ಮಂಗಳವಾರ, ಜನವರಿ 19, 2021
17 °C
ಕೊಡಗು ಜಿಲ್ಲಾಡಳಿತ, ಆರೋಗ್ಯ ಇಲಾಖೆಯೂ ಸಜ್ಜು

ಕೊಡಗಿನ 40 ಕೇಂದ್ರದಲ್ಲಿ ಲಸಿಕೆ ವಿತರಣೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

Prajavani

ಮಡಿಕೇರಿ: ‘ಕೋವಿಡ್‌ 19’ಗೆ ಕೊನೆಗೂ ಲಸಿಕೆ ಬಂದಿದ್ದು, ಲಸಿಕೆಯನ್ನು ಸುರಕ್ಷಿತವಾಗಿ ಸಂರಕ್ಷಣೆ ಹಾಗೂ ವಿತರಣೆಗೆ ಕೊಡಗು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು ಸಜ್ಜಾಗಿದೆ.

ಲಸಿಕೆಯು ಬೆಂಗಳೂರಿನ ಔಷಧಿ ಉಗ್ರಾಣ ಸೇರಿದೆ. ಕೊಡಗಿಗೂ ಇನ್ನೆರಡು ದಿನಗಳಲ್ಲಿ ಲಸಿಕೆ ಬರುವ ಸಾಧ್ಯತೆಯಿದೆ. ಜಿಲ್ಲಾ ಕೇಂದ್ರಕ್ಕೆ ಲಸಿಕೆಯನ್ನು ರವಾನಿಸುವ ದಿನ ನಿಗದಿಯಾಗಿಲ್ಲ. ಆದರೆ, ಶುಕ್ರವಾರ ಸಂಜೆಯ ವೇಳೆಗೆ ಮಡಿಕೇರಿಗೂ ಲಸಿಕೆ ಬರುವ ನಿರೀಕ್ಷೆಯಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ಶನಿವಾರ 5 ಸ್ಥಳದಲ್ಲಿ ಚಾಲನೆ: ‘ದೇಶದಾದ್ಯಂತ ಜ.16ರಂದು ಕೋವಿಡ್‌ ಲಸಿಕೆ ಅಭಿಯಾನ ಆರಂಭಗೊಳ್ಳಲಿದೆ. ಅಂದೇ ಕೊಡಗಿನ ಕಾಕೋಟು ಪರಂಬು, ಮಡಿಕೇರಿ, ಕುಶಾಲನಗರ ಸೇರಿದಂತೆ 5 ಕಡೆ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಆಯಾ ಕೇಂದ್ರದಲ್ಲಿ ಹೆಸರು ನೋಂದಣಿಯಾದ ಫಲಾನುಭವಿಗಳಿಗೆ (ಕೊರೊನಾ ವಾರಿಯರ್ಸ್) ಲಸಿಕೆ ನೀಡಲಾಗುವುದು’ ಎಂದು ಡಿಎಚ್‌ಒ ಡಾ.ಮೋಹನ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶನಿವಾರ ಲಸಿಕೆ ಲೋಕಾರ್ಪಣೆಯಾದರೂ ಸೋಮವಾರದಿಂದ, ಜಿಲ್ಲೆಯಲ್ಲೂ ಮೊದಲ ಹಂತದ ವಿತರಣೆ ಆರಂಭವಾಗಲಿದೆ. ಜಿಲ್ಲೆಯ 40 ಕೇಂದ್ರವನ್ನು ಗುರುತಿಸಲಾಗಿದ್ದು ಅಲ್ಲಿ ಲಸಿಕೆ ವಿತರಣೆ ಆಗಲಿದೆ. ಸೂರ್ಲಬ್ಬಿ ಹೊರತು ಪಡಿಸಿ 28 ಪ್ರಾಥಮಿಕ ಆರೋಗ್ಯ ಕೇಂದ್ರ, ಒಂದು ಅರ್ಬನ್‌ ಹೆಲ್ತ್‌ ಸೆಂಟರ್‌, 7 ಸಮುದಾಯ ಆರೋಗ್ಯ ಕೇಂದ್ರ, ಸೋಮವಾರಪೇಟೆ ಹಾಗೂ ವಿರಾಜಪೇಟೆ ಸಾರ್ವಜನಿಕ ಆಸ್ಪತ್ರೆ, ಮಡಿಕೇರಿಯ ಮೆಡಿಕಲ್‌ ಕಾಲೇಜು ವ್ಯಾಪ್ತಿಯ ಆಸ್ಪತ್ರೆಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಡಿಎಚ್‌ಒ ಹೇಳಿದರು.

‘ಲಸಿಕೆ ಉಗ್ರಾಣವನ್ನು ಎರಡು ಸ್ಥಳದಲ್ಲಿ ಸ್ಥಾಪಿಸಲಾಗಿದೆ. ಅಲ್ಲಿಂದ ಬೇರೆ ಬೇರೆ ಕಡೆಗೆ ಲಸಿಕೆ ಪೂರೈಕೆ ಆಗಲಿದೆ’ ಎಂದು ಮಾಹಿತಿ ನೀಡಿದರು.

ಮೊದಲ ಹಂತದಲ್ಲಿ ಯಾರಿಗೆಲ್ಲಾ?: ಮೊದಲ ಹಂತದಲ್ಲಿ ಕೊರೊನಾದ ವಿರುದ್ಧ ಹೋರಾಟ ನಡೆಸಿದವರಿಗೆ ಲಸಿಕೆ ವಿತರಣೆ ಆಗಲಿದೆ. 6,344 ಮಂದಿ ಆರೋಗ್ಯ ಕಾರ್ಯಕರ್ತರು ಸೇರಿಕೊಂಡಿದ್ದಾರೆ. ಡಿಎಚ್‌ಒನಿಂದ ಹಿಡಿದು ಗ್ರೂಪ್‌ ‘ಡಿ’ ನೌಕರರು, ಖಾಸಗಿ ಆಸ್ಪತ್ರೆಯ ವೈದ್ಯರು, ನರ್ಸ್‌ಗಳು, ಮೆಡಿಕಲ್‌ ಹಾಗೂ ಡೆಂಟಲ್‌ ಕಾಲೇಜಿನ ಸಿಬ್ಬಂದಿ, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊದಲ ಹಂತದಲ್ಲಿ ಲಸಿಕೆ ಪಡೆಯಲಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಲಸಿಕೆ ವಿತರಣೆಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಾಸ್ತಾನಿಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಮೂರು ಕಡೆ ಡ್ರೈ ರನ್‌ ಯಶಸ್ವಿಯಾಗಿ ನಡೆದಿದೆ’ ಎಂದು ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌ ತಿಳಿಸಿದ್ದಾರೆ.

ಆರೋಗ್ಯ ಸಿಬ್ಬಂದಿ ಗುರುತು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ವ್ಯಾಪ್ತಿಯ 41 ಸರ್ಕಾರಿ ಸಂಸ್ಥೆಗಳ 4,899 ಮಂದಿ ಹಾಗೂ 172 ಖಾಸಗಿ ಸಂಸ್ಥೆಯ 1,445 ಮಂದಿ ಸೇರಿದಂತೆ ಒಟ್ಟು 6,344 ಹೆಲ್ತ್ ಕೇರ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಮೊದಲು ಲಸಿಕೆ ಸಿಗಲಿದೆ. 261 ಲಸಿಕೆ ನೀಡುವವರ ಗುರುತಿಸಲಾಗಿದೆ. ಬಳಿಕ, 50 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುವುದು. ಕೇಂದ್ರದ ಮಾರ್ಗಸೂಚಿಯಂತೆ ಜಿಲ್ಲೆಯಲ್ಲೂ ಲಸಿಕೆ ವಿತರಣೆ ಆಗಲಿದೆ ಎಂದು ಆರೋಗ್ಯಾಧಿಕಾರಿಗಳು ಹೇಳುತ್ತಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು