ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಮವಾರಪೇಟೆ: ‘ಕನ್ನಡ ಸಾಹಿತ್ಯ ಮನೆ ಮನೆಗೆ ತಲುಪಿಸಿ’

ಗೌಡಳ್ಳಿಯಲ್ಲಿ ನಡೆದ ಸೋಮವಾರಪೇಟೆ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ
Last Updated 12 ಫೆಬ್ರುವರಿ 2023, 5:07 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ಮಕ್ಕಳಿಗೆ ಸಾಹಿತ್ಯ ಪ್ರೇಮವನ್ನು ಬೆಳೆಸುವ ಮೂಲಕ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಲು ಶ್ರಮಿಸಬೇಕು. ಸಾಹಿತ್ಯ ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕು. ಮನೆ ಮನೆಗಳಲ್ಲಿ ಕವಿಗೋಷ್ಠಿ ನಡೆಸಬೇಕು’ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಕರೆ ನೀಡಿದರು.

ತಾಲ್ಲೂಕಿನ ಗೌಡಳ್ಳಿಯ ಶ್ರೀ ಬಾಲಗಂಗಾಧರನಾಥ ಸ್ವಾಮಿ ಮುಖ್ಯ ವೇದಿಕೆಯಲ್ಲಿ ನಡೆಯುತ್ತಿರುವ 8ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ‘ಕನ್ನಡವನ್ನು ನೆನಪಿಸುವ ಕಾರ್ಯಕ್ರಮ ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಬಾರದು. ಅದು ನಿತ್ಯ ನಿರಂತರ ಆಗಬೇಕು. ಸಾಹಿತ್ಯವನ್ನು ಮಕ್ಕಳಿಂದಲೇ ಬೆಳೆಸಬೇಕೆನ್ನುವ ಉದ್ದೇಶದಿಂದ ಶ್ರೀಮಠದ ಆಶಯದಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ಮಕ್ಕಳ ಸಾಹಿತ್ಯ ಪರಿಷತ್‌ನ ಘಟಕವನ್ನು ತೆರೆದಿದ್ದೇವೆ’ ಎಂದು ಹೇಳಿದರು.

ಸಮ್ಮೇಳನ ಉದ್ಘಾ ಟಿಸಿದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ‘ಗ್ರಾಮಗಳಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದರಿಂದ ಭಾಷಾ ಬೆಳವಣಿಗೆಗೆ ಸಹಕಾರಿಯಾಗುವುದು’ ಎಂದು ಹೇಳಿದರು.

‘ಗ್ರಾಮೀಣ ಭಾಗದಲ್ಲಿ ಇಂದಿಗೂ ಕನ್ನಡ ಭಾಷೆ ಜೀವಂತವಾಗಿದೆ. ಇಂತಹ ಸ್ಥಳಗಳಲ್ಲಿ ಸಮ್ಮೇಳನಗಳು ಹೆಚ್ಚಾಗಿ ನಡೆಯಬೇಕು. ಸಮ್ಮೇಳನಗಳು ಹಳ್ಳಿ ಕಡೆಗೆ ತೆರಳುತ್ತಿರುವುದು ಭಾಷೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರತಿಯೊಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸುವಂತಾಗಬೇಕು’ ಎಂದು ಕರೆ ನೀಡಿದರು.

ಮುಖ್ಯಭಾಷಣಕಾರರಾಗಿದ್ದ ಮೈಸೂರು ರತ್ನಪುರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಮಹಾದೇವಸ್ವಾಮಿ ಹೆಗ್ಗೂಠ್ಠಾರ ಮಾತನಾಡಿ, ‘ಕನ್ನಡವನ್ನು ಬೆಳೆಸುವ ಕೆಲಸ ಹಳ್ಳಿಗಳಿಂದ ಪ್ರಾರಂಭವಾಗಿದ್ದು, ಹಳ್ಳಿಗಳು ನಗರಗಳನ್ನು ಸಾಕುವ ಕೇಂದ್ರವಾಗಿವೆ. ಆದರೆ, ಇಂದು ಹಳ್ಳಿಯ ರೈತನ ಬೆನ್ನೆಲುಬು ಮುರಿದು ಹೋಗಿದೆ. ರೈತ ಬೆಳೆದ ಬೆಳೆಗೆ ಬೆಲೆ ಇಲ್ಲದೆ ಅವನ ಅಸ್ಮಿತೆಗೆ ಧಕ್ಕೆ ಬಂದಿದೆ. ಇಂದು ತಿನ್ನುವ ಆಹಾರ ಕಲುಷಿತಗೊಂಡಿದ್ದು, ಮನುಷ್ಯನ ಆರೋಗ್ಯವು ಹದಗೆಟ್ಟಿದೆ. ಭಾಷೆಗೆ ಮತ್ತು ಬದುಕಿಗೂ ನಿಕಟ ಸಂಬಂಧವಿದ್ದು, ನಮ್ಮನಾಳುವ ಸರ್ಕಾರಗಳು ಕನ್ನಡವನ್ನು ಅನ್ನದ ಭಾಷೆಯನ್ನಾಗಿ ಮಾಡಬೇಕಾಗಿದೆ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ಕನ್ನಡ ತೇರು ನಿರಂತರವಾಗಿ ಸಾಗಬೇಕು. ಬಹುಸಂಸ್ಕೃತಿಯ ಈ ನಾಡಿನಲ್ಲಿ ಕನ್ನಡಕ್ಕೆ ಹೆಚ್ಚಿನ ಆದ್ಯತೆ ಸಲ್ಲಬೇಕು. ಕನ್ನಡ ಪ್ರಾಚೀನ ಭಾಷೆಯಾಗಿದ್ದು, ಖಾಸಗೀಕರಣ, ಉದಾರೀಕರಣ ನಡುವೆಯೂ ಭಾಷೆ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಸಾಹಿತ್ಯ ಪರಿಷತ್ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಮ್ಮೇಳನಗಳನ್ನು ನಡೆಸಿ ಯಶಸ್ವಿಯಾಗಿದೆ’ ಎಂದರು

ಸಾಹಿತಿ ಬೆಸ್ಸೂರು ಮೋಹನ್ ಪಾಳೇಗಾರ್ ಬರೆದ ‘ವಲಸೆ ಹಕ್ಕಿಯ ಹಾಡುಪಾಡು’ ಮತ್ತು ಲೇಖಕಿ ಜಲಕಾಳಪ್ಪ ಬರೆದ ‘ಭರವಸೆಯ ಬೆಳಕು’ ಪುಸ್ತಕಗಳನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಬಿಡುಗಡೆ ಮಾಡಿದರು.

‘ಯುವ ಪೀಳಿಗೆ ಕನ್ನಡ ಧ್ವಜವನ್ನು ಹಿಡಿಯುವ ತಯಾರಿಯನ್ನು ಹಿರಿಯರು ಮಾಡಬೇಕಾಗಿದೆ. ಕೊಡಗಿನಲ್ಲಿ ಸಾಕಷ್ಟು ಮಹಿಳಾ ಬರಹಗಾರರು ಸೃಷ್ಟಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಪಾರವಾಗಿದೆ’ ಎಂದರು.

ವೇದಿಕೆಯಲ್ಲಿ ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್, ಮುಖಂಡ ವಿ.ಎಂ.ವಿಜಯ, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ.ಮಲ್ಲಿಕಾ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೆ.ಎಂ.ಬಿಂದು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್, ಕ.ಸಾ.ಪ. ಕಾರ್ಯದರ್ಶಿ ಜ್ಯೋತಿ ಅರುಣ್ ಇದ್ದರು.

‘ಶಾಲೆಗಳಲ್ಲಿ ಕನ್ನಡಕ್ಕೆ ಆದ್ಯತೆ ಇರಲಿ’

‘ಸಮ್ಮೇಳನ ಏಕತೆಯ ಸಂಕೇತ. ಕನ್ನಡಾಭಿಮಾನಿಗಳನ್ನು, ಸಾಹಿತ್ಯಾಸಕ್ತರನ್ನು, ಕಲಾವಿದರನ್ನು ಒಂದುಗೂಡಿಸಿ, ಪ್ರೇರಣೆ ಹಾಗೂ ಜಾಗೃತಿ ಮೂಡಿಸಿ, ಕನ್ನಡ ಸಂಸ್ಕೃತಿಯನ್ನು ಬಿಂಬಿಸುತ್ತದೆ’ ಎಂದು ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರ ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಅವರು, ‘ಸರ್ಕಾರಿ ಕನ್ನಡ ಶಾಲೆಗಳನ್ನು ಅಭಿವೃದ್ಧಿಪಡಿಸುವ ಮೂಲಕವೂ ಭಾಷೆಯನ್ನು ಅರಳಿಸಬಹುದು. ಆದರೆ, ಸರ್ಕಾರಿ ಶಾಲೆಗಳಲ್ಲೂ ಆಂಗ್ಲ ಮಾಧ್ಯಮ ಆರಂಭಿಸಿದ್ದರಿಂದ ಕನ್ನಡ ಭಾಷೆಯ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿದೆ. ಇಂಗ್ಲಿಷ್ ಭಾಷೆ ಇರಲಿ. ಆದರೆ, ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಎಲೆಮರೆ ಕಾಯಿಯಂತಿರುವ ಗ್ರಾಮೀಣ ಭಾಗದ ಮಹಿಳಾ ಬರಹಗಾರರನ್ನು ಗುರುತಿಸಿ ಮಾರ್ಗದರ್ಶನ ನೀಡಬೇಕು. ಮಹಿಳಾ ಶೋಷಣೆ, ದೌರ್ಜನ್ಯಗಳಿಗೆ ಇತಿಶ್ರೀ ಹಾಡಬೇಕು. ಸಂಘಟಿತ ಮಹಿಳೆಯರು ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು’ ಎಂದರು.

‘ಸುಮಧುರ, ಸುಂದರ, ಸರಳ ಸಮೃದ್ಧ ಪ್ರಾಚೀನ ಭಾಷೆ ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಗೌರವಾದಾರಗಳು ದೊರೆತಿವೆ. ಸಮಕಾಲೀನ ಸಾಹಿತಿಗಳು, ಸಾಹಿತ್ಯ ಕೃಷಿಯ ಮೂಲಕ ನಾಡಿನ, ರಾಷ್ಟ್ರದ ಗಮನ ಸೆಳೆದಿದ್ದಾರೆ. ಕನ್ನಡಕ್ಕೆ 8 ಜ್ಞಾನಪೀಠ ಪ್ರಶಸ್ತಿಯ ಗರಿ ಮುಡಿಗೇರಿದ್ದು, ಭಾರತದ ಇತರ ಭಾಷೆಗಳ ಜನರು ವಿಸ್ಮಯದ ಕಣ್ಣಿನಿಂದ ನೋಡುವಂತಾಗಿದೆ’ ಎಂದು ಹೇಳಿದರು.

‘ಕನ್ನಡಾಭಿಮಾನಿಗಳೇ, ಕನ್ನಡ ಮನಸ್ಸುಗಳೇ, ಸಾಹಿತ್ಯ ಸಮ್ಮೇಳನದ ಮೂಲಕ ಗಡಿ ಗ್ರಾಮಗಳಲ್ಲಿ ಕನ್ನಡದ ಕಂಪನ್ನು ಹರಡಲಾಗಿದೆ. ಭಾಷೆ ಸಾಹಿತ್ಯದ ವಿಚಾರ ಗೋಷ್ಠಿಗಳ ಹಾಗೂ ಕವಿಗೋಷ್ಠಿಯ ಮೂಲಕ ನಿಮಗೆಲ್ಲಾ ಸಹೃದಯರಿಗೆಲ್ಲಾ ರಸದೌತಣ ಉಣಬಡಿಸಲಿದೆ. ಸವಿಯೋಣ, ಭಾಷಾ ಪ್ರೇಮ ಅಭಿವ್ಯಕ್ತಪಡಿಸೋಣ’ ಎಂದರು.

‘ಹೊನ್ನ ಸಿರಿ’ ಸ್ಮರಣ ಸಂಚಿಕೆ ಬಿಡುಗಡೆ

ಮುಖಂಡ ಬಿ.ಎ.ಜೀವಿಜಯ ಸಮ್ಮೇಳನದ ಸ್ಮರಣ ಸಂಚಿಕೆ ‘ಹೊನ್ನ ಸಿರಿ’ ಬಿಡುಗಡೆ ಮಾಡಿದರು.
‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಕನ್ನಡ ಭಾಷೆ ಇಂದು ಸಂಕಷ್ಟದತ್ತ ಸಾಗುತ್ತಿದೆ. ದೇಶದಲ್ಲಿ 5600 ಭಾಷೆಗಳಿದ್ದರೂ, ಹಲವು ನಾಶ ಹೊಂದಿವೆ. ಅನ್ಯ ಭಾಷಿಕರಿಗೆ ತಮ್ಮ ಭಾಷೆ ಉಳಿಸಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಿದರೂ, ನಮ್ಮಲ್ಲಿ ಭಾಷಾಭಿಮಾನದ ಕೊರತೆ ಕಾಡುತ್ತಿದೆ’ ಎಂದು ಹೇಳಿದರು.
‘ಇಂದಿಗೂ ನಮ್ಮನ್ನು ಗಡಿ ಸಮಸ್ಯೆ ಕಾಡುತ್ತಿದೆ. ಸಾಕಷ್ಟು ಭೂ ಪ್ರದೇಶಗಳು ಅನ್ಯ ರಾಜ್ಯಗಳ ಪಾಲಾಗಿದೆ. ನಮ್ಮ ಮಾತೃಭಾಷೆಯನ್ನು ಉಳಿಸಿ ಬೆಳೆಸಲು ಎಲ್ಲರೂ ಶ್ರಮಪಡಬೇಕಾಗಿದೆ. ಇಂತಹ ಸಂದರ್ಭದಲ್ಲಿ ನಮ್ಮನಾಳುವ ಆಡಳಿತ ವ್ಯವಸ್ಥೆ ಹಿಂದಿ ಭಾಷೆಯನ್ನು ಹೇರುವ ಮೂಲಕ ಭಾಷಾ ಸ್ವತಂತ್ರಕ್ಕೆ ಧಕ್ಕೆ ಉಂಟು ಮಾಡುತ್ತಿರುವುದು ದುರಂತ. ನಮ್ಮ ಭಾಷೆ ಉಳಿವಿಗೆ ಎಲ್ಲರೂ ಮುಂದಾಗಬೇಕು’ ಎಂದರು.

ಮೆರವಣಿಗೆಗೆ ಕಲಾ ತಂಡಗಳ ಮೆರುಗು, ಕನ್ನಡಾಭಿಮಾನ ಮೆರೆದ ಜನರು

ಸಾಹಿತ್ಯ ಸಮ್ಮೇಳನಕ್ಕೆ ಗೌಡಳ್ಳಿ, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸೇರಿದಂತೆ ತಾಲ್ಲೂಕಿನ ಹಲವೆಡೆಗಳಿಂದ ನೂರಾರು ಕನ್ನಡಾಭಿಮಾನಿಗಳು ಪಾಲ್ಗೊಂಡು ತಮ್ಮ ಅಭಿಮಾನ ಮೆರೆದರು.
ಬೆಳಿಗ್ಗೆ 8 ಗಂಟೆಗೆ ಸೋಮವಾರಪೇಟೆ ತಹಶೀಲ್ದಾರ್ ಎಸ್.ಎನ್.ನರಗುಂದ ಬಿಜಿಎಸ್ ಶಾಲಾ ಆವರಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ. ಕೇಶವಕಾಮತ್ ಕನ್ನಡ ಧ್ಜಜ ಮತ್ತು ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಡಿ.ವಿಜೇತ್ ಕನ್ನಡ ಪರಿಷತ್ ಧ್ವಜಾರೋಹಣ ನೆರವೇರಿಸಿದರು.
ಐತಿಹಾಸಿಕ ಹಿನ್ನೆಲೆಯುಳ್ಳ ದೊಡ್ಡಮಳ್ತೆಯ ಹೊನ್ನಮ್ಮನ ಕೆರೆ ದೇವಾಲಯದಿಂದ ಗ್ರಾಮೀಣ ಯುವಕರು ಕನ್ನಡ ಬಾವುಟದೊಂದಿಗೆ ಬೈಕ್ ಜಾಥಾ ನಡೆಸಿ ಗಮನ ಸೆಳೆದರು. ಬೀಟಿಕಟ್ಟೆ ಜಂಕ್ಷನ್ ಸಮಾವೇಶಗೊಂಡ ಕನ್ನಡಾಭಿಮಾನಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಮೆರುಗು ತಂದರು.
ಸಮ್ಮೇಳನಾಧ್ಯಕ್ಷರಾದ ಶ.ಗ.ನಯನತಾರಾ, ಸ್ಥಳೀಯ ಶಾಸಕರು, ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಅಧ್ಯಕ್ಷ ಎಸ್.ಡಿ.ವಿಜೇತ್ ಅವರನ್ನು ತೆರದ ವಾಹನದಲ್ಲಿ ಕುಳ್ಳರಿಸಿ, ಬಿಟಿಕಟ್ಟೆ ಗ್ರಾಮದ ಕೆನರಾ ಬ್ಯಾಂಕ್ ಎದುರಿನಿಂದ ಮೆರವಣಿಗೆ ಮೂಲಕ ಪ್ರಮುಖ ಬೀದಿಗಳಲ್ಲಿ ಕರೆದೊಯ್ಯಲಾಯಿತು.
ಪೂರ್ಣಕುಂಭ ಹೊತ್ತ ಮಹಿಳೆಯರು, ವಿವಿಧ ಸಾಂಸ್ಕೃತಿಕ ಕಲಾ ತಂಡಗಳು, ಶಾಲಾ ವಿದ್ಯಾರ್ಥಿಗಳ ಬ್ಯಾಂಡ್ ಜನರನ್ನು ಆಕರ್ಷಿಸಿತು. ಮೆರವಣಿಗೆ ಸಂದರ್ಭ ಗಣ್ಯರ ನೆನಪಿನ ವಿವಿಧ ದ್ವಾರಗಳನ್ನು ಗಣ್ಯರು ಉದ್ಘಾಟಿಸಿದರು. ಸಮ್ಮೇಳನದ ಆವರಣದಲ್ಲಿನ ವಿವಿಧ ಅಂಗಡಿ ಮಳಿಗೆಗಳನ್ನು ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು. ಈ ಸಂದರ್ಭ ಪ್ರಮುಖರಾದ ಎಸ್.ಜಿ. ಮೇದಪ್ಪ, ಪಿ.ಕೆ. ರವಿ, ಬಿ.ಎಸ್. ಸುಂದರ್, ವಿವಿಧ ಸ್ವ–ಸಹಾಯ ಸಂಘದ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT