ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರಸಂತೆ: ಬೇಡಿಕೆ ಇಲ್ಲದೆ ಹೊಲದಲ್ಲೇ ಉಳಿದ ಹೂವು

ಲಾಕ್‌ಡೌನ್: ಕಷ್ಟಕ್ಕೆ ಸಿಲುಕಿದ ಚೆಂಡು ಹೂವು ಬೆಳೆಗಾರರು
Last Updated 9 ಏಪ್ರಿಲ್ 2020, 19:45 IST
ಅಕ್ಷರ ಗಾತ್ರ

ಶನಿವಾರಸಂತೆ: ಜಿಲ್ಲೆಯಲ್ಲಿ ಲಾಕ್‌ಡೌನ್ ಕೃಷಿಕರು ಬೆಳೆದ ಹಣ್ಣು, ತರಕಾರಿ ಮೇಲೆ ಮಾತ್ರವಲ್ಲ; ಚೆಂಡು ಹೂ ಬೆಳೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದ್ದು ಕೃಷಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೃಷಿಕರ ಜೀವನ ನಿರ್ವಹಣೆ ನಿಟ್ಟಿನಲ್ಲಿ ಸರ್ಕಾರ ಬೆಳೆಯನ್ನು ಮಾರಾಟ ಮಾಡಲು ಅನುಮತಿ ನೀಡಿದ್ದರೂ ಸಾಗಣೆ, ಕಟಾವು, ಮಾರಾಟ ಸಮಸ್ಯೆ ಕಾಡುತ್ತಿದೆ.

ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಹಲವು ಕೃಷಿಕರು ಚೆಂಡು ಹೂವು ಬೆಳೆದಿದ್ದು ಕಟಾವು ಮಾಡಲಾಗದ ಸಂಕಷ್ಟದಲ್ಲಿದ್ದಾರೆ. ಕಟಾವು ಮಾಡಿ, ಸಾಗಣೆ ವ್ಯವಸ್ಥೆಯಾದರೂ ಕೊಳ್ಳುವ ಗ್ರಾಹಕರಿಲ್ಲದಿರುವುದೇ ಕೃಷಿಕರ ಸಂಕಷ್ಟಕ್ಕೆ ಕಾರಣವಾಗಿದೆ. ಜನವರಿ ತಿಂಗಳಲ್ಲಿ ಚೆಂಡು ಹೂವು ಸಸಿಯನ್ನು ನಾಟಿ ಮಾಡಿ, ಮಾರ್ಚ್‌ ತಿಂಗಳಿನಿಂದ ಮೇ ವರೆಗೆ ಕಟಾವು ಮಾಡಲಾಗುತ್ತದೆ. ಎಕರೆಗೆ ₹ 25 ರಿಂದ 50 ಸಾವಿರ ವೆಚ್ಚ ಮಾಡಿದರೆ,3-4 ಟನ್ ಇಳುವರಿ ಸಿಗುತ್ತದೆ. ಆದರೆ, ಈಗ ಬೆಳೆ ಕಟಾವಿಗೆ ಬಂದಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

‘ಕೊರೊನಾ ವೈರಸ್‌ನಿಂದಾಗಿ ಲಾಕ್‌ಡೌನ್ ಆಗಿದ್ದು ಮದುವೆ, ಗೃಹಪ್ರವೇಶ, ಕರಗ ಇತ್ಯಾದಿ ಯಾವುದೇ ಧಾರ್ಮಿಕ ಸಮಾರಂಭಗಳು ನಡೆಯುವಂತಿಲ್ಲ. ಅಲಂಕಾರಕ್ಕಾಗಿಯೇ ಬೆಳೆವ ಚೆಂಡು ಹೂವು ಖರೀದಿಸುವ ಗ್ರಾಹಕರಿಲ್ಲದ ಮೇಲೆ ಕಟಾವು ಮಾಡಿ ಪ್ರಯೋಜನವೇನು? ಹಣ್ಣು, ತರಕಾರಿಯಾದರೆ ಮಾರಾಟ ಮಾಡಬಹುದು. ಸಮಾರಂಭಗಳಿಲ್ಲದೆ ಹೂವು ಖರೀಸುವವರು ಯಾರು’ ಎಂದು ಬೇಸರದಿಂದ ಪ್ರಶ್ನಿಸುತ್ತಾರೆ ಮೂದರವಳ್ಳಿ ಗ್ರಾಮದ ಕೃಷಿಕ ಎಂ.ಪಿ.ರಸನ್.

ಈ ವರ್ಷ 1 ಎಕರೆ ಜಮೀನಿನಲ್ಲಿ 12 ಸಾವಿರ ಚೆಂಡು ಸಸಿ ನೆಟ್ಟಿರುವಕೃಷಿಕ ರಸನ್, ಗೊಬ್ಬರ ಹಾಘೂ ಇತರೆಯಾಗಿ ₹ 25 ಸಾವಿರ ಖರ್ಚು ಮಾಡಿದ್ದಾರೆ. ಪ್ರತಿವರ್ಷ ಖರ್ಚು ಕಳೆದು ₹ 1 ಲಕ್ಷ ಲಾಭ ಗಳಿಸುತ್ತಿದ್ದರು. ಈ ವರ್ಷ ಮಾರಾಟವೇ ಇಲ್ಲವೆಂದ ಮೇಲೆ ಪೋಷಣೆ ಏಕೆ ಎಂದು ಗಿಡಗಳಿಗೆ ನೀರು ಹಾಯಿಸುವುದನ್ನೇ ನಿಲ್ಲಿಸಿದ್ದಾರೆ.

ಮೂದರವಳ್ಳಿ ಗ್ರಾಮದಲ್ಲಿ ಸುನೀಲ್, ಚಂದ್ರಾಮತಿ, ದಯಾನಂದ್, ಪೊನ್ನಪ್ಪ ಮತ್ತಿತರ ಕೃಷಿಕರೂ ಚೆಂಡು ಹೂವು ಬೆಳೆದಿದ್ದು ಹತಾಶರಾಗಿ ಕುಳಿತಿದ್ದಾರೆ.

ಸುಂದರವಾಗಿ ಅರಳಿ ಕಣ್ಮನ ಸೆಳೆಯುತ್ತಿದ್ದ ಹೂವು ಒಣಗಿ, ಕೊಳೆತು ನಾಶವಾಗುವ ಸ್ಥಿತಿ ತಲುಪಿದೆ. ಪ್ರತಿವರ್ಷ ಮೈಸೂರು, ಬೆಂಗಳೂರು ಮಾರುಕಟ್ಟೆಗೆ ಸಾಗಿಸುತ್ತಿದ್ದು 1 ಕೆ.ಜಿ.ಗೆ ₹ 65-120 ರವರೆಗೂ ಉತ್ತಮ ದರ ಪಡೆಯುತ್ತಿದ್ದೆವು ಈ ವರ್ಷ ಸಂಪೂರ್ಣ ನಷ್ಟ ಎನ್ನುತ್ತಾರೆ ಕೃಷಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT