ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ವಾಮಾಚಾರಕ್ಕಾಗಿ ತ್ರಿಶೂಲದಲ್ಲಿ ಹೊಡೆದು ಕೊಲೆ, ಅಪರಾಧಿಗಳಿಗೆ ಶಿಕ್ಷೆ

Last Updated 13 ಸೆಪ್ಟೆಂಬರ್ 2022, 15:42 IST
ಅಕ್ಷರ ಗಾತ್ರ

ಮಡಿಕೇರಿ: ವಾಮಾಚಾರ ನಡೆಸುವ ವೇಳೆ ಮಹಿಳೆಯೊಬ್ಬರಿಗೆ ತ್ರಿಶೂಲದಲ್ಲಿ ಹೊಡೆದು ಕೊಲೆ ಮಾಡಿದ ನಾಲ್ವರಿಗೆ ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯವು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.

ದುರ್ಗದತ್ತ ಕಾಳಿದಾಸ ಸ್ವಾಮಿ ಅಲಿಯಾಸ್ ಮಹಮ್ಮದ್ ಇಕ್ಬಾಲ್, ಧರಣಿ ಬೊಳ್ಳವ್ವ, ಈಕೆಯ ಮಕ್ಕಳಾದ ಕವನ್‌ಕಾರ್ಯಪ್ಪ ಭವನ್ ಚೆಂಗಪ್ಪ ಶಿಕ್ಷೆಗೆ ಗುರಿಯಾದವರು.

ದುರ್ಗದತ್ತ ಕಾಳಿದಾಸಸ್ವಾಮಿಯು ತನ್ನ ಮೇಲೆ ದೇವರು ಬರುತ್ತದೆ ಎಂದು ನಂಬಿಸಿ ಬೋಯಿಕೇರಿ ಇಬ್ನಿವಳವಾಡಿ ಗ್ರಾಮದ ಧರಣಿ ಬೊಳ್ಳವ್ವ ಅವರ ಮನೆಯನ್ನೇ ದೇವಸ್ಥಾನದಂತೆ ಮಾಡಿಕೊಂಡ. ಕಾಲಕ್ರಮೇಣ ಸಾರ್ವಜನಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಭೇಟಿ ನೀಡಲಾರಂಭಿಸಿದರು.

ಕಷ್ಟ ಹೇಳಿಕೊಳ್ಳಲು 2015ರ ಅಕ್ಟೋಬರ್ 11ರಂದು ಬಂದ ಅದೇ ಗ್ರಾಮದ ಆಶಾ ಎಂಬುವವರನ್ನು ಮರುದಿನ ಮುಂಜಾನೆಯವರೆಗೂ ಮನೆಯಲ್ಲಿರಿಸಿಕೊಂಡು ಕೈಯಲ್ಲಿ ಕರ್ಪೂರ ಇಟ್ಟು ಉರಿಸಿ, ವಾಮಾಚಾರದ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ತ್ರಿಶೂಲದಿಂದ ಹೊಡೆದು ಆರೋಪಿಗಳು ಕೊಲೆ ಮಾಡಿದ್ದರು.

ಪ್ರಕರಣವನ್ನು ದಾಖಲಿಸಿಕೊಂಡಿದ್ದ ಮಡಿಕೇರಿ ಗ್ರಾಮಾಂತರ ಠಾಣೆಯ ಅಂದಿನ ಸಿಪಿಐ ಎ.ಕರೀಂ ರಾವುತರ್ ಅವರು ಆರೋಪಿಗಳನ್ನು ಬಂಧಿಸಿ, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ಆರೋಪಿಗಳಿಗೆ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದರು. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಕೃಷ್ಣವೇಣಿ ಹಾಗೂ ಎನ್.ಪಿ.ದೇವೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT