ಶನಿವಾರ, ಜೂನ್ 6, 2020
27 °C
‘ಹೋಂ ನರ್ಸ್‌’ ತಪಾಸಣೆ ತಂದ ಸಂಕಟ, ಸಂಪಾಜೆ ಚೆಕ್‌ಪೋಸ್ಟ್‌ ಮೂಲಕ ಮಡಿಕೇರಿ ಪ್ರವೇಶ

ಮಡಿಕೇರಿ: ಕೊರೊನಾ ವಾರಿಯರ್ಸ್‌ಗೂ ಕ್ವಾರಂಟೈನ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಡಿಕೇರಿ: ಮುಂಬೈನಿಂದ ಕಳೆದ ವಾರ ಮಡಿಕೇರಿಗೆ ಬಂದಿದ್ದ ‘ಹೋಂ ನರ್ಸ್‌’ ತಪಾಸಣೆ ನಡೆಸಿದ್ದ ಕೊರೊನಾ ವಾರಿಯರ್ಸ್‌ಗೂ ಈಗ ಕ್ವಾರಂಟೈನ್‌ ಮಾಡಲಾಗಿದೆ. ಇದರಿಂದ ಕಾಫಿ ನಾಡು ಕೊಡಗಿನಲ್ಲಿ ಮತ್ತೆ ಆತಂಕ ಎದುರಾಗಿದೆ.

ಆ ಮಹಿಳೆ ಮುಂಬೈನಿಂದ ಖಾಸಗಿ ಬಸ್‌ ಮೂಲಕ ಹೊರಟು, ಮಂಗಳೂರು ತಲುಪಿದ್ದರು. ಅಲ್ಲಿಂದ ಉರ್ವ ಪೊಲೀಸ್‌ ಠಾಣೆಗೆ ತೆರಳಿ, ಅಲ್ಲಿನ ಸಿಬ್ಬಂದಿ ನೆರವು ಪಡೆದು ಕ್ಯಾಬ್‌ ಮೂಲಕ ಸಂಪಾಜೆ ಚೆಕ್‌ಪೋಸ್ಟ್‌ಗೆ ಮೇ 15ರಂದು ರಾತ್ರಿ 9ರ ಸುಮಾರಿಗೆ ಬಂದಿದ್ದರು. ಅವರನ್ನು ಚೆಕ್‌ಪೋಸ್ಟ್‌ನಲ್ಲಿ ತಡೆದು ತಪಾಸಣೆ ನಡೆಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಮಡಿಕೇರಿಯ ಕೋವಿಡ್‌ 19ರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೇ 18ರಂದು ಬಂದಿದ್ದ ವರದಿಯಲ್ಲಿ ಕೋವಿಡ್‌ ಪಾಸಿಟಿವ್‌ ಬಂದಿತ್ತು. ಅದಾದ ಮೇಲೆ ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ನಡೆಸಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಸ್ಥಳದಲ್ಲಿದ್ದ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರಲ್ಲೂ ಆತಂಕ ಎದುರಾಗಿತ್ತು.

ಅದರಲ್ಲಿ ಈಗ 22 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. ಅವರ ಕುಟುಂಬದ 35 ಮಂದಿಯ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಮನೆಯವರ ಸಂಪರ್ಕ ಇಲ್ಲ: ಆ ಮಹಿಳೆಯನ್ನು ಸಂಪಾಜೆ ಚೆಕ್‌ಪೋಸ್ಟ್‌ನಲ್ಲಿ ತಡೆದು ನೇರವಾಗಿ ಆಂಬುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲು ಮಾಡಿದ್ದರಿಂದ ಆಕೆ ಮನೆಯವರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ಕೊರೊನಾ ವಾರಿಯರ್ಸ್‌ಗೆ ಈಗ ಸಂಕಷ್ಟ ಎದುರಾಗಿದೆ.

ಎರಡು ಪ್ರಕರಣ: ಜಿಲ್ಲೆಯಲ್ಲಿ ಇದುವರೆಗೂ ಎರಡು ಕೋವಿಡ್‌ ಸೋಂಕು ‍ಪ್ರಕರಣಗಳು ಪತ್ತೆಯಾಗಿವೆ. ದುಬೈನಿಂದ ಬಂದಿದ್ದ ವ್ಯಕ್ತಿಯಲ್ಲೂ ಸೋಂಕು ಕಾಣಿಸಿಕೊಂಡಿತ್ತು. ಆತ ಗುಣಮುಖಗೊಂಡು ಮನೆಯಲ್ಲಿದ್ದಾರೆ. ಹೋಂ ನರ್ಸ್‌ಗೆ ಕೋವಿಡ್‌ ಆಸ್ಪತ್ರೆಯ ಐಸೋಲೇಷನ್‌ ವಾರ್ಡ್‌ನಲ್ಲಿ ಚಿಕಿತ್ಸೆ ಮುಂದುವರಿದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು