ಮಡಿಕೇರಿ: ಇಲ್ಲಿಗೆ ಸಮೀಪದ ಅಪ್ಪಂಗಳ ಗ್ರಾಮದಲ್ಲಿರುವ, ಭಾರತೀಯ ಕೃಷಿ ಅನುಸಂಧಾನ ಪರಿಷತ್ (ಐಸಿಎಆರ್)ನ ಭಾರತೀಯ ಸಾಂಬಾರ ಬೆಳೆಗಳ ಸಂಶೋಧನಾ ಸಂಸ್ಥೆಯ ಪ್ರಾದೇಶಿಕ ಕೇಂದ್ರವು ಅಭಿವೃದ್ಧಿಪಡಿಸಿರುವ, ಬರ ಸಹಿಷ್ಣುತೆಯ ವಿಶಿಷ್ಟ ಲಕ್ಷಣಗಳುಳ್ಳ 2 ಏಲಕ್ಕಿ ತಳಿಗಳನ್ನು ಪ್ರಧಾನಿ ನರೇಂದ್ರ ಮೋದಿ ಆ.11ರಂದು ನವದೆಹಲಿಯಲ್ಲಿ ಬಿಡುಗಡೆ ಮಾಡಲಿದ್ದಾರೆ.
ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಎಸ್.ಜೆ.ಅಂಕೇಗೌಡ ಮತ್ತು ಅವರ ತಂಡವು ‘ಐಐಎಸ್‌ಆರ್ ಮನುಶ್ರೀ’ ಮತ್ತು ‘ಐಐಎಸ್‌ಆರ್ ಕಾವೇರಿ’ ತಳಿಗಳನ್ನು ಅಭಿವೃದ್ಧಿಪಡಿಸಿದ್ದು, ಅವು ಕಡಿಮೆ ನೀರಿನಲ್ಲೂ ಕಾಯಿಗಟ್ಟುವ ಹಾಗೂ ದಪ್ಪ ಗಾತ್ರದ ಕಾಯಿಗಳನ್ನು ಬಿಡುವ ಸಾಮರ್ಥ್ಯ ಹೊಂದಿವೆ.
ಸ್ಥಿರ ಇಳುವರಿ ನೀಡುವಂತಹ ‘ಐಐಎಸ್ಆರ್ ಮನುಶ್ರೀ’ ತಳಿಯು ಹೆಕ್ಟೇರ್‌ಗೆ 360ರಿಂದ 550 ಕೆ.ಜಿ ಇಳುವರಿ ನೀಡುತ್ತದೆ. ಸಾಮಾನ್ಯ ಏಲಕ್ಕಿಗಿಂತಲೂ ಶೇ 50ರಷ್ಟು ಹೆಚ್ಚು ಗಾತ್ರವನ್ನು ಹೊಂದಿದ್ದು, ಕರ್ನಾಟಕ ಮತ್ತು ಕೇರಳದಲ್ಲಿ ಬೆಳೆಯಬಹುದು.
ಹೆಚ್ಚು ಸಾಂದ್ರವಾಗಿ ಕಾಯಿಗಳನ್ನು ಬಿಡುವ ‘ಐಐಎಸ್ಆರ್ ಕಾವೇರಿ’ ತಳಿಯು, ಸಾಮಾನ್ಯ ಏಲಕ್ಕಿಗಿಂತಲೂ ಶೇ 70ರಷ್ಟು ಹೆಚ್ಚು ಗಾತ್ರ ಹೊಂದಿದ್ದು, ಹೆಕ್ಟೇರ್‌ಗೆ 308ರಿಂದ 482 ಕೆ.ಜಿ ಇಳುವರಿ ನೀಡುತ್ತದೆ. ಇದು ಕರ್ನಾಟಕದಲ್ಲಿ ಬೆಳೆಯಲು ಹೆಚ್ಚು ಸೂಕ್ತ.
‘ಸಾಂಪ್ರದಾಯಿಕವಾಗಿ ಏಲಕ್ಕಿ ಬೆಳೆಯುವ ಪ್ರದೇಶಗಳನ್ನು ಹೊರತುಪಡಿಸಿ, ಬೇರೆ ಪ್ರದೇಶಗಳ ಯುವ ಕೃಷಿಕರು ಏಲಕ್ಕಿ ಬೆಳೆಯತ್ತ ಆಸಕ್ತಿ ತೋರಿದ್ದಾರೆ. ಬೇಸಿಗೆಯಲ್ಲಿ ಬೆಳೆ ತೇವಾಂಶ ಕಡಿಮೆ ಇರುವ ಅಂಥ ಪ್ರದೇಶಗಳಲ್ಲಿ ಹೊಸ ತಳಿ ಬೆಳೆಯಬಹುದು’ ಎಂದು ಅಂಕೇಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಂದಿನ ಮಾರುಕಟ್ಟೆಯಲ್ಲಿ ಆಕರ್ಷಕ ಹಸಿರು ಬಣ್ಣ ಮತ್ತು ದಪ್ಪ ಕಾಯಿಗಳನ್ನು ಹೊಂದಿರುವ ಏಲಕ್ಕಿಗೆ ಹೆಚ್ಚಿನ ಪ್ರಾಶಸ್ತ್ಯ ಮತ್ತು ದರ ಸಿಗುತ್ತದೆ. ಹೀಗಾಗಿ, ದಪ್ಪ ಕಾಯಿಗಳನ್ನು ಹೊಂದಿರುವ ಐಐಎಸ್ಆರ್ ಕಾವೇರಿ ತಳಿಗೆ ಒಳ್ಳೆಯ ಬೆಲೆ ಸಿಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಸಾಂಬಾರ ಬೆಳೆಗಳ ರಾಣಿ’ ಎಂದು ಕರೆಯಲಾಗುವ ಏಲಕ್ಕಿಯು 80 ಮತ್ತು 90 ರ ದಶಕದ ಆರಂಭದಲ್ಲಿ ಕೊಡಗು, ಸಕಲೇಶಪುರ ಮತ್ತು ಚಿಕ್ಕಮಗಳೂರಿನ ರೈತರಿಗೆ ಪ್ರಮುಖ ಆದಾಯದ ಬೆಳೆಗಳಲ್ಲಿ ಒಂದಾಗಿತ್ತು. ಆದರೆ, ನಂತರದ ದಿನಗಳಲ್ಲಿ ಏರಿದ ನಿರ್ವಹಣಾ ವೆಚ್ಚ, ಕಾರ್ಮಿಕರು ಮತ್ತು ಮಳೆಯ ಕೊರತೆಯಿಂದ ನಿಧಾನವಾಗಿ ಬೆಳಗಾರರು ಏಲಕ್ಕಿಯಿಂದ ವಿಮುಖರಾದರು. ಈಗ ಮಳೆ ಕಡಿಮೆ ಇದ್ದರೂ ಬೆಳೆಯುವಂತಹ ಏಲಕ್ಕಿ ತಳಿಗಳನ್ನು ಅಪ್ಪಂಗಳದ ಭಾರತೀಯ ಸಂಬಾರ ಬೆಳೆಗಳ ಸಂಶೋಧನಾ ಸಂಸ್ಥೆ ಅಭಿವೃದ್ಧಿಪಡಿಸಿದೆ. ಈಗಾಗಲೇ ಈ ಕೇಂದ್ರವು 4 ಏಲಕ್ಕಿ ತಳಿಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆ ಮಾಡಿದೆ.
Highlights - ನೀರಿನಲ್ಲೂ ಕಾಯಿಗಟ್ಟುವ, ದಪ್ಪ ಗಾತ್ರದ ಕಾಯಿ ಹೆಕ್ಟೇರ್‌ಗೆ 360ರಿಂದ 550 ಕೆ.ಜಿ ಇಳುವರಿ ಕರ್ನಾಟಕದಲ್ಲಿ ಬೆಳೆಯಲು ಹೆಚ್ಚು ಸೂಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.