ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅನಾಥ ಶವಗಳ ಮುಕ್ತಿದಾತ’ ಹಸನಬ್ಬ ಇನ್ನಿಲ್ಲ

ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯದರ್ಶಿ ಆಗಿಯೂ ಸೇವೆ
Last Updated 8 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಪಟ್ಟಣ ಸೇರಿದಂತೆ ಗ್ರಾಮೀಣ ಭಾಗಗಳಲ್ಲಿ ಬಾವಿ, ಹೊಳೆ, ಕೆರೆ ಸೇರಿದಂತೆ ಯಾವುದೇ ಸ್ಥಳದಲ್ಲಿ ಅನಾಥ ಮೃತದೇಹ ಇದ್ದರೆ ಆ ಸ್ಥಳಕ್ಕೆ ಹಾಜರಾಗಿ ಆ ಮೃತದೇಹಕ್ಕೆ ಮುಕ್ತಿ ನೀಡುತ್ತಿದ್ದ ಆಟೊ ಚಾಲಕ ಹಸನಬ್ಬ (62) ಬುಧವಾರ ನಿಧನರಾದರು.

ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.

ಮೃತರ ಅಂತ್ಯಕ್ರಿಯೆ ಗುರುವಾರ ಆಲೆಕಟ್ಟೆ ರಸ್ತೆಯ ಕಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನೀರು, ಕಾಡು ಸೇರಿದಂತೆ ಯಾವುದೇ ಸ್ಥಳದಲ್ಲಿ ಮೃತದೇಹ ಹಾಗೂ ಅನಾಥ ಶವಗಳು ಕೊಳೆಯುತ್ತಿದ್ದರೆ, ಸಾರ್ವಜನಿಕರು ಪಟ್ಟಣ ಪಂಚಾಯಿತಿ ಅಥವಾ ಪೊಲಿಸ್ ಠಾಣೆಗೆ ಕರೆ ಮಾಡುತ್ತಿರಲಿಲ್ಲ. ಮೊದಲಿಗೆ ಇವರಿಗೇ ಕರೆ ಮಾಡುತ್ತಿದ್ದರು. ತಕ್ಷಣವೇ ಇವರು ಕೆಲಸವನ್ನೆಲ್ಲಾ ಬಿಟ್ಟು ಅಲ್ಲಿಗೆ ಹಾಜರಾಗುತ್ತಿದ್ದರು.

ನಗರದ ಮಹದೇಶ್ವರ ಬ್ಲಾಕ್‌ನ ಅಬ್ದುಲ್ ಖಾದರ್ ಹಾಗೂ ಅಮ್ಮವ್ವ ದಂಪತಿಯ ಪುತ್ರ. ಓದಿದ್ದು ಪ್ರತಿಷ್ಠಿತ ಒಎಲ್‌ವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ. ನಂತರ, ಹಣಕಾಸಿನ ತೊಂದರೆಯಿಂದ ಸ್ಥಳೀಯ ಜೂನಿಯರ್ ಕಾಲೇಜಿನಲ್ಲಿ ಪಿ.ಯು ಅನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ, ಶಿಕ್ಷಣ ಮುಂದುವರಿಸಲು ಸಾಧ್ಯವಾಗದೇ ಜೀವನ ನಿರ್ವಹಣೆಗೆ ಆಟೊ ಚಾಲಕ ವೃತ್ತಿ ಆರಂಭಿಸಿದರು.

ನಗರದಲ್ಲಿ ಅನಾಥ ಶವಗಳು ಕಂಡುಬಂದರೆ, ಅವುಗಳನ್ನು ತನ್ನ ಆಟೋದಲ್ಲಿ ಶವಾಗಾರಕ್ಕೆ ಸಾಗಿಸುವ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದರು. ಬಾವಿಯಲ್ಲಿ ಕಂಡು ಬರುವ ಕೊಳೆತ ಶವಗಳನ್ನೂ ಯಾವುದೇ ಮುಜುಗರವಿಲ್ಲದೇ ಮೇಲೆತ್ತಿ, ಅಪಾಯದ ಅರಿವಿದ್ದರೂ ಕೂಡ ಆ ಕೆಲಸವನ್ನು ಮುಂದುವರಿಸಿಕೊಂಡು ಬರುತ್ತಿದ್ದರು.

50ಕ್ಕೂ ಹೆಚ್ಚು ಶವಗಳನ್ನು ಯಾವುದೇ ಫಲಾಪೇಕ್ಷೆಯನ್ನು ನಿರೀಕ್ಷಿಸದೇ ಶವಾಗಾರಕ್ಕೆ ಸಾಗಿಸಿದ್ದಾರೆ. ಅನಾಥ ಶವಗಳನ್ನು ಇತರ ಆಟೊ ಚಾಲಕರು ಮತ್ತು ಸಂಘ ‌–ಸಂಸ್ಥೆಗಳ ಸಹಕಾರವನ್ನು ಪಡೆದು ಶವಸಂಸ್ಕಾರವನ್ನೂ ಮಾಡಿದ್ದಾರೆ.

ಇಂತಹ ಕಾರ್ಯವನ್ನು ಸಮಾಜ ಸೇವೆಯೆಂದೇ ಭಾವಿಸುವ ಹಸನಬ್ಬ ಅನೇಕ ಸಂಘ- ಸಂಸ್ಥೆಗಳಲ್ಲೂ ಕೆಲಸ ನಿರ್ವಹಿಸಿದ್ದಾರೆ. ಕಾಲೇಜು ವಿದ್ಯಾರ್ಥಿ ಆಗಿದ್ದಾಗಲೇ, ‘ಕಾವೇರಿ ಕಾರ್ಮಿಕರ ಸಂಘ’ದ ಸ್ಥಾಪಕ ಕಾರ್ಯದರ್ಶಿಯಾಗಿ, 1984ರಲ್ಲಿ ‘ಹವ್ಯಾಸಿ ಕಲಾವೃಂದ’ ಸಾಂಸ್ಕೃತಿಕ ಸಂಘವನ್ನು ಸ್ಥಾಪಿಸಿದ್ದರು.

1985ರಿಂದ ಸೋಮವಾರಪೇಟೆ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಕಾರ್ಯದರ್ಶಿಯಾಗಿ 15 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ, ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

ಗಣೇಶೋತ್ಸವದಲ್ಲೂ ಭಾಗಿ: ಇಲ್ಲಿನ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಅದ್ಧೂರಿ ಗೌರಿ-ಗಣೇಶೋತ್ಸವನ್ನು ಆಚರಿಸಿದ ಕೀರ್ತಿಯೂ ಇವರದ್ದು. ಧರ್ಮದ ಭೇದಭಾವ ಇಲ್ಲದೇ ಪಾಲ್ಗೊಂಡಿದ್ದರು.

ನಗರದ ಜಲಾಲಿಯ ಮಸೀದಿಯ ಕಾರ್ಯದರ್ಶಿಯಾಗಿ, ಸಾರ್ವಜನಿಕ ಆಸ್ಪತ್ರೆ ಸಂದರ್ಶಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಇವರ ಸೇವೆ ಗುರುತಿಸಿ ರೋಟರಿ ಸಂಸ್ಥೆ, ವಾಹನ ಚಾಲಕರ ಸಂಘ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ವಿವಿಧ ಸಂಸ್ಥೆಗಳು ಸನ್ಮಾನಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT