ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ಗ್ರಾಮೀಣ ರಸ್ತೆಗಳು: ಗುಂಡಿಗಳದ್ದೇ ದರ್ಬಾರು

Last Updated 7 ನವೆಂಬರ್ 2022, 6:04 IST
ಅಕ್ಷರ ಗಾತ್ರ

ನಾಪೋಕ್ಲು: ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಹುತೇಕ ರಸ್ತೆಗಳು ಗುಂಡಿಮಯವಾ ಗಿದ್ದು ವಾಹನ ಚಾಲಕರು, ಗ್ರಾಮೀಣ ಜನರು ಸಮಸ್ಯೆ ಎದುರಿಸುವಂತಾಗಿದೆ.

ಹದಗೆಟ್ಟ ರಸ್ತೆಯಲ್ಲಿ ಪ್ರತಿನಿತ್ಯ ಸಂಚರಿಸುವುದೇ ಸವಾಲಾಗಿ ಪರಿಣಮಿಸಿದೆ. ರಸ್ತೆ ಉದ್ದಕ್ಕೂ ಎಲ್ಲೆಲ್ಲೂ ಗುಂಡಿಗಳದ್ದೇ ದರ್ಬಾರು ಕೆಲವೆಡೆಯಂತೂ ಬರೀ ಜಲ್ಲಿ ಕಲ್ಲುಗಳೇ ಕಾಣುತ್ತಿವೆ. ಡಾಂಬರು ಎಂಬುದು ಕಾಣದಂತಾಗಿದೆ.

ಎಮ್ಮೆಮಾಡಿನ ಸುತ್ತಮುತ್ತಲಿನ ಗ್ರಾಮಗಳಾದ ಕುರುಳಿ, ಪಡಿಯಾಣಿ ಸೇರಿದಂತೆ ವಿವಿಧ ಗ್ರಾಮಗಳನ್ನು ಸಂಪರ್ಕಿಸುವ ಬಹುತೇಕ ರಸ್ತೆಗಳು ಗುಂಡಿಮಯವಾಗಿವೆ. ಇವೆಲ್ಲ ಗ್ರಾಮೀಣ ರಸ್ತೆಗಳಾದರೂ ವಾಹನಗಳ ಸಂಚಾರ ಸಾಕಷ್ಟು ಇದೆ. ಆಟೊಗಳು, ಖಾಸಗಿ ವಾಹನಗಳು, ವಿವಿಧ ಶಾಲಾ ವಾಹನಗಳು, ಖಾಸಗಿ ಬಸ್‌ಗಳು, ಸರ್ಕಾರಿ ಬಸ್ಸುಗಳು ಈ ರಸ್ತೆಯುದ್ದಕ್ಕೂ ಸಂಚರಿಸುತ್ತವೆ. ಎಮ್ಮೆಮಾಡು- ಪಡಿಯಾಣಿ ರಸ್ತೆಯಲ್ಲಿ ಸಾಗುವ ಬಸ್‌ಗಳಿಗೆ ಸಾಕಷ್ಟು ಪ್ರಯಾಣಿಕರು ಲಭಿಸಿದರೆ ನಾಪೋಕ್ಲುವಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆಯು ದೊಡ್ಡದಿದ್ದು ವಿವಿಧ ವಾಹನಗಳು ಅವರನ್ನು ಕರೆತರಲು ಈ ರಸ್ತೆಯಲ್ಲಿ ಸಾಗುತ್ತಿವೆ. ಬೆಳಗಿನ ಹೊತ್ತಿನಲ್ಲಿ ವಿವಿಧ ಖಾಸಗಿ ಶಾಲೆಗಳ ಬಸ್ಸುಗಳು ಈ ರಸ್ತೆಯಲ್ಲಿ ಸಾಗುತ್ತಿದ್ದು ವಿದ್ಯಾರ್ಥಿಗಳು ಭಯದಿಂದಲೇ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಮ್ಮೆಮಾಡು-ಕೂರುಳಿ, ಎಮ್ಮೆಮಾಡು -ಪಡಿಯಾಣಿ ರಸ್ತೆಗಳು ಸಂಪೂರ್ಣ ಗುಂಡಿಮಯವಾಗಿವೆ.

‘ನಾಪೋಕ್ಲು ಭಾಗಮಂಡಲ ರಸ್ತೆಯ ಎಮ್ಮೆಮಾಡು ಜಂಕ್ಷನ್‌ನಿಂದ ಎಮ್ಮೆಮಾಡು ದರ್ಗಾದವರೆಗಿನ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ ದರ್ಗಾದ ಸಮೀಪದ ರಸ್ತೆಯನ್ನು ಜೆಸಿಪಿಯಲ್ಲಿ ಅಗೆದು ಕಾಮಗಾರಿ ಪೂರ್ಣಗೊಳಿಸದೆ ಕೈ ಬಿಡಲಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ. ದರ್ಗಾದ ಎದುರು ಭಾಗದ ರಸ್ತೆಗೆ ₹ 20 ಲಕ್ಷದ ಕಾಂಕ್ರೀಟ್ ಕಾಮಗಾರಿ ನಿರ್ಮಿಸುವುದಾಗಿ ಹೇಳಿದ ಗುತ್ತಿಗೆದಾರರು ನಾಪತ್ತೆಯಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ರಸ್ತೆ ಕೆಲಸ ಆಗದೆ ಹಾಗೆ ಉಳಿದಿದೆ’ ಎಂದು ಆರೋಪಿಸುತ್ತಾರೆ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಯತ್ ಅಧ್ಯಕ್ಷ ಅಬೂಬಕರ್ ಸಖಾಫಿ.

‘ಈ ಗ್ರಾಮೀಣ ರಸ್ತೆಗಳಲ್ಲಿ ವಾಹನ ಗಳನ್ನು ಚಲಾಯಿಸುವ ಸವಾರರು ಹೈರಾಣಾಗುತ್ತಿದ್ದಾರೆ. ಮಳೆಗಾಲ ಮುಗಿದ ನಂತರ ರಸ್ತೆ ಹೊಂಡಗಳನ್ನು ಮುಚ್ಚುವುದು ಅತಿ ಅಗತ್ಯ ರಸ್ತೆ ದುಃಸ್ಥಿತಿ ಬಗ್ಗೆ ಈಚೆಗೆ ನಡೆದ ತಹಶೀಲ್ದಾರ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲೂ ಗಮನಸೆಳೆಯಲಾಗಿದೆ. ಮಳೆಯ ನೆಪ ಹೇಳಿಕೊಂಡು ಕಾಮಗಾರಿಯನ್ನು ವಿಳಂಬ ಮಾಡುವುದು ಸರಿಯಲ್ಲ’ ಎಂದು ಎಮ್ಮೆಮಾಡು ಜಮಾಯತ್ ಕಾರ್ಯದರ್ಶಿ ಅಶ್ರಫ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT