ಚಿಕಿತ್ಸೆಗೆ ಸ್ಪಂದಿಸದೆ ಗಾಯಗೊಂಡಿದ್ದ ಕಾಡಾನೆ ಸಾವು

7

ಚಿಕಿತ್ಸೆಗೆ ಸ್ಪಂದಿಸದೆ ಗಾಯಗೊಂಡಿದ್ದ ಕಾಡಾನೆ ಸಾವು

Published:
Updated:
Deccan Herald

ಕುಶಾಲನಗರ: ಉತ್ತರ ಕೊಡಗಿನ ಆನೆಕಾಡು ಮೀಸಲು ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳ ಹಿಂದೆ ಹಳ್ಳಕ್ಕೆ ಬಿದ್ದು ಗಾಯಗೊಂಡಿದ್ದ ಕಾಡಾನೆಗೆ ಚಿಕಿತ್ಸೆ ನೀಡಿದ್ದರೂ ಸ್ಪಂದಿಸದೆ ಶನಿವಾರ ಸಾವನ್ನಪ್ಪಿದೆ.

ಆನೆಕಾಡು ಅರಣ್ಯ ಪ್ರದೇಶದಲ್ಲಿ ಗಾಯಗೊಂಡಿದ್ದ ಕಾಡಾನೆಯನ್ನು ಸಾಕಾನೆಗಳ ಸಹಾಯದಿಂದ ಸಾಕಾನೆ ಶಿಬಿರಕ್ಕೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು. ಮಾವುತರು ಮತ್ತು ಅರಣ್ಯ ಸಿಬ್ಬಂದಿ ಕಾಡಾನೆಯ ಆರೈಕೆ ಮಾಡುತ್ತಿದ್ದರು. ಆದರೆ ವಾರದ ಕಳೆದರೂ ಮುಂಗಾಲಿನ ಊತ ಮಾತ್ರ ಕಡಿಮೆಯಾಗಲಿಲ್ಲ. ಇದರಿಂದ ಆನೆ ನಡೆಯಲು ಹಾಗೂ ನಿಲ್ಲಲ್ಲು ಸಾಧ್ಯವಾಗದೆ ತುಂಬ ತೊಂದರೆ ಅನುಭವಿಸುತ್ತಿತ್ತು.

ಕಳೆದ ಆ.15 ರಂದು ಶಿಬಿರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಭೇಟಿ ನೀಡಿ ಕಾಡಾನೆಯ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಕಾಡಾನೆಯ ಆರೋಗ್ಯ ಸುಧಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅರಣ್ಯಾಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರದಿಂದ ಅಗತ್ಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.

ಕಾಡಾನೆಗೆ ಸೂಕ್ತ ಚಿಕಿತ್ಸೆ ನೀಡಲು ಇಲಾಖೆಯಲ್ಲಿ ಅಗತ್ಯ ವೈದ್ಯಕೀಯ ಸೌಲಭ್ಯಗಳು ಇಲ್ಲದೆ ಇರುವುದರಿಂದ ಅಧಿಕಾರಿಗಳಿಗೆ ಕಾಡಾನೆಯೊಂದು ತಲೆನೋವಾಗಿ ಪರಿಣಾಮಿಸಿತು. ಸಿಸಿಎಫ್ ಲಿಂಗರಾಜು ಅವರು ಕಾಡಾನೆಗೆ ಎಕ್ಸ್‌ರೇ ಮಾಡಿಸಿ ಚಿಕಿತ್ಸೆ ಕೊಡಿಸುವ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಮಾಹಿತಿ ನೀಡಿದರು.

ಆದರೆ ಆನೆಕಾಡಿನಲ್ಲಿರುವ ಆನೆಯನ್ನು ಎಲ್ಲಿಯೂ ಕರೆದುಕೊಂಡು ಹೋಗಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇರುವುದರಿಂದ ಅಲ್ಲಿಯೇ ಚಿಕಿತ್ಸೆ ಕೊಡಿಸಬೇಕಾದ ಅನಿವಾರ್ಯತೆ ಉಂಟಾಯಿತು. ನಿರಂತರವಾಗಿ ಸುರಿಯುತ್ತಿರುವ ಮಳೆ ನಡುವೆ ಆನೆಗೆ ಹೇಗೆ ಚಿಕಿತ್ಸೆಯನ್ನು ಕೊಡಿಸುವುದು ಎಂಬುದರ ಬಗ್ಗೆ ಕೂಡ ಅಧಿಕಾರಿಗಳು ತಲೆಕೆಡಿಸಿಕೊಂಡಿದ್ದರು.

ಈ ಮಧ್ಯೆ 35 ವರ್ಷದ ಗಂಡಾನೆ ಆರೋಗ್ಯವಾಗಿದ್ದು, ಕಾಲಿಗೆ ಸೂಕ್ತ ಚಿಕಿತ್ಸೆ ನೀಡಿದರೆ ಆನೆಯ ಆರೋಗ್ಯ ಸುಧಾರಣೆಯಾಗಲಿದೆ ಎಂದು ವೈದ್ಯರಾದ ಡಾ.ಮುಜೀಬ್ ಅವರು ಸಚಿವರಿಗೆ ತಿಳಿಸಿದ್ದರು. ಆದರೆ ಇದೀಗ ಆನೆ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಅಂತ್ಯಸಂಸ್ಕಾರ: ಕಾಡಾನೆಯ ಮರಣೋತ್ತರ ಪರೀಕ್ಷೆಯನ್ನು ಡಾ.ಮುಜೀಬ್ ನೆರವೇರಿಸಿದರು. ಮಾವುತರು ಮತ್ತು ಅರಣ್ಯ ಸಿಬ್ಬಂದಿ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಆನೆಕಾಡಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು. ಈ ಸಂದರ್ಭ ಸೋಮವಾರಪೇಟೆ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಚಿಣ್ಣಪ್ಪ, ಕುಶಾಲನಗರ ವಲಯ ಅರಣ್ಯಾಧಿಕಾರಿ ಅರುಣ್, ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಡಿಸೋಜ, ರಂಜನ್ ಹಾಗೂ ಸಿಬ್ಬಂದಿ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !