ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಲು ಕಲಿಸಿದ ಜಗದಾತ್ಮಾನಂದಜಿಗೆ ವಿದಾಯ

ಕಂಬನಿ ಮಿಡಿದ ಭಕ್ತ ಸಮೂಹ, ಪೊನ್ನಂಪೇಟೆಯಲ್ಲಿ ನಡೆದ ಅಂತ್ಯಸಂಸ್ಕಾರ
Last Updated 16 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಪೊನ್ನಂಪೇಟೆ (ಕೊಡಗು ಜಿಲ್ಲೆ): ಅಲ್ಲಿ ಮೌನ ಆವರಿಸಿತ್ತು. ಎಲ್ಲರ ಕಣ್ಣಾಲಿಗಳೂ ತೇವಗೊಂಡಿದ್ದವು. ಸಾಕಷ್ಟು ಸಂಖ್ಯೆ
ಯಲ್ಲಿ ಸೇರಿದ್ದ ರಾಮಕೃಷ್ಣ ಆಶ್ರಮದ ಭಕ್ತರು, ಅಭಿಮಾನಿಗಳಲ್ಲಿ ಮಡುಗಟ್ಟಿದ ಶೋಕದ ನಡುವೆ ‘ಬದುಕಲು ಕಲಿಸಿದ’ ಸ್ವಾಮಿ ಜಗದಾತ್ಮಾನಂದಜಿ (89) ಅವರಿಗೆ ಶುಕ್ರವಾರ ಸಂಜೆ ವಿದಾಯ ಹೇಳಲಾಯಿತು.

ಗುರುವಾರ ರಾತ್ರಿ ನಿಧನರಾದ ಸ್ವಾಮೀಜಿ ಪಾರ್ಥಿವ ಶರೀರವನ್ನು ಶುಕ್ರವಾರ ಮಧ್ಯಾಹ್ನದ ವೇಳೆಗೆ ಪೊನ್ನಂಪೇಟೆ ಆಶ್ರಮಕ್ಕೆ ತರಲಾಯಿತು. ಅದಕ್ಕೂ ಮೊದಲು ಮೈಸೂರಿನ ರಾಮಕೃಷ್ಣ ಆಶ್ರಮದ ರಿಮ್ಸ್‌ ಬಿ.ಇಡಿ ಕಾಲೇಜು ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಪೊನ್ನಂಪೇಟೆ ಆಶ್ರಮಕ್ಕೆ ಬಂದಿದ್ದ ಭಕ್ತರು ಸರದಿಯಲ್ಲಿ ಬಂದು ಪುಷ್ಪಗುಚ್ಛವಿಟ್ಟು ದರ್ಶನ ಪಡೆದರು. ಆಶ್ರಮದಲ್ಲಿದ್ದ ಸನ್ಯಾಸಿಗಳು ಸ್ವಾಮೀಜಿ ಆತ್ಮಕ್ಕೆ ಶಾಂತಿ ಕೋರಿದರು.

ಭಕ್ತರ ಸಮ್ಮುಖದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಪೊನ್ನಂಪೇಟೆಯಲ್ಲಿ ನಡೆಯಿತು. ಪೊನ್ನಂಪೇಟೆಯಲ್ಲಿ ಒಂದು ಗಂಟೆಗಳ ಕಾಲ ಸ್ವಯಂ ಪ್ರೇರಿತ ಬಂದ್‌ ನಡೆಸಿ ಗೌರವ ಸಲ್ಲಿಸಲಾಯಿತು. ಬಳಿಕ ಹಿಂದೂ ರುದ್ರಭೂಮಿಯಲ್ಲಿ ಪಾರ್ಥಿವ ಶರೀರಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.

ಆಶ್ರಮದ ಅವರ ವಿಶ್ರಾಂತಿ ಕೋಣೆಯಲ್ಲಿ ನೀರವ ಮೌನ ಆವರಿಸಿತ್ತು. ಸ್ವಾಮೀಜಿ ಇಳಿವಯಸ್ಸಿನಲ್ಲೂ ಸದಾ ಲವಲವಿಕೆಯಿಂದ ಇರುತ್ತಿದ್ದರು. ತಂಬೂರಿ, ವೀಣೆ, ಪುಸ್ತಕ ಹಾಗೂ ಕುರ್ಚಿ ಅನಾಥವಾಗಿದ್ದನ್ನು ಕಂಡು ಭಕ್ತರು ಮರುಗಿದರು.

ಬುಡಕಟ್ಟು ಜನಾಂಗದ ಶ್ರೇಯೋಭಿವೃದ್ಧಿ: ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ ಬುಡಕಟ್ಟು ಜನರು ಹೆಚ್ಚಾಗಿ ವಾಸಿಸುತ್ತಿದ್ದಾರೆ. 2000ದಲ್ಲಿ ಪೊನ್ನಂಪೇಟೆ ಆಶ್ರಮಕ್ಕೆ ಬಂದ ಸ್ವಾಮೀಜಿ, ಬುಡಕಟ್ಟು ಜನರ ಶ್ರೇಯೋಭಿವೃದ್ಧಿಗೆ ಮಿಡಿದಿದ್ದರು. ಜೀವನಮಟ್ಟ ಸುಧಾರಿಸಲು ಹಲವು ಕಾರ್ಯಕ್ರಮಗಳನ್ನೂ ರೂಪಿಸಿದ್ದರು. ಇವರ ಅವಧಿಯಲ್ಲಿ 2009ರಲ್ಲಿ ರಾಮಕೃಷ್ಣ ಆಶ್ರಮದ ‘ಏಕತಾ ಮಂದಿರ’ ಲೋಕಾರ್ಪಣೆಗೊಂಡಿತ್ತು.

ಅವರ ‘ಬದುಕಲು ಕಲಿಯಿರಿ’ ಪುಸ್ತಕವು ನಾಡಿನಾದ್ಯಂತ ಮನೆ ಮಾತಾಗಿದೆ. ಮಡಿಕೇರಿ ಆಕಾಶವಾಣಿಯಲ್ಲಿ ಈ ಪುಸ್ತಕ ಕುರಿತು ನಿರಂತರ ಒಂದು ವರ್ಷಗಳ ಕಾರ್ಯಕ್ರಮ ಪ್ರಸಾರವಾಗಿತ್ತು. ಇದು ಯುವಕರಿಗೆ ಪ್ರೇರಣೆ ನೀಡಿತ್ತು. ಅವರು ನುಡಿದಂತೆಯೇ ನಡೆದುಕೊಂಡಿದ್ದರು ಎಂದು ಭಕ್ತರು ಸ್ಮರಿಸಿದರು.

ಮೈಸೂರಿನಲ್ಲಿದ್ದಾಗ ರಾಮಕೃಷ್ಣ ವಿದ್ಯಾಶಾಲೆಯ ಕ್ಷೇಮಪಾಲಕರಾಗಿ, ಶಾಲೆ ಹಾಗೂ ಆಸ್ಪತ್ರೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನೂವಹಿಸಿಕೊಂಡಿದ್ದರು.

ಭಗವದ್ಗೀತೆ, ಉಪನಿಷತ್ತು, ರಾಮಕೃಷ್ಣ– ವಿವೇಕಾನಂದರ ವೇದಾಂತ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದ್ದರು. ವಾಗ್ಮಿಯ ಜೊತೆಗೆ ಅತ್ಯುತ್ತಮ ಲೇಖಕರು. ಅವರ ಸುಪ್ರಸಿದ್ಧ ಕನ್ನಡ ಗ್ರಂಥ ‘ಬದುಕಲು ಕಲಿಯಿರಿ’ ಮರು ಮುದ್ರಣ ಕಂಡಿದೆ. ಇಂಗ್ಲಿಷ್ ಆವೃತ್ತಿ ‘Learn to Live' ಸಿಂಗಪುರದಿಂದ ಪ್ರಕಟಗೊಂಡಿತ್ತು. ಅವರ ಸಾಹಿತ್ಯ ಸೇವೆ ಪರಿಗಣಿಸಿ 2004ರಲ್ಲಿ ಆರ್ಯ ಪ್ರಶಸ್ತಿಯ ಗೌರವ ಲಭಿಸಿದೆ.

ಜಗದಾತ್ಮಾನಂದಜಿ ಅವರು ಸ್ಫೂರ್ತಿದಾಯಕ ಉಪನ್ಯಾಸ ನೀಡುತ್ತಿದ್ದರು. 2000ದಿಂದ 2010ರ ತನಕ ಪೊನ್ನಂಪೇಟೆ ಆಶ್ರಮದ ಮುಖ್ಯಸ್ಥರಾಗಿದ್ದರು. ಬಳಿಕ ಅದೇ ಆಶ್ರಮದಲ್ಲಿ ವಿಶ್ರಾಂತಿ ಜೀವನ ಸಾಗಿಸುತ್ತಿದ್ದರು. ವಿಶ್ರಾಂತಿ ಜೀವನದಲ್ಲೂ ವಾರಕ್ಕೊಮ್ಮೆ ಉಪನ್ಯಾಸ ನೀಡುತ್ತಿದ್ದರು. ಆಸ್ಟ್ರೇಲಿಯ, ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾದಲ್ಲೂ ಆಧ್ಯಾತ್ಮಿಕ ಜ್ಞಾನ ಪ್ರಸಾರ ಮಾಡಿದ್ದಾರೆ.

ಪೊನ್ನಂಪೇಟೆ ಆಶ್ರಮದ ಅಧ್ಯಕ್ಷ ಮುಖ್ಯಸ್ಥ ಬೋಧಸ್ವರೂಪಾನಂದಜಿ, ಶಾಸಕ ಕೆ.ಜಿ.ಬೋಪಯ್ಯ ಸೇರಿದಂತೆ ಹಲವು ಗಣ್ಯರು ಅಂತಿಮ ನಮನ ಸಲ್ಲಿಸಿದರು.

**

ಸನ್ಯಾಸಿಯ ಹೆಜ್ಜೆ ಗುರುತು

ಉಡುಪಿ ಜಿಲ್ಲೆ, ಬಾಳೆಕುದ್ರು ಗ್ರಾಮದ ಶ್ರೀನಿವಾಸ್‌ ಹಾಗೂ ಶ್ರೀದೇವಿ ದಂಪತಿ 6 ಮಕ್ಕಳಲ್ಲಿ ಹಿರಿಯ ಪುತ್ರ ಸ್ವಾಮಿ ಜಗದಾತ್ಮಾನಂದಜಿ. ಪೂರ್ವಾಶ್ರಮದ ಹೆಸರು ಲಕ್ಷ್ಮಿನಾರಾಯಣ.ಆರಂಭದಲ್ಲಿ ಅದೇ ಗ್ರಾಮದ ಪ್ರಾಥಮಿಕ ಶಾಲೆಯಲ್ಲೇ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. 31ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದರು. 13 ವರ್ಷದಲ್ಲಿದ್ದಾಗ ತಾಯಿ ಸಾವನ್ನಪ್ಪುತ್ತಾರೆ. ಬಳಿಕ ತಂದೆ ಆಶ್ರಯದಲ್ಲಿ ಬೆಳೆಯುತ್ತಾರೆ.

ಬಾಲ್ಯದಲ್ಲಿ ವಿವೇಕಾನಂದರ ಪ್ರಭಾವಕ್ಕೆ ಒಳಗಾಗಿದ್ದರು. 1960ರಲ್ಲಿ ಬೆಂಗಳೂರು ರಾಮಕೃಷ್ಣ ಶಾಖೆ ಸೇರಿ ಸ್ವಾಮಿ ಯತೀಶ್ವರಾನಂದಜಿ ಅವರಲ್ಲಿ ಮಂತ್ರದೀಕ್ಷೆ, ವೀರೇಶ್ವರಾನಂದಜಿ ಅವರಿಂದ ಸನ್ಯಾಸ ಸ್ವೀಕರಿಸಿದ್ದರು.ಸನ್ಯಾಸ ದೀಕ್ಷೆಯ ಬಳಿಕ ತಂದೆಯ ಆರೋಗ್ಯ ವಿಚಾರಿಸಲು ಒಮ್ಮೆ ಮಾತ್ರ ಊರಿಗೆ ಬಂದಿದ್ದರು ಎಂದು ಪೂರ್ವಾಶ್ರಮದ ಕುಟುಂಬಸ್ಥರು ನೆನಪು ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT