ವಿರಾಜಪೇಟೆ: ‘ಶಿಕ್ಷಣ ಸಂಸ್ಥೆಗಳು ಕೇವಲ ಶಿಕ್ಷಣ ನೀಡಲು ಮಾತ್ರ ಸೀಮಿತವಾಗದೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗಬೇಕು’ ಎಂದು ಕೊಡಗು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ನಡೆದ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಕಡೆಗೆ ಹೆಚ್ಚು ಗಮನಹರಿಸಬೇಕು. ಈ ವಿಚಾರದಲ್ಲಿ ಯಾವುದೇ ತರಹದ ಹೊಂದಾಣಿಕೆ ಅಥವಾ ರಾಜಿಗೆ ತಯಾರಾಗಬಾರದು. ಮುಂದಿನ ಪೀಳಿಗೆಗೆ ಹೆಚ್ಚು ಅವಕಾಶಗಳನ್ನು ಕಲ್ಪಿಸುವ ನೂತನ ಪಠ್ಯ ಕ್ರಮವನ್ನು ಪರಿಚಯಿಸಬೇಕು. ಪ್ರಸಕ್ತ ದಿನಗಳಲ್ಲಿ ಬೋಧಕರಿಗೂ ಕಾಲಾನುಸಾರ ತರಬೇತಿಯ ಅಗತ್ಯವಿದೆ. ಕೊಡಗು ವಿಶ್ವವಿದ್ಯಾಲಯದ ಅಧೀನ ಪದವಿ ಕಾಲೇಜುಗಳ ಬೋಧಕ ವರ್ಗದ ಹಿತದೃಷ್ಟಿಯಿಂದ ‘ಸಿಬ್ಬಂದಿ ಅಭಿವೃದ್ಧಿ ಮತ್ತು ತರಬೇತಿ ಕೇಂದ್ರ’ವನ್ನು ವಿಶ್ವವಿದ್ಯಾನಿಲಯದಲ್ಲಿ ಪ್ರಾರಂಭಿಸುವ ಉದ್ದೇಶವಿದೆ’ ಎಂದು ಮಾಹಿತಿ ನೀಡಿದರು.
ಕುಶಾಲನಗರ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ಶೀನಪ್ಪ, ಮೈಸೂರಿನ ಮಹಾರಾಣಿ ಕಾಲೇಜಿನ ಗೋವಿಂದರಾಜ್, ನಾಗರಾಜ ಮೂರ್ತಿ, ಉದ್ಯಮಿಗಳಾದ ಮಹಮ್ಮದ್ ಹನೀಫ್ ಹಾಗೂ ಕಾಲೇಜಿನ ದೈಹಿಕ ನಿರ್ದೇಶಕಿ ರಾಖಿ ಪೂವಣ್ಣ ವೇದಿಕೆಯಲ್ಲಿದ್ದರು.
ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಸಿ.ದಯಾನಂದ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರಘುರಾಜ್ ಸ್ವಾಗತಿಸಿದರು. ಕಿಶೋರ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.