35 ಸಾವಿರ ಜನರಿಗೆ ಬಡ್ಡಿರಹಿತ ಸಾಲ

7
ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಹೇಳಿಕೆ

35 ಸಾವಿರ ಜನರಿಗೆ ಬಡ್ಡಿರಹಿತ ಸಾಲ

Published:
Updated:
Deccan Herald

ಮಡಿಕೇರಿ: ‘ಸಹಕಾರ ಕೇಂದ್ರ ಬ್ಯಾಂಕ್‌ಗಳು ಗ್ರಾಹಕರಿಂದ ಲಾಭಾಂಶ ಪಡೆಯುವುದರ ಜತೆಗೆ ಉತ್ತಮ ಸೇವೆಯನ್ನು ರೈತರಿಗೆ ನೀಡಲು ಮುಂದಾಗಬೇಕು’ ಎಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್ ಕರೆ ನೀಡಿದರು.

ನಗರದ ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶನಿವಾರ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧಿಕಾರಿಗಳಿಗೆ ಗ್ರಾಹಕರ ಸೇವೆ ಮತ್ತು ವ್ಯವಹಾರ ಅಭಿವೃದ್ಧಿ ಕುರಿತು ನಡೆದ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಹಕರು ಬ್ಯಾಂಕ್‌ ವ್ಯವಹಾರಗಳನ್ನು ಅತ್ಯಂತ ಸುಲಭವಾಗಿ ಪಡೆಯಲು ಇಚ್ಛಿಸುತ್ತಾರೆ. ಆದ್ದರಿಂದ, ವಾಣಿಜ್ಯ ಅಥವಾ ರಾಷ್ಟ್ರೀಯ ಬ್ಯಾಂಕ್‌ಗಳು ನೀಡುತ್ತಿರುವ ಮೊಬೈಲ್‌ ಹಾಗೂ ಅಂತರ್ಜಾಲ ಬ್ಯಾಂಕಿನ ಕಡೆಗೆ ಹೆಚ್ಚು ಆಸಕ್ತರಾಗುತ್ತಿದ್ದಾರೆ. ಈ ರೀತಿಯ ಬೆಳವಣಿಗೆ ಸಹಕಾರ ಬ್ಯಾಂಕ್‌ಗಳಲ್ಲಿಯೂ ಆಗಬೇಕು. ಗ್ರಾಹಕರಿಂದ ಲಾಭ ಪಡೆಯುವುದರ ಜತೆಗೆ ಉತ್ತಮ ಸೇವೆ ನೀಡಲು ಶ್ರಮಿಸಬೇಕು’ ಎಂದು ಹೇಳಿದರು.

‘ಸಹಕಾರ ಬ್ಯಾಂಕ್‌ ಸಿಬ್ಬಂದಿ ಗ್ರಾಹಕರೊಡನೆ ಉತ್ತಮ ರೀತಿಯಲ್ಲಿ ವ್ಯವಹರಿಸಿದರಷ್ಟೇ ಬ್ಯಾಂಕ್‌ ಸೌಲಭ್ಯಗಳು ಉತ್ತಮ ರೀತಿಯಲ್ಲಿ ಕೊಡಲು ಸಾಧ್ಯ. ಈಗಾಗಲೇ ಜಿಲ್ಲೆಯಲ್ಲಿ 35 ಸಾವಿರ ಜನರಿಗೆ ಬಡ್ಡಿರಹಿತ ಸಾಲ ಹಾಗೂ ₹ 10 ಲಕ್ಷದ ತನಕ ಕೇವಲ ಶೇ 3 ಬಡ್ಡಿ ದರದಲ್ಲಿ ಗ್ರಾಹಕರಿಗೆ ಸಾಲಸೌಲಭ್ಯ ನೀಡಲಾಗುತ್ತಿದೆ. ಈ ರೀತಿಯ ಸೌಲಭ್ಯಗಳು ಯಾವುದೇ ಬೇರೆ ಬ್ಯಾಂಕ್‌ನಲ್ಲಿ ಇಲ್ಲ’ ಎಂದು ಹೇಳಿದರು.

‘ಬ್ಯಾಂಕ್‌ನಲ್ಲಿ ಕನ್ನಡದಲ್ಲಿ ವ್ಯವಹರಿಸಿ’: ಜಿಲ್ಲೆಯ ಸಾಕಷ್ಟು ವಾಣಿಜ್ಯ ಬ್ಯಾಂಕ್‌ಗಳಲ್ಲಿ ಕನ್ನಡ ಮಾತನಾಡುವ ಸಿಬ್ಬಂದಿಗಳು ಕಡಿಮೆ ಆಗಿದ್ದಾರೆ. ಇತರೆ ರಾಜ್ಯದಿಂದ ಬಂದಿರುವ ಉದ್ಯೋಗಿಗಳು ಇಲ್ಲಿಯ ಗ್ರಾಮೀಣ ಜನರಲ್ಲಿ ವ್ಯವಹರಿಸುವಾಗ ಕನ್ನಡ ಬಿಟ್ಟು ಬೇರೆ ಭಾಷೆಯನ್ನು ಬಳಸುತ್ತಿರುವುದರಿಂದ ತೊಂದರೆ ಆಗುತ್ತಿರುವುದು ಕಂಡು ಬಂದಿದೆ. ಆದ್ದರಿಂದ, ಸಹಕಾರ ಬ್ಯಾಂಕ್‌ಗಳಲ್ಲಿ ಹೆಚ್ಚಾಗಿ ಕನ್ನಡ ಬಳಸಿ ಎಂದು ಮಂಜುನಾಥ್ ಸಲಹೆ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ‘ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಬ್ಯಾಂಕ್‌ಗಳು ನಿರ್ವಹಿಸುವ ಪಾತ್ರ ಮಹತ್ವದ್ದಾಗಿದೆ. ಕೈಗಾರಿಕಾ ಕ್ರಾಂತಿಯ ಸಂಪೂರ್ಣ ಯಶಸ್ಸಿಗೆ ಉತ್ತಮ ಬ್ಯಾಂಕಿಂಗ್ ವ್ಯವಸ್ಥೆ ಬಹಳ ಮಟ್ಟಿಗೆ ಕಾರಣವಾಗಿದೆ. ಈ ಸಾಲಿಗೆ ಸಹಕಾರ ಬ್ಯಾಂಕುಗಳು ಸೇರಿವೆ. ಆದ್ದರಿಂದ ಗ್ರಾಹಕರಿಗೆ ಉತ್ತಮ ಸೇವೆಯನ್ನು ಕೊಡುವುದಷ್ಟೇ ನಮ್ಮ ಗುರಿಯಾಗಬೇಕು’ ಎಂದು ಹೇಳಿದರು.
ನಂತರ ಕರ್ನಾಟಕ ರಾಜ್ಯ ಅಪೆಕ್ಸ್ ಬ್ಯಾಂಕ್ ಮತ್ತು ಕೃಷಿ ಸಿಬ್ಬಂದಿ ತರಬೇತಿ ಸಂಸ್ಥೆ ನಿವೃತ್ತ ವ್ಯವಸ್ಥಾಪಕ ಎಸ್.ಜಿ. ಕುಲಕರ್ಣಿ ಅವರು ಗ್ರಾಹಕರ ಸೇವೆ ಮತ್ತು ವ್ಯವಹಾರ ಅಭಿವೃದ್ಧಿ ಕರಿತು ಉಪನ್ಯಾಸ ನೀಡಿದರು.

ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಕೆ.ಎಸ್.ಗಣಪತಿ, ಎನ್.ಎ.ರವಿಬಸಪ್ಪ, ಕನ್ನಂಡ ಸಂಪತ್, ನಾಗರಾಜು ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !