ಕೊನೆಗೂ ಕೊಡಗಿಗೆ ಬಂದವು ಸೈಕಲ್‌!

7
ಮಡಿಕೇರಿ, ವಿರಾಜಪೇಟೆ ತಾಲ್ಲೂಕಿನಲ್ಲಿ ವಿತರಣೆಗೆ ಬಾಕಿ

ಕೊನೆಗೂ ಕೊಡಗಿಗೆ ಬಂದವು ಸೈಕಲ್‌!

Published:
Updated:
Deccan Herald

ಮಡಿಕೇರಿ: ಅಂತೂ ಇಂತೂ ಶೈಕ್ಷಣಿಕ ವರ್ಷ ಆರಂಭಗೊಂಡು ಆರೂವರೆ ತಿಂಗಳ ಬಳಿಕ ಶಾಲಾ ಮಕ್ಕಳ ಸೈಕಲ್‌ ಕೊಡಗಿಗೆ ಬಂದಿವೆ. ಇಷ್ಟು ದಿವಸ 8ನೇ ತರಗತಿ ವಿದ್ಯಾರ್ಥಿಗಳು ಸೈಕಲ್‌ಗಾಗಿ ಕಾದು ಕುಳಿತ್ತಿದ್ದರೂ ‘ಸೈಕಲ್‌ ಭಾಗ್ಯ’ ಮಾತ್ರ ಸಿಕ್ಕಿರಲಿಲ್ಲ. ಮಡಿಕೇರಿ ಹಾಗೂ ವಿರಾಜಪೇಟೆ ತಾಲ್ಲೂಕಿನಲ್ಲಿ ಸೈಕಲ್‌ ವಿತರಣೆಗೆ ಬಾಕಿಯಿದ್ದು ಜೋಡಣಾ ಕಾರ್ಯ ಪ್ರಗತಿಯಲ್ಲಿದೆ. 

ಪೋಷಕರ ಆಕ್ರೋಶ: ಶೈಕ್ಷಣಿಕ ಅವಧಿ ಆರಂಭದಲ್ಲಿಯೇ ಸೈಕಲ್‌ ವಿತರಿಸಿದರೆ ಅನುಕೂಲ. ಮಾರ್ಚ್‌ನಲ್ಲಿ ಪರೀಕ್ಷೆ ಆರಂಭವಾಗಲಿದ್ದು ಬಳಿಕ ಬೇಸಿಗೆ ರಜೆ ಬರಲಿದೆ. ಈಗ ಸೈಕಲ್‌ ವಿತರಿಸಿದರೆ ಏನು ಪ್ರಯೋಜನ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.

ಎಷ್ಟು ಸೈಕಲ್‌ಗಳು?: ‘8ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ರಾಜ್ಯ ಸರ್ಕಾರವು ಸೈಕಲ್‌ ವಿತರಣೆ ಯೋಜನೆ ಜಾರಿಗೆ ತಂದಿದೆ. ಸೋಮವಾರಪೇಟೆ ತಾಲ್ಲೂಕಿನಲ್ಲಿ 7 ಶಾಲೆಯ 104 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದ 1,333 ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣಾ ಕಾರ್ಯ ಪೂರ್ಣಗೊಂಡಿದೆ. ಉಳಿದ ಎರಡು ತಾಲ್ಲೂಕಿಗೆ ಕಳೆದ ತಿಂಗಳು ಸೈಕಲ್‌ಗಳು ಬಂದಿವೆ. ಮಡಿಕೇರಿ ತಾಲ್ಲೂಕಿನಲ್ಲಿ 1,200, ವಿರಾಜಪೇಟೆಯಲ್ಲಿ 1,260 ಸೈಕಲ್‌ ವಿತರಣೆಗೆ ಬಾಕಿಯಿದೆ’ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಚ್ಚಾದೋ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಮಡಿಕೇರಿಯಲ್ಲಿ ಬಿಡಿಭಾಗಗಳ ಜೋಡಣಾ ಕಾರ್ಯ ಪೂರ್ಣಗೊಂಡಿದ್ದು, ವಿರಾಜಪೇಟೆಯಲ್ಲಿ ಜೋಡಣಾ ಕಾರ್ಯ ಪ್ರಗತಿಯಲ್ಲಿದೆ’ ಎಂದು ಮಾಹಿತಿ ನೀಡಿದರು.

ಮಳೆ ಪರಿಣಾಮ: ಜೂನ್‌ನಲ್ಲಿ ಶಾಲೆಗಳೂ ಆರಂಭವಾದರೂ ಡಿಸೆಂಬರ್‌ ಅಂತ್ಯದಲ್ಲಿ ಸೈಕಲ್‌ ವಿತರಣೆ ಆಗುತ್ತಿವೆ. ಆಗಸ್ಟ್‌ನಲ್ಲಿ ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾಗಿತ್ತು. ಹೀಗಾಗಿ, ಜಿಲ್ಲೆಗೆ ಸೈಕಲ್‌ ಬಂದಿದ್ದು ತಡವಾಗಿದೆ. ಆಗ ಸೈಕಲ್‌ ಬಿಡಿಭಾಗಗಳು ಬಂದಿದ್ದರೂ ದಾಸ್ತಾನು, ಜೋಡಣೆ ಕಷ್ಟವಾಗುತ್ತಿತ್ತು. ಪ್ರತಿ ಸೈಕಲ್‌ಗೆ ಎಲ್ಲ ಬಿಡಿಭಾಗಗಳನ್ನೂ ಜೋಡಿಸಲಾಗಿದೆಯೇ, ಚಲನೆ ಸರಿಯಾಗಿದೆಯೇ ಎಂಬುದನ್ನು ಪರೀಕ್ಷಿಸಿದ ನಂತರ ಶೀಘ್ರವೇ ವಿತರಣೆ ಮಾಡಲಾಗುವುದು ಎಂದೂ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೊಡಗು ಗುಡ್ಡಗಾಡು ಪ್ರದೇಶ. ಕೆಲವು ಗ್ರಾಮಗಳಿಗೆ ಇನ್ನೂ ಬಸ್‌ ಸೌಲಭ್ಯವಿಲ್ಲ. ಜತೆಗೆ, ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತವಾಗಿದೆ. ಶೈಕ್ಷಣಿಕ ಅವಧಿಯ ಆರಂಭದಲ್ಲಿಯೇ ಸೈಕಲ್‌ ವಿತರಿಸಿದ್ದರೆ ಗ್ರಾಮೀಣ ಪ್ರದೇಶದ ನೂರಾರು ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತಿತ್ತು. ಆದರೆ, ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರಿ ಸೌಲಭ್ಯ ತಲುಪಿಸಲು ವಿಫಲವಾಗಿದ್ದಾರೆ ಎಂಬುದು ಪೋಷಕರ ಆಪಾದನೆ.   

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !