ಬುಧವಾರ, ಜೂನ್ 29, 2022
23 °C
ಹೇಮಾವತಿ ನದಿಯಲ್ಲಿ ಎನ್.ಡಿ.ಆರ್.ಎಫ್. ತಂಡದಿಂದ ಶೋಧ ಕಾರ್ಯ

ನೀರುಗಂಟಿ ಮಣಿಮುತ್ತು ಮೃತದೇಹ ಪತ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸೋಮವಾರ ಹೇಮಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ ಕೊಡ್ಲಿಪೇಟೆ ಗ್ರಾಮ ಪಂಚಾಯಿತಿ ನೀರುಗಂಟಿ ಮಣಿಮುತ್ತು (34) ಮೃತದೇಹವನ್ನು ಮಂಗಳವಾರ ಬೆಳಿಗ್ಗೆ ಮಡಿಕೇರಿಯಿಂದ ಬಂದ ಎನ್.ಡಿ.ಆರ್.ಎಫ್‌ನ 18 ಸಿಬ್ಬಂದಿ, ಎರಡು ಮೋಟಾರ್ ಬೋಟ್‌ಗಳಲ್ಲಿ ಶೋಧ ಕಾರ್ಯ ನಡೆಸಿ ಪತ್ತೆ
ಹಚ್ಚಿದರು.

ಶನಿವಾರಸಂತೆ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಎನ್.ಡಿ.ಆರ್.ಎಫ್ ತಂಡದ ಕಮಾಂಡರ್ ಬಬ್ಲೂ ಬಿಶ್ವಾಸ್ ಅವರಿಂದ ಶೋಧ ಕಾರ್ಯದ ಮಾಹಿತಿ ಪಡೆದರು.

ಮುಂಜಾನೆಯಿಂದ ಸಂಜೆವರೆಗೂ ಶೋಧ ಕಾರ್ಯ ನಡೆದು 4.20ರ ಸಮಯಕ್ಕೆ ನದಿಗೆ ಹಾರಿದ ಸ್ಥಳದಿಂದ 30 ಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಯಿತು.

‘ನಮ್ಮ ತಂಡಕ್ಕೆ ಇದೊಂದು ಸವಾಲಿನ ಕಾರ್ಯಾಚರಣೆ ಆಗಿತ್ತು. ನದಿಯ ಅಡಿಯಲ್ಲಿ ಕಲ್ಲು, ಸುಳಿ ಇದ್ದು, ಕೆಸರು ನೀರಿನಲ್ಲಿ ಮೃತದೇಹ ಸಿಕ್ಕಿಹಾಕಿಕೊಂಡಿತ್ತು. ಸ್ಥಳೀಯ ಪೊಲೀಸರು, ಸಾರ್ವಜನಿಕರು, ಗ್ರಾಮ ಪಂಚಾಯಿತಿಯವರು ಸಂಪೂರ್ಣ ಸಹಕಾರ ನೀಡಿದರು’ ಎಂದು ಬಬ್ಲೂ ಬಿಶ್ವಾಸ್ ಮಾಹಿತಿ ನೀಡಿದರು.

ಮೃತ ಮಣಿಮುತ್ತುವಿನ ಕುಟುಂಬಸ್ಥರು ತಮಿಳುನಾಡಿನಿಂದ ಬಂದರು. ತಂದೆ ನೀಡಿದ ದೂರಿನ ಅನ್ವಯ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸೋಮವಾರಪೇಟೆಯ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತು.

ಮೃತರಿಗೆ ಪತ್ನಿ, ಇಬ್ಬರು ಮಕ್ಕಳು ಇದ್ದಾರೆ.

ಸ್ಥಳದಲ್ಲಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಪರಶಿವಮೂರ್ತಿ, ಕೊಡ್ಲಿಪೇಟೆ ಉಪ ಠಾಣೆ ಎಎಸ್ಐ ಚೆನ್ನಯ್ಯ, ಹೆಡ್ ಕಾನ್‌ಸ್ಟೆಬಲ್‌ ಡಿಂಪಲ್, ಸಿಬ್ಬಂದಿ, ಕಂದಾಯ ಅಧಿಕಾರಿ ಮನುಕುಮಾರ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರು, ಪಿಡಿಒ ಹರೀಶ್, ಸಿಬ್ಬಂದಿ ಹಾಗೂ ಮೃತನ ಕುಟುಂಬಸ್ಥರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು