ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಚುನಾವಣೆ ಬಹಿಷ್ಕರಿಸಲು ನಿರ್ಧಾರ

ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿ ರದ್ದುಪಡಿಸಲು ರೈತರು, ಪರಿಸರವಾದಿಗಳ ಒತ್ತಾಯ
Published : 31 ಮಾರ್ಚ್ 2024, 5:38 IST
Last Updated : 31 ಮಾರ್ಚ್ 2024, 5:38 IST
ಫಾಲೋ ಮಾಡಿ
Comments

ಶನಿವಾರಸಂತೆ: ಇಲ್ಲಿಗೆ ಸಮೀಪ ಇರುವ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಹೊಸಕೋಟೆ ಬೆಟ್ಟದಲ್ಲಿ ಗಣಿಗಾರಿಕೆಗೆ ನೀಡಿರುವ ಅನುಮತಿಯನ್ನು ರದ್ದುಪಡಿಸದೇ ಹೋದರೆ ಪ್ರಸಕ್ತ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಹೊಸೂರು ಗ್ರಾಮದಲ್ಲಿ ಶನಿವಾರ ನಡೆದ ರೈತರು ಮತ್ತು ಪರಿಸರವಾದಿಗಳ ಸಭೆ ನಿರ್ಣಯಿಸಿತು.

ಇದರೊಂದಿಗೆ, ಕೊಡಗು ಮತ್ತು ಹಾಸನ ಜಿಲ್ಲಾಧಿಕಾರಿಯೊಂದಿಗೆ ಸಭೆ ನಡೆಸಲು ಮನವಿ ಮಾಡಬೇಕು, ಗಣಿಗಾರಿಕೆಗೆ ಪರವಾನಗಿ ನೀಡಿರುವುದನ್ನು ತಕ್ಷಣವೇ ಒಂದು ವಾರದಲ್ಲಿ ತಡೆಯಬೇಕು ಎಂದೂ ತೀರ್ಮಾನಿಸಲಾಯಿತು. 

ಸಭೆಯಲ್ಲಿ ಮಾತನಾಡಿದ ಹಸಿರು ಸೇನೆಯ ಅಧ್ಯಕ್ಷ ಆರ್.ಪಿ.ವೆಂಕಟೇಶ್ ಮೂರ್ತಿ, ‘ಪಶ್ಚಿಮ ಘಟ್ಟಗಳ ಅರಣ್ಯ ಮತ್ತು ಬೆಟ್ಟಗಳನ್ನು ಉಳಿಸುವ ಕಾರ್ಯಗಳಲ್ಲಿ ರೈತರು ಪ್ರಮುಖ ಪಾತ್ರ ವಹಿಸಿದ್ದಾರೆ. ಆದರೆ, ಪರವಾನಗಿ ನೀಡುವ ವೇಳೆಯಲ್ಲಿ ಇಲ್ಲಿನ ಜನರನ್ನು ವಿಶ್ವಾಸಕ್ಕೆ ಪಡೆದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕೌಕೂಡಿ ಗ್ರಾಮದ ಕೃಷಿಕ ವಿಠ್ಠಲ್ ಮಾತನಾಡಿ, ‘ಜಿಲ್ಲಾಧಿಕಾರಿ ಅವರು ತಕ್ಷಣವೇ ಗಣಿಗಾರಿಕೆಯನ್ನು ನಿಲ್ಲಿಸಿದರೆ ಇಲ್ಲಿನ ಜನರ ಜೀವನ ಉಳಿಸಿದಂತೆ ಆಗುತ್ತದೆ’ ಎಂದರು.

ಹೋರಾಟ ಸಮಿತಿಯ ಉಸ್ತುವಾರಿ ಹೊಸೂರು ರಮೇಶ್ ಮಾತನಾಡಿ, ‘ಈಗಾಗಲೇ ಎಲ್ಲ ಮಾಹಿತಿಯನ್ನು ಜಿಲ್ಲಾಧಿಕಾರಿ ಅವರಿಗೆ, ಗಣಿಗಾರಿಕಾ ಇಲಾಖೆ ಹಾಗೂ ರಾಜ್ಯ ಸರ್ಕಾರಕ್ಕೆ ನೀಡಿದ್ದರೂ, ಇದುವರೆಗೆ ಯಾವುದೇ ಕ್ರಮಗಳನ್ನೂ ತೆಗೆದುಕೊಂಡಿಲ್ಲ. ಗಣಿಗಾರಿಕೆ ನಿಲ್ಲಿಸಲು ಕ್ರಮ ತೆಗೆದುಕೊಳ್ಳದಿದ್ದಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಇಲ್ಲಿನ ಮತದಾರರು ತೀರ್ಮಾನಿಸಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಎಚ್.ಟಿ.ಪುಟ್ಟೇಗೌಡ, ಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ ಮಂಜುನಾಥ, ಉಪಾಧ್ಯಕ್ಷೆ ಜಾನಕಿ, ಕಾವೇರಿ ಸೇನೆಯ ಹೊಸಬೀಡು ಶಶಿಕುಮಾರ್, ಕೂತಿ ಗ್ರಾಮದ ಅಧ್ಯಕ್ಷ ದಿವಾಕರ್, ರೈತ ಸಂಘದ ಮುಖಂಡರಾದ, ಕೆ.ಎಂ.ದಿನೇಶ್, ಎಸ್.ಎಸ್.ಬಸಪ್ಪ, ಹೊಸಕೋಟೆ ಪುಟ್ಟಸ್ವಾಮಿಗೌಡ, ಸಂತಳ್ಳಿ ತಿಮ್ಮಣ್ಣ, ಹಾಸನದ ಹಸಿರು ಸೇನೆ ಪ್ರತಿಷ್ಠಾಪನದ ಪದಾಧಿಕಾರಿಗಳಾದ ಪುರುಷೋತ್ತಮ್, ಬಾಲರಾಜ್, ಬೆಳಗಾರರ ಸಂಘದ ಅಧ್ಯಕ್ಷ ರಾಮಚಂದ್ರ,  ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT