ್ರಸಕ್ತ ವರ್ಷದ ಬೋಡು ನಮ್ಮೆಗೆ ವಿದಾಯ ಹೇಳಲಾಗುತ್ತಿತ್ತು.ಆದರೆ, ಜಿಲ್ಲಾಡಳಿತ ನೀಡಿದ ಸೂಚನೆ ಮೇರೆಗೆ ಈ ಆಚರಣೆಯೂ ರದ್ದಾಗಿದೆ ಎಂದು ಹಳ್ಳಿಗಟ್ಟು ಗುಂಡಿಯತ್ ಅಯ್ಯಪ್ಪ ದೇವಸ್ಥಾನದ ಪ್ರಮುಖ ಚಮ್ಮಟೀರ ಪ್ರವೀಣ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT