ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಚುನಾವಣೆಯಲ್ಲಿ 65 ಮತಗಟ್ಟೆಗಳಲ್ಲಿ ಶೇ 65ಕ್ಕಿಂತ ಕಡಿಮೆ ಮತದಾನ!

ಮಾರ್ಚ್ 4ರ ಒಳಗೆ ನಿಖರ ಕಾರಣ ತಿಳಿಸಲು ಜಿಲ್ಲಾಧಿಕಾರಿ ಸೂಚನೆ
Last Updated 1 ಮಾರ್ಚ್ 2023, 5:53 IST
ಅಕ್ಷರ ಗಾತ್ರ

ಮಡಿಕೇರಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೊಡಗು ಜಿಲ್ಲೆಯ 65 ಮತಗಟ್ಟೆಗಳಲ್ಲಿ ಶೇ 65ಕ್ಕೂ ಕಡಿಮೆ ಮತದಾನವಾಗಿದೆ. ಇದಕ್ಕೆ ನಿಖರ ಕಾರಣವನ್ನು ಮಾರ್ಚ್ 4ರ ಒಳಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ‘ಸ್ವೀಪ್’ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರ ವಾಪ್ತಿಯಲ್ಲಿ 20 ಮತ್ತು ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 45 ಒಟ್ಟು 65 ಮತಗಟ್ಟೆಗಳಲ್ಲಿ ಶೇ 65ಕ್ಕಿಂತ ಕಡಿಮೆ ಮತದಾನವಾಗಿದೆ. ಮತ್ತೆ ಇಲ್ಲಿ ಮತದಾನದ ಪ್ರಮಾಣ ಕುಸಿಯದಂತೆ ಎಚ್ಚರಿಕೆ ವಹಿಸಬೇಕಿದೆ. ಹಾಗಾಗಿ, ನಿಖರವಾದ ಕಾರಣವನ್ನು ಪತ್ತೆ ಹೆಚ್ಚಬೇಕಿದೆ ಎಂದರು.

ಮಡಿಕೇರಿ ನಗರಸಭೆ, ವಿರಾಜಪೇಟೆ ಪಟ್ಟಣ ಪಂಚಾಯಿತಿ, ಕುಶಾಲನಗರ ಹಾಗೂ ಜಿಲ್ಲೆಯ ಗಡಿ ಪ್ರದೇಶಗಳಲ್ಲಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಡಿಮೆ ಮತದಾನವಾಗಿದೆ ಎಂದು ಹೇಳಿದರು.

ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸರಾಸರಿ ಶೇ 75ರಷ್ಟು ಮತದಾನವಾಗಿದೆ. ಹಾಗೆಯೇ, ರಾಜ್ಯದ ಸರಾಸರಿ ಶೇ 72 ರಷ್ಟು ಮತದಾನವಾಗಿತ್ತು ಎಂದು ತಿಳಿಸಿದರು.

‘ಜಿಲ್ಲೆಯಲ್ಲಿ ಚಿತ್ರಕಲಾ ಶಿಬಿರ ಏರ್ಪಡಿಸುವುದು, ಗಾಳಿಪಟ ಹಾಗೂ ಬಲೂನ್ ಹಾರಿಸುವುದು, ರಂಗೋಲಿ ಸ್ಪರ್ಧೆ, ಗೀತಾ ಗಾಯನ, ಮತ್ತಿತರ ಕಾರ್ಯಕ್ರಮಗಳನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿನ ಎಲ್ಲಾ ಹೆದ್ದಾರಿ ಫಲಕಗಳಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಕಲೆ, ಸೇನೆ, ಕ್ರೀಡೆ, ಕೃಷಿ, ತೋಟಗಾರಿಕೆ ಹೀಗೆ ಹಲವು ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ 20 ಕ್ಕೂ ಹೆಚ್ಚು ಮಾದರಿಯ ಹೆದ್ದಾರಿ ಫಲಕಗಳನ್ನು ಅಳವಡಿಸುವಂತಾಗಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಡಾ.ಎಸ್.ಆಕಾಶ್ ಮಾತನಾಡಿ, ಶೇ 65ಕ್ಕಿಂತ ಕಡಿಮೆ ಮತದಾನವಾಗಿರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುವುದು. ಆ ನಿಟ್ಟಿನಲ್ಲಿ ತಮ್ಮ ತಮ್ಮ ವ್ಯಾಪ್ತಿಯಲ್ಲಿ ಬಿಎಲ್‍ಒಗಳ ಮೂಲಕ ಮತದಾನ ಕಡಿಮೆಯಾಗಲು ಕಾರಣವೇನು ಎಂಬ ನಿಖರ ಮಾಹಿತಿ ನೀಡುವಂತೆ ಸೂಚಿಸಿದರು.

ನಗರ, ಪಟ್ಟಣ ಪ್ರದೇಶಗಳು, ಹಾಡಿಗಳಲ್ಲಿ ಪ್ರತೀ ಭಾನುವಾರ ಮತದಾನ ಹೆಚ್ಚಳ ಸಂಬಂಧ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಬೇಕಿದೆ. ಯುವ ಮತದಾರರನ್ನು ತೊಡಗಿಸಿಕೊಂಡು ಬೇರೆ ಬೇರೆ ಕಾರ್ಯಕ್ರಮ ಆಯೋಜಿಸಬೇಕಿದೆ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ರಾಜ್‍ಗೋಪಾಲ್, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ರಂಗಧಾಮಯ್ಯ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪುಟ್ಟರಾಜು ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT