ಶನಿವಾರ, 23 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಚನಾ ಫಲಕ ಅಳವಡಿಸಲು ಜಿಲ್ಲಾಧಿಕಾರಿ ಸೂಚನೆ

ರಸ್ತೆ ಸುರಕ್ಷತಾ ಸಮಿತಿಯಲ್ಲಿ ಹೆಚ್ಚುತ್ತಿರುವ ಅಪಘಾತಗಳ ಪ್ರಸ್ತಾವ
Published 6 ಜುಲೈ 2023, 15:57 IST
Last Updated 6 ಜುಲೈ 2023, 15:57 IST
ಅಕ್ಷರ ಗಾತ್ರ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಅಪಘಾತಗಳು ಸಂಭವಿಸುತ್ತಿದ್ದು, ಇದನ್ನು ತಡೆಯಲು ಅಗತ್ಯ ಇರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು ಎಂದು ಎಂಜಿನಿಯರ್‌ಗಳಿಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ‘ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೊಡಗು ಜಿಲ್ಲೆಗೆ ರಾಜ್ಯ, ಅಂತರ ರಾಜ್ಯಗಳಿಂದ ಲಕ್ಷಾಂತರ ಜನರು ಭೇಟಿ ನೀಡುತ್ತಾರೆ. ಸ್ಥಳೀಯರು ಸೇರಿದಂತೆ ಯಾರಿಗೂ ಯಾವುದೇ ರೀತಿ ತೊಂದರೆಯಾಗದಂತೆ ಗಮನಹರಿಸುವುದು ಅತ್ಯಗತ್ಯ. ಪ್ರತಿಯೊಬ್ಬರ ಜೀವ ಮುಖ್ಯವಾಗಿದ್ದು, ಅಪಘಾತ ತಡೆಯುವಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ತಾಕೀತು ಮಾಡಿದರು.

‘ರಾಷ್ಟ್ರೀಯ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯಲ್ಲಿ ಸೂಚನಾ ಫಲಕ ಅಳವಡಿಸುವ ಸಂಬಂಧ ಪೊಲೀಸ್ ಇಲಾಖೆಯಿಂದ ಸ್ಥಳದ ಮಾಹಿತಿ ಪಟ್ಟಿ ಪಡೆದು ಕೂಡಲೇ ಆದ್ಯತೆ ಮೇಲೆ ಅಳವಡಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಈಗಾಗಲೇ ಜಿಲ್ಲೆಯಲ್ಲಿ ಮಳೆ ಬಿರುಸು ಪಡೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ. ಮಳೆ ಜೊತೆಗೆ ಮಂಜು ಆವರಿಸುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಸೂಚನಾ ಫಲಕ ಅಳವಡಿಸುವುದು, ‘ಜೀಬ್ರಾ ಕ್ರಾಸ್’ ಬರೆಸುವುದು, ರೈಲಿಂಗ್ಸ್ ನಿರ್ಮಾಣ ಅತ್ಯವಶ್ಯಕ’ ಎಂದರು.

ಸೂಚನಾ ಫಲಕಗಳಿಲ್ಲ; ಎಸ್‌.ಪಿ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಮಾತನಾಡಿ, ‘ಕುಶಾಲನಗರದಿಂದ ಸಂಪಾಜೆವರೆಗೆ ಅಷ್ಟಾಗಿ ಸೂಚನಾ ಫಲಕಗಳೇ ಇಲ್ಲ. ಆದ್ದರಿಂದ ಅಗತ್ಯ ಇರುವ ಕಡೆಗಳಲ್ಲಿ ಸೂಚನಾ ಫಲಕ ಅಳವಡಿಸಬೇಕು’ ಎಂದು ಹೇಳಿದರು.

‘ರಾಷ್ಟ್ರೀಯ, ರಾಜ್ಯ ಹೆದ್ದಾರಿ ಸೇರಿದಂತೆ ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ಗಿಡಗಂಟೆಗಳನ್ನು ಕಡಿದು ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಂತೆಯೂ ಸಲಹೆ ಮಾಡಿದರು.

ಅಪಘಾತ ವಲಯಗಳನ್ನು ಗುರುತಿಸಿ ಸೂಚನಾ ಫಲಕ ಇಲ್ಲದ ಕಡೆ ಫಲಕ ಅಳವಡಿಸಬೇಕು. ಶಾಲಾ- ಕಾಲೇಜು ವ್ಯಾಪ್ತಿಯಲ್ಲಿ ಸಂಚಾರಿ ಮಾರ್ಗದ ವಿವರವಾದ ಮಾಹಿತಿ ಫಲಕ ಹಾಕಬೇಕು. ಸಾರ್ವಜನಿಕ ಹಿತದೃಷ್ಟಿಯಿಂದ ಆದ್ಯತೆ ಮೇಲೆ ಸಂಚಾರಕ್ಕೆ ಈ ಕಾರ್ಯ ಆಗಬೇಕು ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಸಿದ್ದೇಗೌಡ, ‘ಜಿಲ್ಲಾ ಪಂಚಾಯಿತಿ ಕಾರ್ಯಪಾಲಕ ಎಂಜಿನಿಯರ್ ಸುರೇಶ್ ಕುಮಾರ್, ಹೆದ್ದಾರಿ ವಿಭಾಗದ ಸಹಾಯಕ ಎಂಜಿನಿಯರ್ ಹನುಮಂತ ಅವರು ತಮ್ಮ ವ್ಯಾಪ್ತಿಯಲ್ಲಿ ಆಗಬೇಕಿರುವ ಕೆಲಸಗಳ ಬಗ್ಗೆ ಕೂಡಲೇ ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ಕೆಎಸ್‍ಆರ್‌ಟಿಸಿ ಪುತ್ತೂರು ವಿಭಾಗದ ಮುಖ್ಯಸ್ಥ ಜಯಕರ ಶೆಟ್ಟಿ ಮಾತನಾಡಿ, ‘ರಸ್ತೆ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಬಸ್‍ಗಳಿಗೆ ವೇಗದ ಮಿತಿ ಅಳವಡಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಮಧುರಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್, ಕೆಎಸ್‍ಆರ್‌ಟಿಸಿ ಮಡಿಕೇರಿ ಘಟಕದ ವ್ಯವಸ್ಥಾಪಕಿ ಗೀತಾ, ಕಾರ್ಮಿಕ ಇಲಾಖಾ ಅಧಿಕಾರಿ ಹರ್ಷವರ್ಧನ್, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನಯನಾ ಇದ್ದರು.

Highlights - ರಾಷ್ಟ್ರೀಯ, ರಾಜ್ಯ ಹೆದ್ದಾರಿ ಬದಿಯಲ್ಲೆ ಗಿಡಗಂಟಿಗಳು ಕೂಡಲೇ ತೆರವುಗೊಳಿಸಲು ಆದೇಶ ಅಪಘಾತಗಳ ತಡೆಗೆ ಕ್ರಮ ವಹಿಸಲು ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT