ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಸಾಂಬಾರ ಪದಾರ್ಥಗಳ ರ‍ಫ್ತುದಾರರಿಂದ ರೈತರಿಗೆ ಸಲಹೆ

Last Updated 25 ಜನವರಿ 2023, 7:27 IST
ಅಕ್ಷರ ಗಾತ್ರ

ಮಡಿಕೇರಿ: ಸಾಂಬಾರ ಮಂಡಳಿಯಿಂದ ಇಲ್ಲಿನ ಕ್ರಿಸ್ಟಲ್ ಕೋರ್ಟ್ ಸಭಾಂಗಣ ದಲ್ಲಿ ಮಂಗಳವಾರ ನಡೆದ ಸಾಂಬಾರ ಪದಾರ್ಥಗಳ ಖರೀದಿದಾರರ ಮತ್ತು ಮಾರಾಟಗಾರರ ಸಮಾವೇಶದಲ್ಲಿ ಬಂದಿದ್ದ ಬಹುತೇಕ ರಫ್ತುದಾರರು ರೈತ ರಿಗೆ ಕೀಟನಾಶಕಗಳ ಬಳಕೆಯ ಮೇಲೆ ಮಿತಿ ಇರಲಿ ಎಂದು ಸಲಹೆ ನೀಡಿದರು.

ಬಸಾನಿ ಆಗ್ರೋ ಇನ್ನೋವೇಷನ್ ಕಂಪನಿಯ ರಫ್ತುದಾರರಾದ ಸ್ವರೂಪಾ ರೆಡ್ಡಿ ಈ ಕುರಿತು ವಿವರಣೆ ನೀಡಿ ‘ಈಗಾಗಲೇ ವಿದೇಶದಲ್ಲಿ ಭಾರತದ ಕೆಲವೊಂದು ಸಾಂಬಾರ ಪದಾರ್ಥಗಳು ಹೆಚ್ಚು ಕೀಟನಾಶಕ ಅಂಶಗಳಿವೆ ಎಂಬ ಕಾರಣಕ್ಕೆ ತಿರಸ್ಕೃತಗೊಂಡಿವೆ. ಈ ಕುರಿತು ಬೆಳೆಗಾರರು ವೈಜ್ಞಾನಿಕ ಸಲಹೆಗಳನ್ನು ಆಧರಿಸಿ ಕೀಟನಾಶಕಗಳನ್ನು ಬಳಕೆ ಮಾಡಬೇಕು’ ಎಂದು ಹೇಳಿದರು.

‘ಕೃಷಿ ವಿಜ್ಞಾನಿಗಳು ಹೇಳಿರುವ ಪ್ರಕಾರವೇ ಕೀಟನಾಶಕ, ರಸಗೊಬ್ಬರ ಬಳಸಬೇಕು, ನಿಷೇಧಿಸಿರುವ ಕೀಟ ನಾಶಕ ಎಷ್ಟೇ ಕಡಿಮೆ ಬೆಲೆಗೆ ಸಿಕ್ಕರೂ ಬಳಸಬಾರದು. ಆದಷ್ಟು ವೈಜ್ಞಾ ನಿಕವಾಗಿ ಬೆಳೆದರೆ ವಿದೇಶದಲ್ಲಿ ನಮ್ಮ ಸಾಂಬಾರ ಪದಾರ್ಥಗಳಿಗೆ ಬೆಲೆ ಸಿಗುತ್ತದೆ’ ಎಂದರು.

ಭಾರತೀಯ ಸಾಂಬಾರ ಮಂಡ ಳಿಯ ಉಪನಿರ್ದೇಶಕ ಡಾ.ಜಾನ್ಸಿ ಮಣಿತೋಟಂ ಮಾತನಾಡಿ ‘ಸಾಂಬಾರ ಬೆಳೆಗಳ ಉತ್ಪಾದನೆಯಲ್ಲಿ ವಿಶ್ವದಲ್ಲಿಯೇ 6ನೇ ಸ್ಥಾನವನ್ನು ಭಾರತ ಪಡೆದಿದೆ. ಏಲಕ್ಕಿ, ಕರಿಮೆಣಸು, ಅರಿಸಿಣ, ಲವಂಗ, ಶುಂಠಿ ಸೇರಿದಂತೆ 50 ವೈವಿಧ್ಯಮಯ ಸಾಂಬಾರ ಪದಾರ್ಥಗಳನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದೆ. ವಿಶ್ವದಲ್ಲಿಯೇ ಗುಣಮಟ್ಟದ ಸಾಂಬಾರ ಬೆಳೆಗಳಿಗೆ ಕನ್ನಡನಾಡು ಹೆಸರಾಗಿದೆ. ಸುಮಾರು 3.75 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಸಾಂಬಾರ ಬೆಳೆ ಬೆಳೆಸಲಾಗುತ್ತಿದ್ದು, 7.9 ಲಕ್ಷ ಮೆಟ್ರಿಕ್ ಟನ್ ಸಾಂಬಾರ ಪದಾರ್ಥ ಉತ್ಪಾದಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರದಡಿ ಕಾರ್ಯನಿರ್ವ ಹಿಸುತ್ತಿರುವ ಸಾಂಬಾರ ಮಂಡಳಿಯು ಸಾಂಬಾರ ಪದಾರ್ಥಗಳ ರಫ್ತಿಗೆ ಆದ್ಯತೆ ನೀಡಿದ್ದು, ಮಾರಾಟಗಾರರ ಮತ್ತು ಖರೀದಿದಾರರ ನಡುವೆ ಸಮನ್ವಯತೆ ಸಾಧಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ರಾದ ಎಸ್.ಜಿ.ಮೇದಪ್ಪ ಮಾತನಾಡಿ ‘ರೈತರು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗಬೇಕು’ ಎಂದು ಒತ್ತಾಯಿಸಿದರು.

ರಾಜ್ಯದ ವಿವಿಧೆಡೆಗಳಿಂದ 150ಕ್ಕೂ ಅಧಿಕ ಖರೀದಿದಾರರು ಮತ್ತು ಮಾರಾಟಗಾರರು 1 ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಸಾಂಬಾರ ಪದಾರ್ಥಗಳ ಭವಿಷ್ಯದ ಕುರಿತು ಚರ್ಚಿಸಿದರು.

ಕಾಳುಮೆಣಸು, ಏಲಕ್ಕಿ, ಶುಂಠಿ, ಅರಿಸಿನ, 4 ಗುಂಪುಗಳನ್ನಾಗಿ ಮಾಡಿ ಬೆಳೆಗಾರರು ಹಾಗೂ ರಫ್ತುದಾರರ ಮಧ್ಯೆ ಸಂವಾದ ನಡೆಸಲಾಯಿತು.

ಸಾಂಬಾರ ಮಂಡಳಿಯ ಸದಸ್ಯ ಕೆ.ಎಸ್.ಸತ್ಯನಾರಾಯಣ್, ಹುಬ್ಬಳಿಯ ಕೆಎಸ್‍ಎಸ್‍ಡಿಬಿ ವ್ಯವಸ್ಥಾಪಕ ನಿರ್ದೇಶಕ ಬಿ.ಆರ್.ಗಿರೀಶ್, ಮಡಿಕೇರಿ ಸಾಂಬಾರ ಮಂಡಳಿಯ ಸಹಾಯಕ ನಿರ್ದೇಶಕ ಎಸ್.ಎಸ್.ಬಿಜು, ಸಂಬಾರ ಮಂಡಳಿಯ ಹಿರಿಯ ಕ್ಷೇತ್ರ ಅಧಿಕಾರಿ ಎಸ್.ಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT