ಭಾನುವಾರ, ಜುಲೈ 25, 2021
22 °C
ಪಕ್ಷದಲ್ಲಿ ಗುಂಪುಗಾರಿಕೆ ಬಹಿರಂಗ, ವರಿಷ್ಠರ ಸೂಚನೆ ನಡುವೆಯೂ ತಣ್ಣಗಾಗದ ಅಸಮಾಧಾನ

ಕೊಡಗು: ಜಿಲ್ಲಾ ಕಾಂಗ್ರೆಸ್‌ ಈಗ ಒಡೆದ ಮನೆ

ಆದಿತ್ಯ ಕೆ.ಎ. Updated:

ಅಕ್ಷರ ಗಾತ್ರ : | |

ಮಡಿಕೇರಿ: ಕೊಡಗು ಜಿಲ್ಲೆಯ ಸಮಸ್ಯೆ ನಿವಾರಣೆ, ಕೊರೊನಾ ಸೋಂಕು ನಿಯಂತ್ರಣದಲ್ಲಿ ಒಗ್ಗೂಡಿ ಕೆಲಸ ಮಾಡಬೇಕಿದ್ದ ಹಾಗೂ ಆಡಳಿತ ಪಕ್ಷದ ಶಾಸಕರಿಗೆ ಬಿಸಿಮುಟ್ಟಿಸುತ್ತಲೇ ಪ್ರಬಲ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕಿದ್ದ ಕಾಂಗ್ರೆಸ್‌ನಲ್ಲಿ ಈಗ ಗುಂಪುಗಾರಿಕೆ ಬಹಿರಂಗವಾಗಿದೆ. ಪಕ್ಷದ ಆಂತರಿಕ ಕಲಹ ಬೀದಿ ಚರ್ಚೆಯ ವಸ್ತುವಾಗಿದೆ.

‘ಜಿಲ್ಲೆಯ ಜನರು ಕೊರೊನಾ ಹಾಗೂ ಮಳೆಯಿಂದ ಸಮಸ್ಯೆಯ ಸುಳಿಗೆ ಸಿಲುಕಿದ್ದಾರೆ. ಆಡಳಿತ ಪಕ್ಷದ ಶಾಸಕರು, ಜನರ ಕಣ್ಣೀರು ಒರೆಸಲು ವಿಫಲರಾಗಿದ್ದರೆ, ಅವರಿಗೆ ಚಾಟಿ ಬೀಸುವುದನ್ನು ಬಿಟ್ಟು ಕಾಂಗ್ರೆಸ್‌ ಮುಖಂಡರೇ ಪರಸ್ಪರ ಕಾಲೆಳೆಯುತ್ತಿರುವುದು ಪ್ರಹಸನವಾಗಿ ಕಾಣಿಸುತ್ತಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದ್ದಾರೆ.

ಕುಶಾಲನಗರದಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ಮುಖಂಡರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ವಿಡಿಯೊ ಸಹ ಎಲ್ಲೆಡೆ ವೈರಲ್‌‌ ಆಗಿತ್ತು. ಆ ಮುಖಂಡರ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು. ಅದು ಬಿಜೆಪಿ ಮುಖಂಡರಿಗೆ ಕಾಂಗ್ರೆಸ್ ಹಣಿಯಲು ಅನಿರೀಕ್ಷಿತವಾದ ಆಹಾರ ಸಿಕ್ಕಂತಾಗಿತ್ತು.

ಸುಂಟಿಕೊಪ್ಪ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯೆ ಕೆ.ಪಿ.ಚಂದ್ರಕಲಾ ಅವರು ಆ ಮುಖಂಡರನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ಪ್ರಧಾನಿ ಮೋದಿ ಅವರನ್ನು ಹೊಗಳಿದ್ದರು.

‘ಮೋದಿಗೆ ವಿಶೇಷ ಶಕ್ತಿಯಿದೆ. ಅವರು ಎಲ್ಲರೂ ಮೆಚ್ಚುವಂಥ ನಾಯಕ. ನಾವೂ ಅವರ ಕಾರ್ಯ ವೈಖರಿ ಶ್ಲಾಘಿಸುತ್ತೇವೆ. ಪ್ರಸ್ತುತ ಸನ್ನಿವೇಶದಲ್ಲಿ ದೇಶವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ. ಅವರು ಬರೀ ವ್ಯಕ್ತಿಯಲ್ಲ; ಶಕ್ತಿ’ ಎಂದೆಲ್ಲಾ ಕೊಂಡಾಡಿದ್ದರು. ಕೆ.ಪಿ.ಚಂದ್ರಕಲಾ ಅವರು ಮೋದಿ ಅವರನ್ನು ಹೊಗಳಿದ್ದೇ ತಡ, ಕಾಂಗ್ರೆಸ್‌ನಲ್ಲಿ ಆಕ್ರೋಶ ಸ್ಫೋಟವಾಗಿ ಕಾಲೆಳೆಯುವ ಪ್ರಯತ್ನಗಳು ಆರಂಭವಾದವು.

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಅವರೂ ಚಂದ್ರಕಲಾ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ‘ಪ್ರಧಾನಿ ಸ್ಥಾನಕ್ಕೆ ನಾವು ಗೌರವ ನೀಡುತ್ತೇವೆ. ಆದರೆ, ಜನಪರ ಕಾಳಜಿಯಿಲ್ಲದ ಹಾಗೂ ಕೊರೊನಾ ನಿಯಂತ್ರಿಸುವಲ್ಲಿ ವಿಫಲರಾಗಿರುವ ನರೇಂದ್ರ ಮೋದಿ ಅವರನ್ನು ಹೊಗಳುವ ನಮ್ಮ ಪಕ್ಷದ ಮುಖಂಡರು ಕಾಂಗ್ರೆಸ್ಸಿಗರೇ ಅಲ್ಲ’ ಎಂದು ತಿರುಗೇಟು ನೀಡಿದ್ದರು.

‘ಮೋದಿ ಅವರನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದು ಅವರ ವೈಯಕ್ತಿಕ ನಿಲುವು’ ಎಂದು ಸ್ಪಷ್ಟನೆ ನೀಡಿದ್ದರು. ಅದಾದ ಮೇಲೆ ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ ಅವರು ಹೇಳಿಕೆ ನೀಡಿ, ‘ಆತುರದ ನಿರ್ಧಾರಗಳಿಂದ ಇಡೀ ದೇಶವನ್ನೇ ಸಂಕಷ್ಟಕ್ಕೆ ಸಿಲುಕಿಸಿ ಎಲ್ಲಾ ಕ್ಷೇತ್ರಗಳಲ್ಲಿ ವಿಫಲತೆ ಕಾಣುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒಂದು ಶಕ್ತಿ ಎಂದು ಬಣ್ಣಿಸಿರುವ ಕೆ.ಪಿ.ಚಂದ್ರಕಲಾ ವಿರುದ್ಧ ಕ್ರಮಕ್ಕೆ ಕೆ.ಪಿ.ಸಿ.ಸಿಗೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.

ಕಾಂಗ್ರೆಸ್‌ನಲ್ಲಿದ್ದುಕೊಂಡು ಮೋದಿ ಪರ ಮಾತನಾಡಿ ಪಕ್ಷಕ್ಕೆ ಮುಜುಗರ ಉಂಟು ಮಾಡಿರುವ ಚಂದ್ರಕಲಾ ಅವರ ಕ್ರಮ ಖಂಡನೀಯವಾಗಿದ್ದು, ಕೆಪಿಸಿಸಿ ಗಮನ ಸೆಳೆಯಲಾಗುವುದು ಎಂದು ಹೇಳಿದ್ದರು.

ಇದು ಚಂದ್ರಕಲಾ ಅವರ ಬೆಂಬಲಿಗರಿಗೆ ಸಿಟ್ಟು ತರಿಸಿತ್ತು. ಸೋಮವಾರಪೇಟೆಯಲ್ಲಿ ಕೆಲವರು ಜಿಲ್ಲಾ ಅಧ್ಯಕ್ಷ ಕೆ.ಕೆ.ಮಂಜುನಾಥ್‌ ಕುಮಾರ್‌ ಅವರ ರಾಜೀನಾಮೆಗೂ ಆಗ್ರಹಿಸಿದ್ದರು. ಟಾಟು ಮೊಣ್ಣಪ್ಪ ವಿರುದ್ಧವೂ ಗರಂಗೊಂಡಿದ್ದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟಿಸಲು ವಿಫಲರಾಗಿರುವ, ಆಂತರಿಕ ವಿಷಯಗಳನ್ನು ಸಾರ್ವಜನಿಕವಾಗಿ ಚರ್ಚಿಸಿ ಪಕ್ಷವನ್ನು ಒಡೆಯಲು ಪ್ರಯತ್ನಿಸುತ್ತಿರುವ ಮಂಜುನಾಥ್ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪಕ್ಷದ ಸಭೆಗಳಲ್ಲಿ ಚರ್ಚಿಸುವಂಥ ಆಂತರಿಕ ವಿಷಯವನ್ನು ಬಹಿರಂಗ ಪಡಿಸಿದ್ದಾರೆ’ ಎಂದು ಪಕ್ಷದ ಜಿಲ್ಲಾ ಘಟಕದ ಮಾಜಿ ಉಪಾಧ್ಯಕ್ಷ ಕೆ.ಎ.ಆದಂ ದೂರಿದ್ದರು.

ಅವರೊಂದಿಗೆ ಪರಿಶಿಷ್ಟ ಜಾತಿ ರಾಜ್ಯ ಸಮಿತಿ ಸಂಚಾಲಕ ಬಿ.ಈ.ಜಯೇಂದ್ರ, ಡಿ.ಕೆ.ಶಿವಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಪಿ.ದಿನೇಶ್, ಪಕ್ಷದ ಎಸ್.ಸಿ ಘಟಕದ ಮಾಜಿ ಅಧ್ಯಕ್ಷ ಎಚ್.ಎ.ನಾಗರಾಜ್ ಬೆಂಬಲವಾಗಿ ನಿಂತಿದ್ದರು.

ಈ ಬೆಳವಣಿಗೆಯ ಮಧ್ಯೆ ಕೆಪಿಸಿಸಿ ಸಂಯೋಜಕ ಪ್ರದೀಪ್‌ ರೈ ಅವರು ಇತ್ತೀಚೆಗೆ ಮಡಿಕೇರಿ ಹಾಗೂ ಕುಶಾಲನಗರಕ್ಕೆ ಭೇಟಿ ನೀಡಿದ್ದರು. ‘ಕಾಂಗ್ರೆಸ್ಸಿಗರಿಗೆ ಕಾಂಗ್ರೆಸ್‌ ಪಕ್ಷವೇ ದೊಡ್ಡ ಶಕ್ತಿ. ಚಂದ್ರಕಲಾ ಹೇಳಿಕೆಯ ವಿಡಿಯೊವನ್ನು ವರಿಷ್ಠರು ಗಮನಿಸಿದ್ದಾರೆ’ ಎಂದು ಹೇಳಿದ್ದರು.

‘ಮುಂಬರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಪಕ್ಷ ಬಲವರ್ಧನೆ ಮಾಡುವುದನ್ನು ಬಿಟ್ಟು ನಾವೇ ಆಂತರಿಕ ವಿಚಾರವನ್ನು ಬೀದಿಗೆ ತಂದು ಪರಸ್ಪರ ಹೇಳಿಕೆ ನೀಡುವುದು ಸರಿಯಲ್ಲ’ ಎಂದು ಮುಖಂಡರೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು