ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಮುಂದಾದ ಜಿಲ್ಲಾಡಳಿತ

ಸಿದ್ದಾಪುರ: ಮಹಾಮಳೆಗೆ ನೆಲೆ ಕಳೆದುಕೊಂಡ ನಿರಾಶ್ರಿತರು
Last Updated 4 ಡಿಸೆಂಬರ್ 2019, 15:46 IST
ಅಕ್ಷರ ಗಾತ್ರ

ಸಿದ್ದಾಪುರ: ಸರಕಾರಿ ಒತ್ತುವರಿ ಭೂಮಿಯನ್ನು ವಶಪಡಿಸಿಕೊಂಡಿರುವ ಜಿಲ್ಲಾಡಳಿತ, ಶೀಘ್ರದಲ್ಲೇ ಸಂತ್ರಸ್ತರಿಗೆ ಶಾಶ್ವತ ಸೂರು ಕಲ್ಪಿಸಲು ಮುಂದಾಗಿದೆ.

ಪ್ರಸಕ್ತ ವರ್ಷದ ಮಹಾಮಳೆಗೆ ಜಿಲ್ಲೆಯ ವಿವಿಧೆಡೆ ಪ್ರವಾಹ ಉಂಟಾಗಿದ್ದು, ನೂರಾರು ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ನದಿ ದಡದಲ್ಲಿ ವಾಸವಾಗಿರುವ ನಿವಾಸಿಗಳು ಕೂಡ ತಮ್ಮ ಮನೆಗಳನ್ನು ಕಳೆದುಕೊಂಡು, ಸೂರಿಲ್ಲದೇ ಪರಿಹಾರ ಕೇಂದ್ರದಲ್ಲಿ ಕಾಲ ಕಳೆಯಬೇಕಾಗಿತ್ತು. ನದಿ ದಡದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಜಿಲ್ಲಾಡಳಿತ ಭರವಸೆಯನ್ನು ನೀಡಿತ್ತು. ಇದೀಗ ಸಂತ್ರಸ್ತರಿಗೆ ಸೂರು ನಿರ್ಮಿಸಲು ಅಭ್ಯತ್ ಮಂಗಲ ಗ್ರಾಮದ ಸ.ನಂ 87/2 ಹಾಗೂ 87/4 ರಲ್ಲಿ ಒಟ್ಟು 7.70 ಏಕರೆ ಸರಕಾರಿ ಜಾಗವನ್ನು ಜಿಲ್ಲಾಡಳಿತ ತನ್ನ ವಶಕ್ಕೆ ಪಡೆದಿದೆ.

ತ್ವರಿತ ಗತಿಯಿಂದ ಸಾಗುತ್ತಿರುವ ಕೆಲಸ

ಅಭ್ಯತ್‌ಮಂಗಲ ಗ್ರಾಮದಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ತೆರವುಗೊಳಿಸಿದ್ದು, ನಿವೇಶನ ಒದಗಿಸುವ ಕಾರ್ಯ ಚುರುಕಿನಿಂದ ಸಾಗಿದೆ. ಸೋಮವಾರಪೇಟೆ ತಹಶೀಲ್ದಾರ್‌ ಗೋವಿಂದರಾಜು ನೇತೃತ್ವದಲ್ಲಿ ಅಧಿಕಾರಿಗಳ ತಂಡ ನಿವೇಶನ ಒದಗಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಿದೆ.

ಈಗಾಗಲೇ ಒತ್ತುವರಿ ಜಾಗದಲ್ಲಿದ್ದ ಕಾಫಿ ಹಾಗೂ ಅಡಿಕೆ ಫಸಲುಗಳನ್ನು ಕಾರ್ಮಿಕರು ಕೊಯ್ಲು ನಡೆಸುತ್ತಿದ್ದು, ಗ್ರಾ.ಪಂ ಅಧೀನಕ್ಕೆ ನೀಡಲಾಗುತ್ತಿದೆ. ಕೊಯ್ಲು ಆದ ಭಾಗದಲ್ಲಿ ನಾಲ್ಕು ಜೆ.ಸಿ.ಬಿ ಗಳನ್ನು ಬಳಸಿ, ಕಾಫಿ ಗಿಡಗಳನ್ನು ತೆರವುಗೊಳಿಸಲಾಗುತ್ತಿದ್ದು, ನೆಲವನ್ನು ಸಮತಟ್ಟು ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಅಡಿಕೆ ಮರಗಳನ್ನು ಕೂಡ ಕತ್ತರಿಸಲಾಗಿದ್ದು, ಕಾಮಗಾರಿ ತ್ವರಿತಗತಿಯಿಂದ ಸಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟು, ಕಾಮಗಾರಿಯ ಪ್ರಗತಿ ವೀಕ್ಷಿಸುತ್ತಿದ್ದಾರೆ.

ಮರಗಳ ಎಣಿಕೆ ಮುಕ್ತಾಯ

ಒತ್ತುವರಿ ತೆರವುಗೊಳಿಸಿದ ಜಾಗದಲ್ಲಿ ವಿವಿಧ ಜಾತಿಯ ಮರಗಳಿದ್ದು, ಅರಣ್ಯ ಇಲಾಖೆಯ ವತಿಯಿಂದ ಮರಗಳ ಎಣಿಕೆ ನಡೆಸಲಾಗುವುದು ಎಂದು ಉಪವಿಬಾಗಾಧಿಕಾರಿಗಳು ತಿಳಿಸಿದ್ದರು. ಇದೀಗ ಕುಶಾಲನಗರ ಉಪವಲಯ ಅರಣ್ಯಾಧಿಕಾರಿ ಸುಬ್ರಾಯ ನೇತೃತ್ವದ ತಂಡ ಮರಗಳ ಎಣಿಕೆ ಮಾಡಲಾಗಿದ್ದು, ಒತ್ತುವರಿ ಜಾಗದಲ್ಲಿ ಒಟ್ಟು 339 ಮರಗಳನ್ನು ಗುರುತಿಸಲಾಗಿದೆ. ಮರಗಳ ಎಣಿಕೆಯ ವರದಿಯನ್ನು ಮೇಲಧಿಕಾರಿಗಳಿಗೆ ನೀಡಲಾಗಿದ್ದು, ಮೇಲಾಧಿಕಾರಿಗಳ ಅನುಮತಿ ದೊರೆತ ಬಳಿಕ ಮರಗಳ ತೆರವು ಕಾರ್ಯ ಆರಂಭವಾಗಲಿದೆ.

ಜಿಲ್ಲಾಧಿಕಾರಿ ಭೇಟಿ

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಒತ್ತುವರಿ ತೆರವುಗೊಳಿಸಿದ ಜಾಗಕ್ಕೆ ಬೇಟಿ ನೀಡಿ ಕಾಮಗಾರಿಯ ಪ್ರಗತಿಯ ಬಗ್ಗೆ ಪರಿಶೀಲಸಿದ್ದಾರೆ. 7.70 ಎಕರೆ ಜಾಗದ ಗಡಿ ಭಾಗದಲ್ಲಿ ತುಂತುರು ಮಳೆ ಇದ್ದರೂ ಕಾಲ್ನಡಿಗೆಯಲ್ಲಿ ತೆರಳಿ ಜಾಗವನ್ನು ಪರಿಶೀಲಸಿದರು. ಶೀಘ್ರದಲ್ಲಿ ಕೆಲಸಕಾರ್ಯವನ್ನು ಮುಕ್ತಾಯಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಪ್ರವಾಹ ಸಂಭವಿಸಿದ ದಿನದಿಂದಲೂ ಜಿಲ್ಲಾಧಿಕಾರಿ ಅವರ ನಿರ್ವಹಿಸಿದ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿತ್ತು.

ಸಂತ್ರಸ್ತರಲ್ಲಿ ಮೂಡಿದ ಆಶಾಭಾವನೆ

ಕಳೆದ ಮೂರು ತಿಂಗಳಿನಿಂದ ಮನೆ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂತ್ರಸ್ತರಿಗೆ ಇದೀಗ ಸೂರು ಲಭಿಸುವ ಆಶಾಭಾವನೆ ಮೂಡಿದೆ. ನದಿ ದಡದ ನಿವಾಸಿಗಳ ಪ್ರಸ್ತುತ ತಾತ್ಕಾಲಿಕ ಶೆಡ್ಗಳಲ್ಲಿ ವಾಸಿಸುತ್ತಿದ್ದು, ನೆಲ್ಯಹುದಿಕೇರಿ ಪರಿಹಾರ ಕೇಂದ್ರದಲ್ಲೂ ಆಶ್ರಯ ಪಡೆದುಕೊಂಡಿದ್ದಾರೆ. ಈಗಾಗಲೇ ಒತ್ತುವರಿ ತೆರವುಗೊಳಿಸಿರುವ ಜಾಗದಲ್ಲಿ ತಮಗೆ ಶಾಶ್ವತ ಸೂರು ಲಭಿಸುವ ಆಶಾಭಾವನೆ ಮೂಡಿದೆ. ಆದರೇ ಒತ್ತುವರಿ ತೆರವು ಜಾಗದಲ್ಲಿ ಸಿದ್ದಾಪುರ ವ್ಯಾಪ್ತಿಯ ಸಂತ್ರಸ್ತರಿಗೂ ನಿವೇಶನ ಒದಗಿಸಲಾಗುವುದೇ ಎಂಬ ಸಂದೇಹ ಸಂತ್ರಸ್ತರಲ್ಲಿ ಮೂಡಿದೆ.

ಬೆಟ್ಟದ ಕಾಡುವಿನ ಒತ್ತುವರಿ ಜಾಗದಲ್ಲಿ ಈಗಾಗಲೇ ನ್ಯಾಯಾಲಯದ ಆದೇಶದ ಮೇರೆಗೆ ಸರ್ವೆ ಮಾಡಲಾಗಿದ್ದು, ಸರ್ಕಾರಿ ಜಾಗ ಕಂಡುಬಂದಲ್ಲಿ ಇನ್ನಷ್ಟು ಸಂತ್ರಸ್ತರಿಗೆ ನಿವೇಶನ ದೊರಕಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT