ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರ ಕ್ಷೇತ್ರದಲ್ಲಿ ಇನ್ನಷ್ಟು ಸುಧಾರಣೆ: ಎಸ್.ಟಿ.ಸೋಮಶೇಖರ್

ಡಿಸಿಸಿ ಬ್ಯಾಂಕ್‍ನ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ
Last Updated 20 ಆಗಸ್ಟ್ 2021, 14:47 IST
ಅಕ್ಷರ ಗಾತ್ರ

ಮಡಿಕೇರಿ: ‘ಸಹಕಾರ ಕ್ಷೇತ್ರದಲ್ಲಿ ರೈತರಿಗೆ ಅನುಕೂಲ ಮಾಡುವಲ್ಲಿ ಇನ್ನಷ್ಟು ಸುಧಾರಣೆ, ಬದಲಾವಣೆಗೆ ಪ್ರಯತ್ನಿಸಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಅವರು ಇಲ್ಲಿ ಶುಕ್ರವಾರ ಹೇಳಿದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನ ಶತಮಾನೋತ್ಸವ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸಚಿವರು ಮಾತನಾಡಿದರು.

‘ಸಹಕಾರ ಸಂಘದಲ್ಲಿ 30 ಲಕ್ಷ ರೈತರಿಗೆ ಸಾಲ ನೀಡುವ ಗುರಿ ಹೊಂದಲಾಗಿದೆ. 280 ವಿವಿಧ ಸಹಕಾರ ಬ್ಯಾಂಕ್‍ಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಸಚಿವರು ತಿಳಿಸಿದರು.

ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ‘ಸಹಕಾರ ಕ್ಷೇತ್ರ ರಾಜಕೀಯ ಕ್ಷೇತ್ರಕ್ಕೆ ಮೆಟ್ಟಿಲು ಎಂದರೆ ತಪ್ಪಾಗಲಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ಡಿಸಿಸಿ ಬ್ಯಾಂಕ್ ಜಿಲ್ಲೆಯ ಮನೆ ಮನೆಗೆ ತಲುಪಿರುವುದು ವಿಶೇಷವೇ ಸರಿ. ಆ ದಿಸೆಯಲ್ಲಿ ಇನ್ನಷ್ಟು ಹೆಮ್ಮರವಾಗಿ ಬ್ಯಾಂಕ್ ಬೆಳೆಯಲಿ’ ಎಂದು ಶಾಸಕರು ಆಶಿಸಿದರು.

ಶಾಸಕ ಕೆ.ಜಿ.ಬೋಪಯ್ಯ ಅವರು, ಶತಮಾನೋತ್ಸವದ ಸ್ಮರಣ ಸಂಚಿಕೆ ‘ಸಹಕಾರ ಸಿರಿ’ ಬಿಡುಗಡೆ ಮಾಡಿ ಮಾತನಾಡಿ, ‘ಜಿಲ್ಲೆ ಸಹಕಾರ ಕ್ಷೇತ್ರಕ್ಕೆ ತನ್ನದೇ ಆದ ಅಸ್ತಿತ್ವ ಹೊಂದಿದೆ. ರೈತರಿಗೆ ಕೃಷಿ ಸಾಲ ನೀಡುವಲ್ಲಿ ಸಹಕಾರ ಕ್ಷೇತ್ರ ಸಹಕಾರಿಯಾಗಿದೆ’ ಎಂದರು.

‘ಕೊಡಗು ಡಿಸಿಸಿ ಬ್ಯಾಂಕ್ ಲಾಭದಲ್ಲಿ ನಡೆಯುತ್ತಿದೆ. ಸಹಕಾರ ಸಂಘಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡಬೇಕು, ಯಾವುದೇ ಕಾರಣಕ್ಕೂ ನಿಯಂತ್ರಣ ಹೇರಬಾರದು’ ಎಂದು ಕೆ.ಜಿ.ಬೋಪಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ ಕೊಡಂದೇರ ಕುಟುಂಬವು ಸಹಕಾರ ಕ್ಷೇತ್ರದಿಂದ ಸೇನಾ ಕ್ಷೇತ್ರದವರೆಗೆ ತನ್ನದೇ ಆದ ಕೊಡುಗೆ ನೀಡಿದೆ. ಜಿಲ್ಲೆಗೆ ಒಳ್ಳೆಯ ಹೆಸರು ತಂದುಕೊಟ್ಟಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕೊಡಗು ಡಿಸಿಸಿ ಬ್ಯಾಂಕ್ ಉತ್ತಮವಾಗಿ ಬೆಳೆಯಲು ಮಾಜಿ ಸಚಿವರಾದ ಎಂ.ಸಿ.ನಾಣಯ್ಯ ಅವರ ಕೊಡುಗೆ ಅಪಾರವಾಗಿದೆ’ ಎಂದು ಇದೇ ಬಣ್ಣಿಸಿದರು.

ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ‘ಇಡೀ ರಾಜ್ಯದಲ್ಲಿ ಎರಡನೇ ಸಹಕಾರ ಸಂಘ ಸ್ಥಾಪನೆಯಾಗಿರುವುದು ಶಾಂತಳ್ಳಿಯಲ್ಲಿ’ (1906) ಎಂದು ಅವರು ತಿಳಿಸಿದರು.

‘ರಾಜ್ಯದಲ್ಲಿ ಸಹಕಾರ ಸಂಘಗಳು ಯಾವುದೇ ರೀತಿಯ ನಿಯಂತ್ರಣಕ್ಕೆ ಒಳಗಾಗಬಾರದು. ಹಸ್ತಕ್ಷೇಪವು ಸಹ ಇರಬಾರದು. ಸಹಕಾರ ಕ್ಷೇತ್ರ ಸಹಕಾರಿಗಳಿಗೋಸ್ಕರ ಇರಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಸಹಕಾರ ಕ್ಷೇತ್ರಗಳು ಪಟ್ಟಭದ್ರ ಹಿತಾಶಕ್ತಿಗಳ ಹಿಡಿತದಲ್ಲಿ ಇರುವುದು ಬೇಸರದ ಸಂಗತಿ’ ಎಂದು ಹೇಳಿದರು.

‘ಸಹಕಾರ ಕ್ಷೇತ್ರದಲ್ಲಿ ಭ್ರಾತೃತ್ವದಿಂದ ಕೆಲಸ ಮಾಡಬೇಕು. ಜಿಲ್ಲೆಯಲ್ಲಿ ಪ್ರಾಥಮಿಕ ಸಹಕಾರ ಸಂಘಗಳಿಗೂ ಮೊದಲು ಧವಸ ಭಂಡಾರ ಸಹಕಾರ ಸಂಘಗಳು ಅಸ್ತಿತ್ವದಲ್ಲಿದ್ದವು’ ಎಂದರು.

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಜಿಲ್ಲೆಯಲ್ಲಿ ಡಿಸಿಸಿ ಬ್ಯಾಂಕ್ 21 ಶಾಖೆಗಳನ್ನು ಹೊಂದಿದೆ. 11 ಕಡೆಗಳಲ್ಲಿ ಸ್ವಂತ ಕಟ್ಟಡ ಹೊಂದಿದೆ’ ಎಂದರು.

‘ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ಕೃಷಿಕರಿಗೆ ಅಗತ್ಯ ಸಹಕಾರ ನೀಡಲಾಗಿದೆ. ಡಿಸಿಸಿ ಬ್ಯಾಂಕ್ ವತಿಯಿಂದ ಚಿನ್ನಾಭರಣ ಸಾಲವನ್ನು ಸಹ ನೀಡಲಾಗುತ್ತದೆ’ ಎಂದರು.

ರಾಜ್ಯ ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ಶಾಂತೆಯಂಡ ರವಿಕುಶಾಲಪ್ಪ ಮಾತನಾಡಿ, ‘ಸರ್ಕಾರ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ಘೋಷಿಸಿರುವುದು ವಿಶೇಷವಾಗಿದೆ’ ಎಂದರು.

ಸಹಕಾರ ಸಂಘಗಳ ಅಪರ ನಿಬಂಧಕರಾದ ಎ.ಸಿ.ದಿವಾಕರ ಮಾತನಾಡಿದರು. ಸಹಕಾರ ಸಚಿವರು ಡಿಸಿಸಿ ಬ್ಯಾಂಕ್ ಕಚೇರಿ ಆವರಣದಲ್ಲಿ ಶತಮಾನೋತ್ಸವ ಭವನದ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು. ಸಭಾ ಕಾರ್ಯಕ್ರಮದ ಮೊದಲು ಬ್ಯಾಂಕಿನ ಇತಿಹಾಸ ಬಿಂಬಿಸುವ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT