ಬುಧವಾರ, ಅಕ್ಟೋಬರ್ 16, 2019
22 °C
ಗೋಣಿಕೊಪ್ಪಲು ದಸರಾ ಜನೋತ್ಸವ

ಮನಸೂರೆಗೊಂಡ ಮಿಮಿಕ್ರಿ, ಬೊಂಬೆ ಮಾತು

Published:
Updated:
Prajavani

ಗೋಣಿಕೊಪ್ಪಲು: ಭರತನಾಟ್ಯ, ಶಾಸ್ತ್ರೀಯ ಸಂಗೀತ, ಮಿಮಿಕ್ರಿ, ಗೊಂಬೆ ಮಾತು, ಸಿನಿಮಾ ಗೀತೆಗಳು ಹೀಗೆ ಎರಡನೇ ದಿನವಾದ ಸೋಮವಾರ ರಾತ್ರಿ ಕಾವೇರಿ ಕಲಾವೇದಿಕೆಯಲ್ಲಿ ನಡೆದ 41ನೇ ವರ್ಷದ ಗೋಣಿಕೊಪ್ಪಲು ದಸರಾ ಜನೋತ್ಸವದಲ್ಲಿ ನಾನಾ ಕಾರ್ಯಕ್ರಮ ಗರಿಗೆದರಿ ಪ್ರೇಕ್ಷಕರ ಮನಸೂರೆಗೊಂಡವು.

ಸ್ಥಳೀಯ ಕಾರ್ಯಕ್ರಮದಲ್ಲಿ ಅಮ್ಮತ್ತಿಯ ನಾಟ್ಯಾಂಜಲಿ ಸಂಗೀತ ಶಾಲೆ, ಮೂರ್ನಾಡು ಹಾಗೂ ವಿರಾಜಪೇಟೆ ಸಂಗೀತ ಶಾಲೆಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಭರತನಾಟ್ಯ, ಜಾನಪದ ನೃತ್ಯ, ಪಾಶ್ಚಾತ್ಯ ನೃತ್ಯವನ್ನು ಪ್ರದರ್ಶಿಸಿ ಗಮನ ಸೆಳೆದರು. ಕಿರುತೆರೆ ನಟ ಹಾಗೂ ರಂಗ ಕಲಾವಿದ ಶ್ರೀಹರಿ ಅವರಿಂದ ಹಾಡಿನೊಳಗೆ ಹಾಸ್ಯ ಸಂಜೆ ಪ್ರೇಕ್ಷಕರನ್ನು ರಂಜಿಸಿತು.

ಜ್ಯೂನಿಯರ್ ವಿಷ್ಣುವರ್ಧನ್ ಪಾತ್ರದಲ್ಲಿ ಜಯಶ್ರೀರಾಜ್ ಅಭಿಮಾನಿಗಳ ಮನತಣಿಸಿದರೆ, ಮಿಮಿಕ್ರಿಯಲ್ಲಿ ಗಿರೀಶ್ ಆರಾಧ್ಯ ಅವರ ಕಂಠದಿಂದ ಸಿನಿಮಾ ನಟರಾದ ಡಾ. ರಾಜ್‌ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್, ಉಪೇಂದ್ರ ಹೀಗೆ ಹಲವು ನಟರ ಧ್ವನಿಗಳು ನೆರೆದಿದ್ದ ಪ್ರೇಕ್ಷಕರ ಮನಸೂರೆಗೊಂಡವು.

ಇದರ ನಡುವೆ ಸಂತೋಷ್ ಮತ್ತು ಸಿಂಚನ ಅವರ ಸಂಗೀತ ಸುಧೆ ಪ್ರೇಕ್ಷಕರ ಭಾವಾಂತರಂಗವನ್ನು ಎಬ್ಬಿಸಿತು. ಸಿಲ್ಲಿಲಲ್ಲಿ ಧಾರವಾಹಿ ಖಾತ್ಯಿಯ ರಂಗನಾಥ್, ಶ್ರೀನಿವಾಸ್ ಅವರ ಹಾಸ್ಯ ಪ್ರೇಕ್ಷಕರಲ್ಲಿ ಹೊಟ್ಟೆ ಹುಣ್ನಾಗಿಸಿತು. ಕಿರುತೆರೆ ನಟಿ ಮಂಜುಳ ರಂಗಭೂಮಿ ಕಲಾವಿದ ಸುನೀಲ್ ಅವರ ಅಭಿನಯಗಳು ಕೂಡ ಕಲಾಪ್ರಿಯರನ್ನು ರಂಜಿಸಿತು.

ಇದಕ್ಕೂ ಮೊದಲು ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಯಾಸ್ಮಿನ್, ಸುಲೇಖ, ತಾಲ್ಲೂಕು ವೈದ್ಯಾಧಿಕಾರಿ ಯತಿರಾಜ್, ಆರ್ ಎಂಸಿ ಉಪಾಧ್ಯಕ್ಷ ಚಿಯಕ್ ಪೂವಂಡ ಸುಬ್ರಮಣಿ, ತಾಲ್ಲೂಕು ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಕಾವೇರಿ ಹಿಲ್ಸ್ ಥೋಮಸ್, ಗೌರವಾಧ್ಯಕ್ಷ ತಿರುನೆಲ್ಲಿಮಾಡ ಜೀವನ್, ಅಚ್ಚಪ್ಪ ಲೇಔಟ್ ಅಧ್ಯಕ್ಷ ಜಿತೇಂದ್ರ ಹಾಜರಿದ್ದರು.

ಇಂದಿನ ಕಾರ್ಯಕ್ರಮ: ಬೆಳಿಗ್ಗೆ 10 ಗಂಟೆಗೆ ಕವಿಗೋಷ್ಠಿ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಯ ಕಾವೇರಿ ಕಲಾವೇದಿಕೆಯಲ್ಲಿ ನಡೆಯಲಿದೆ

ದಸರಾ ಬಹುಭಾಷಾ ಕವಿಗೋಷ್ಠಿ ಅಧ್ಯಕ್ಷ ಮುಲ್ಲೇಂಗಡ ಮದೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳಾದ ಮೊಣ್ಣಂಡ ಶೋಭ ಸುಬ್ಬಯ್ಯ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಸಾಹಿತಿ ಡಾ. ಜೆ. ಸೋಮಣ್ಣ ಭಾಗವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾದ ಇಟ್ಟೀರ ಕಮಲಾಕ್ಷಿ ಬಿದ್ದಪ್ಪ, ಹಾಗೂ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಕಾರ್ಯಾಧ್ಯಕ್ಷ ಕೆ.ಪಿ. ಬೋಪಣ್ಣ ಉಪಸ್ಥಿತರಿರುವರು.

ಸಂಜೆ 6.45ರಿಂದ 7.30ರವರೆಗೆ ಮುತ್ತಾರ್ ಮುಡಿ ಸಾಂಸ್ಕೃತಿಕ ಕಲಾಬಳಗದವರಿಂದ ಅರೆಭಾಷೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಅಂಬೇಡ್ಕರ್ ವಸತಿ ಶಾಲೆಯವರಿಂದ ನೃತ್ಯ ಕಾರ್ಯಕ್ರಮ

ರಾತ್ರಿ 8.30ರಿಂದ 11.30ರವರೆಗೆ ಯುವದಸರಾ

Post Comments (+)