ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬ್ಬಂದಿ ಕೊರತೆ ನಡುವೆಯೂ ಸೆಸ್ಕ್‌ ಸಾಹಸ

ಮಳೆಗಾಲದಲ್ಲಿ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ನೌಕರರು, ಗುಣಮಟ್ಟದ ವಿದ್ಯುತ್ ಪೂರೈಕೆ ಇಲ್ಲ
Last Updated 7 ನವೆಂಬರ್ 2022, 7:00 IST
ಅಕ್ಷರ ಗಾತ್ರ

ಮಡಿಕೇರಿ: ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಕೊಡಗಿನ ಹವಾಗುಣ, ಭೌಗೋಳಿಕತೆ ತೀರಾ ಭಿನ್ನ. ಪ್ರವಾಸಿಗರ ಪಾಲಿಗೆ ಇದು ಸ್ವರ್ಗದಂತೆ ಕಂಡು ಬಂದರೆ ಇಲ್ಲಿ ಕಾರ್ಯನಿರ್ವಹಿಸುವವರಿಗೆ ಸವಾಲುಗಳ ಜಿಲ್ಲೆಯಾಗಿ ಕಾಣುತ್ತದೆ. ಅದರಲ್ಲೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ನೌಕರರು ಕೊಡಗೆಂದರೆ ‘ಶಿಕ್ಷೆ’ ಎಂದೇ ಬಹುತೇಕರು ಭಾವಿಸುತ್ತಾರೆ.

ಮಳೆಗಾಲದಲ್ಲಿ ಕಾರ್ಯ ನಿರ್ವಹಿಸುವಾಗ ಹಲವು ಸಂದರ್ಭಗಳಲ್ಲಿ ಜೀವವನ್ನು ಪಣಕ್ಕಿಟ್ಟೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಹಾಗಾಗಿಯೇ, ಬಹುತೇಕ ಮಂದಿ ಹೊರಜಿಲ್ಲೆಗಳಿಂದ ಇಲ್ಲಿಗೆ ಬಂದು ಲೈನ್‌ಮೆನ್‌ ಹಾಗೂ ಇತರೆ ಕೆಲಸಗಳನ್ನು ಮಾಡಲು ಬಯಸುವುದಿಲ್ಲ. ಶೇ 50ರಷ್ಟು ಹುದ್ದೆಗಳು ಖಾಲಿ ಇವೆ. ಕೆಲಸಗಾರರನ್ನು ಹೊಂದಿಸಿಕೊಳ್ಳುವುದೇ ಅಧಿಕಾರಿಗಳಿಗೆ ಬಹುದೊಡ್ಡ ಸವಲಾಗಿದೆ.

ಪ್ರಸಕ್ತ ಸಾಲಿನ ಮುಂಗಾರಿನಲ್ಲಿ ಸುರಿದ ಧಾರಾಕಾರ ಮಳೆಗೆ ಜುಲೈ 15ರಂದು ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ಸಮೀಪ ಹೊಳೆ ಮಧ್ಯದ ಮುಳ್ಳುಪೊದೆಯಲ್ಲಿ ಬೆಳೆದಿದ್ದ ಬಿದಿರಿನ ಬೊಂಬು 11 ಕೆ.ವಿ.ಸಾಮರ್ಥ್ಯದ ವಿದ್ಯುತ್ ಲೈನಿಗೆ ಸಿಲುಕಿತು. ಇದರಿಂದ ಪರಿಹಾರ ಕೇಂದ್ರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಯಿತು. ತುಂಬಿ ಹರಿಯುತ್ತಿದ್ದ ಕದಲೂರು ಹೊಳೆಯಲ್ಲಿ ಲೈಫ್ ಜಾಕೆಟ್‌ಗಳನ್ನು ಹಾಕಿಕೊಂಡು ದೋಣಿಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ನೆರವಿನೊಂದಿಗೆ ಅತ್ಯಂತ ಕ್ಲಿಷ್ಟ ಕಾರ್ಯಾಚರಣೆ ನಡೆಸಿದ ಸೆಸ್ಕ್ ಸಿಬ್ಬಂದಿ ದುರಸ್ತಿ ಕಾರ್ಯ ನಡೆಸಿದರು. ಇಂತಹ ಕಾರ್ಯಾಚರಣೆಗಳಿಗೆ ಕೊಡಗು ಜಿಲ್ಲೆಯಲ್ಲೆ ಲೆಕ್ಕವೇ ಇಲ್ಲ.

ಸದ್ಯ, ಪ್ರಸಕ್ತ ಮುಂಗಾರಿನಲ್ಲಿ ನೆಲಕ್ಕುರಳಿದ ಎಲ್ಲ ವಿದ್ಯುತ್ ಕಂಬಗಳನ್ನು ಹಾಗೂ ಕೆಟ್ಟು ನಿಂತ ವಿದ್ಯುತ್ ಪರಿವರ್ತಕಗಳನ್ನು ಸಿಬ್ಬಂದಿ ಬದಲಾಯಿಸಿದ್ದಾರೆ. 24 ಗಂಟೆಗಳಲ್ಲೇ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸುತ್ತಿರುವುದು ವಿಶೇಷ. ಜಿಲ್ಲೆಗೆ ಹೆಚ್ಚುವರಿಯಾಗಿ 97 ಸಂಖ್ಯೆಯ ತಾತ್ಕಾಲಿಕ ಗ್ಯಾಂಗ್ ಮ್ಯಾನ್‌ಗಳನ್ನು, ಹೆಚ್ಚುವರಿಯಾಗಿ 14 ಸಂಖ್ಯೆಯ ಪಿಕ್ ಅಪ್ ಜೀಪ್‍ಗಳನ್ನು ಒದಗಿಸಲಾಗಿದೆ.

ಬಾಳೆಲೆ ‍ಉಪಕೇಂದ್ರ ಪೂರ್ಣಗೊಂಡರೆ ಸಮಸ್ಯೆ ಮಾಯ

ಗೋಣಿಕೊಪ್ಪಲು ಭಾಗದಲ್ಲಿ ಬಾಳೆಲೆಯಲ್ಲಿ 66/11 ಕೆ.ವಿ ಸಾಮರ್ಥ್ಯದ ವಿದ್ಯುತ್ ಉಪಕೇಂದ್ರ ಪೂರ್ಣಗೊಂಡಲ್ಲಿ ಬಹುತೇಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಗಳಿವೆ.

ಸದ್ಯ, ಗೋಣಿಕೊಪ್ಪಲು ಸೆಸ್ಕ್ ಉಪ ವಿಭಾಗ ಕೇಂದ್ರಕ್ಕೆ ಒಳಪಟ್ಟ ಬಾಳೆಲೆ, ಶ್ರೀಮಂಗಲ ಉಪ ಕೇಂದ್ರಗಳಲ್ಲಿ ವಿದ್ಯುತ್ ಸಂಪರ್ಕ ಉತ್ತಮವಾಗಿದೆ. ಇದೀಗ ಶ್ರೀಮಂಗಲದಲ್ಲಿ ಕೆಪಿಟಿಸಿಎಲ್ ಕಚೇರಿ ಕಾರ್ಯಾರಂಭ ಮಾಡಿದೆ. ಬಾಲೆಳೆಯಲ್ಲಿ ಪ್ರಕ್ರಿಯೆ ಶುರುವಾಗಿದೆ. ಕೆಪಿಟಿಸಿಎಲ್‌ನವರು ಭೂಮಿ ಖರೀದಿಸಿ ಕೇಂದ್ರ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸುತ್ತಿದ್ದಾರೆ.

‘ಕಳೆದ ಮಳೆಗಾಲದಲ್ಲಿ ದಕ್ಷಿಣ ಕೊಡಗಿನ ಎಲ್ಲ ಕಡೆ ವಿದ್ಯುತ್ ಕಂಬಗಳು ಬಿದ್ದಿದ್ದವು. ವಿದ್ಯುತ್ ಪರಿವರ್ತಕಗಳು ಹಾಳಾಗಿದ್ದವು. ಈಗ ಅವುಗಳನ್ನೆಲ್ಲ ಬದಲಾಯಿಸಲಾಗಿದೆ’ ಎಂದು ಗೋಣಿಕೊಪ್ಪಲುವಿನ ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನೀಲ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕುಶಾಲನಗರದಲ್ಲಿ ಎರಡು ಜೀವಹಾನಿ

ಕುಶಾಲನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಕೆಲವು ತಿಂಗಳುಗಳ ಹಿಂದೆ ವಿದ್ಯುತ್ ಆಘಾತದಿಂದ ಇಬ್ಬರು ಮೃತಪಟ್ಟಿದ್ದಾರೆ. ರಂಗಸಮುದ್ರ ಹಾಗೂ ನಂಜರಾಯಪಟ್ಟಣ ಗ್ರಾಮದ ಕಾಫಿ ತೋಟಗಳ ಮಧ್ಯೆ 11ಕೆವಿ ವಿದ್ಯುತ್ ಸರಬರಾಜು ಲೈನ್ ಹಾದು ಹೋಗಿದ್ದು, ಕಳೆದ ಕೆಲವು ತಿಂಗಳುಗಳ ಹಿಂದೆ ಕಾಫಿ ತೋಟದಲ್ಲಿ ಅಲ್ಯುಮಿನಿಯಂ ಏಣಿ ಬಳಸಿ ಮೆಣಸು ಕುಯ್ಯುವ ಸಂದರ್ಭ ಏಣಿ ವಿದ್ಯುತ್ ಲೈನ್‌ಗೆ ತಾಗಿ ಇಬ್ಬರು ರೈತರು ಮೃತಪಟ್ಟಿದ್ದರು. ವಿದ್ಯುತ್ ಲೈನ್‌ ಹಾದು ಹೋಗಿರುವ ಕಡೆ ರೈತರ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ಸೆಸ್ಕ್ ಇನ್ನೂ ಜಾಗೃತಿ ಮೂಡಿಸಿಲ್ಲ ಎಂಬುದಕ್ಕೆ ಈ ಘಟನೆ ನಿರ್ದಶನ ಎನಿಸಿದೆ.

‘ಪ್ರತಿ ವರ್ಷ ಮಳೆಗಾಲದಲ್ಲಿ ಗಾಳಿ‌ ಮಳೆಯಿಂದ ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗುತ್ತಿದೆ. ಸೆಸ್ಕ್ ಸಿಬ್ಬಂದಿ ಎಲ್ಲೆ ವಿದ್ಯುತ್ ಕಂಬ, ಲೈನ್‌ಗಳಿಗೆ ಹಾನಿಯಾದರೂ ಮಳೆಯನ್ನು ಲೆಕ್ಕಿಸದೆ ದುರಸ್ತಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ವಿದ್ಯುತ್ ಕಂಬ, ಲೈನ್ ಹಾನಿಯಿಂದ ಅಪಾರ ‌ನಷ್ಟ ಉಂಟಾಗಿದೆ’ ಎಂದು ಸೆಸ್ಕ್‌ ಎಂಜಿನಿಯರ್ ವಿನಯ್ ತಿಳಿಸಿದರು.

ಶನಿವಾರಸಂತೆಯಲ್ಲಿ ಜಾಗೃತಿ ಮೂಡಿಸುತ್ತಿರುವ ಸೆಸ್ಕ್

ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಮಳೆಗಾಲದಲ್ಲಿ ಗಾಳಿ-ಮಳೆಗೆ ದುಃಸ್ಥಿತಿಗೀಡಾಗುತ್ತಿದ್ದ ವಿದ್ಯುತ್ ಕಂಬ, ತಂತಿ, ಪರಿವರ್ತಕಗಳನ್ನು 24 ಗಂಟೆಯೊಳಗೇ ಸರಿಪಡಿಸಲಾಗುತ್ತಿದ. ರೈತರ ತೋಟ-ಗದ್ದೆಗಳ ಮಧ್ಯೆ ವಿದ್ಯುತ್ ಕಂಬಗಳಿದ್ದರೂ ತಂತಿಗಳು ಹಾದು ಹೋಗಿದ್ದರೂ ಅವಘಡ ಸಂಭವಿಸಿಲ್ಲ. ಸೆಸ್ಕ್ ಅಧಿಕಾರಿ, ಮೇಲ್ವಿಚಾರಕರು, ಸಿಬ್ಬಂದಿ ಆಗಾಗ್ಗೆ ಭೇಟಿ ನೀಡಿ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ನಿರ್ವಹಣೆ: ಕೆ.ಎಸ್.ಗಿರೀಶ್

ಮಾಹಿತಿ:

ಜೆ.ಸೋಮಣ್ಣ, ರಘು ಹೆಬ್ಬಾಲೆ,

ಡಿ.ಪಿ.ಲೋಕೇಶ್,

ಶ.ಗ.ನಯನತಾರಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT