ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ವಾಪಸ್‌ಗೆ ನಿಂಬಣ್ಣವರ ಆಗ್ರಹ

ವರ್ಷದ ಹಿಂದೆ ಕಲಘಟಗಿ ತಾಲ್ಲೂಕಿನ ದೇವಿಕೊಪ್ಪ ವಿದ್ಯುತ್ ಅವಘಡ
Last Updated 13 ಜೂನ್ 2018, 9:28 IST
ಅಕ್ಷರ ಗಾತ್ರ

ಧಾರವಾಡ: ‘ಹೆಸ್ಕಾಂ ನಿರ್ಲಕ್ಷ್ಯದಿಂದ ಪ್ರಾಣ ಕಳೆದುಕೊಂಡ ಕುಟುಂಬದವರಿಗೆ ನ್ಯಾಯ ದೊರಕಿಸುವಂತೆ ಆಗ್ರಹಿಸಿ ಹೋರಾಟ ನಡೆಸಿದ 120 ಮಂದಿ ವಿರುದ್ಧ ನೀಡಿದ ದೂರನ್ನು ಹೆಸ್ಕಾಂ ಹಿಂದಕ್ಕೆ ಪಡೆಯಬೇಕು’ ಎಂದು ಕಲಘಟಗಿ ಶಾಸಕ ಸಿ.ಎಂ.ನಿಂಬಣ್ಣವರ, ಕಂದಾಯ ಸಚಿವ ಆರ್‌.ವಿ.ದೇಶಪಾಂಡೆ ಅವರನ್ನು ಒತ್ತಾಯಿಸಿದರು.

ಇಲ್ಲಿನ ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಪ್ರಕೃತಿ ವಿಕೋಪ ಹಾಗೂ ಅತಿವೃಷ್ಟಿಯಿಂದ ಹಾನಿ ಹಾಗೂ ಪರಿಹಾರ ವಿತರಣೆ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

‘ತಾಲ್ಲೂಕಿನ ದೇವಿಕೊಪ್ಪ ಗ್ರಾಮದಲ್ಲಿ ಕಳೆದ ವರ್ಷ ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷದಿಂದಾಗಿ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡಾಗಿ ಬಿದ್ದು ಇಬ್ಬರು ಯುವಕರು ಮೃತಪಟ್ಟಿದ್ದರು. ಇದಕ್ಕೆ ಹೆಸ್ಕಾಂ ಪರಿಹಾರವನ್ನೂ ನೀಡಿದೆ. ಆದರೆ, ಈ ಆಘಾತದಿಂದ ರೊಚ್ಚಿಗೆದ್ದ ಜನರು ಹೋರಾಟ ನಡೆಸಿದ್ದರು. ಅವರ ವಿರುದ್ಧ ಹೆಸ್ಕಾಂ ದೂರು ನೀಡಿದೆ. ಆದರೆ, ಈವರೆಗೂ ಆರೋಪಪಟ್ಟಿ ಸಲ್ಲಿಕೆಯಾಗಿಲ್ಲ. ಆದ್ದರಿಂದ ದೂರು ವಾಪಸ್‌ ಪಡೆಯಬೇಕು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ, ‘ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಂದ ವರದಿ ಪಡೆದು ಗೃಹ ಇಲಾಖೆಗೆ ಮನವಿ ಸಲ್ಲಿಸಿ. ಈ ವಿಷಯದಲ್ಲಿ ಅವರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದರು.

ಶಾಸಕ ಸಿ.ಎಸ್‌.ಶಿವಳ್ಳಿ, ‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಕಲಾದ ವಿದ್ಯುತ್‌ ಕಂಬಗಳು ಈಗಲೂ ಗಟ್ಟಿಯಾಗಿವೆ. ಆದರೆ, ಇತ್ತೀಚೆಗೆ ಹಾಕಲಾದ ಕಂಬಗಳು ಸಣ್ಣ ಗಾಳಿಗೂ ಬೀಳುತ್ತಿವೆ. ಇದರ ಹಿಂದಿನ ಮರ್ಮವೇನು’ ಎಂದು ಪ್ರಶ್ನಿಸಿದರು.

‘ಹಳ್ಳಗಳಿಗೆ ನಿರ್ಮಿಸಿರುವ ಬಾಂದಾರು ಕಿರಿದಾಗಿರುವುದರಿಂದ ನೀರು ಪಕ್ಕದ ಹೊಲ ಹಾಗೂ ರಸ್ತೆಗಳಿಗೆ ನುಗ್ಗುತ್ತಿದೆ. ಬಡವರಿಗಾಗಿ ನಿರ್ಮಿಸಿರುವ ಆಶ್ರಯ ಮನೆಗಳು, ಹಂಚಿಕೆಯಾಗದೆ ಹಾಳಾಗುತ್ತಿವೆ. ಇದನ್ನು ಅಧಿಕಾರಿಗಳು ಗಮನಿಸಬೇಕು’ ಎಂದು ಸಭೆಯ ಗಮನ ಸೆಳೆದರು. ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕಳಪೆ ಬೀಜ ವಾಪಸ್‌ಗೆ ಸೂಚನೆ: ‘ಕೃಷಿ ಇಲಾಖೆ ಕಳಪೆ ಬೀಜ ವಿತರಿಸಿದೆ. ಇದನ್ನು ಕೂಡಲೇ ವಾಪಾಸ್ ಪಡೆದು, ಗುಣಮಟ್ಟದ ಬೀಜ ನೀಡಬೇಕು’ ಎಂದು ನವಲಗುಂದ ಶಾಸಕ ಶಂಕರಪಾಟೀಲ ಮುನೇನಕೊಪ್ಪ ಒತ್ತಾಯಿಸಿದರು.

‘ಇಲಾಖೆಯ ಬೀಜ ಕೇಂದ್ರದಿಂದ ಶೇಂಗಾ ಬೀಜ ವಿತರಿಸಲಾಗಿದೆ. ಅದು ಕಳಪೆ ಗುಣಮಟ್ಟದಿಂದ ಕೂಡಿದೆ. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರೂ ವಿತರಣೆ ಸ್ಥಗಿತಗೊಳಿಸಿಲ್ಲ. ನೀಡಿರುವ ಬೀಜವನ್ನೂ ವಾಪಸ್ ಪಡೆದಿಲ್ಲ. ರೈತರ ಕುರಿತು ಅಧಿಕಾರಿಗಳಿಗೆ ಇರುವ ಕಾಳಜಿಯನ್ನು ಇದು ಸೂಚಿಸುತ್ತದೆ’ ಎಂದು ಸಿಡಿಮಿಡಿಗೊಂಡರು.

ಕೃಷಿ ಇಲಾಖೆ ಜಂಟಿ ನಿರ್ದೇಶ ಟಿ.ಎಸ್‌.ರುದ್ರೇಶಪ್ಪ ಮಾತನಾಡಿ, ‘ಶೇಂಗಾ ಬೀಜ ಕಳಪೆಯಾಗಿರುವ ಕುರಿತು ಸೋಮವಾರ ಮಾಹಿತಿ ಲಭ್ಯವಾಗಿದೆ. ಕೂಡಲೇ ಅದನ್ನು ಸ್ಥಗಿತಗೊಳಿಸಲು ಸೂಚಿಸಲಾಗುವುದು. ಗುಣಮಟ್ಟದ ಬೀಜ ತರಿಸಿ, ರೈತರಿಗೆ ಹಂಚಲಾಗುವುದು’ ಎಂದರು.

ಅಧಿಕಾರಿ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ದೇಶಪಾಂಡೆ, ‘ಇಲಾಖೆ ಕುರಿತು ವರದಿ ನೀಡುವಾಗ ಈ ವಿಷಯವನ್ನು ಸಭೆಯ ಗಮನಕ್ಕೆ ತರಲಿಲ್ಲ. ಶಾಸಕರು ಸಮಸ್ಯೆ ಬಿಚ್ಚಿಡುತ್ತಿದ್ದಂತೆ ಅದನ್ನು ಒಪ್ಪಿಕೊಳ್ಳುತ್ತೀರಿ. ತಕ್ಷಣವೇ ಕಳಪೆ ಬೀಜ ವಿತರಣೆ ನಿಲ್ಲಿಸಿ, ಬೇರೆ ಬೀಜ ರೈತರಿಗೆ ಹಂಚಿ’ ಎಂದು ಕಟ್ಟುನಿಟ್ಟಾಗಿ ಸೂಚಿಸಿದರು.

‘ಅತಿವೃಷ್ಟಿಯಿಂದಾಗಿ ಜಿಲ್ಲೆಯಲ್ಲಿ 610 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 400 ಮನೆಗಳ ಮಾಲೀಕರಿಗೆ ಪರಿಹಾರ ವಿತರಿಸಲಾಗಿದೆ. ಶನಿವಾರದೊಳಗಾಗಿ ಎಲ್ಲಾ ಪರಿಹಾರದ ಚೆಕ್‌ಗಳನ್ನು ವಿತರಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಎಸ್‌.ಬಿ.ಬೊಮ್ಮನಹಳ್ಳಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT