ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು: ವೈದ್ಯರೇ ಸೇವೆಗೆ ಬನ್ನಿ...

ಇರೋ ಸಿಬ್ಬಂದಿಯ ಸೇವೆಗೆ ಶ್ಲಾಘನೆ: ಜೀವ ಉಳಿಸಲು ಹಗಲು ರಾತ್ರಿ ಪರಿಶ್ರಮ
Last Updated 8 ಮೇ 2021, 19:30 IST
ಅಕ್ಷರ ಗಾತ್ರ

ಮಡಿಕೇರಿ: ಮೊದಲನೇ ಅಲೆಯ ವೇಳೆ ಬಹುತೇಕ ದಿನಗಳ ಕಾಲ ಕೊಡಗು ಜಿಲ್ಲೆಯು ಹಸಿರು ವಲಯದಲ್ಲಿತ್ತು. ಕೋವಿಡ್‌ ಪ್ರಕರಣಗಳು ಜಿಲ್ಲೆಯನ್ನು ಅಷ್ಟಾಗಿ ಬಾಧಿಸರಲಿಲ್ಲ. ಆದರೆ, 2ನೇ ಅಲೆಯಲ್ಲಿ ಕೊರೊನಾ ಪ್ರಕರಣಗಳು, ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಏರಿಕೆ ಕಾಣಿಸುತ್ತಿದ್ದು ಆತಂಕ ಮೂಡಿಸಿದೆ.

ಜಿಲ್ಲಾ ಆಸ್ಪತ್ರೆ, ತಾಲ್ಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆಯಿಂದ ಸಾವಿನ ಪ್ರಮಾಣವು ಏರಿಕೆಯಾಗಿದೆ. ಕಳೆದ ಒಂದು ವಾರದಿಂದ, ಪ್ರತಿನಿತ್ಯ 10ರಿಂದ 12 ಮಂದಿ ಕೋವಿಡ್‌ನಿಂದ ಸಾವನ್ನಪ್ಪುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ.

ಜಿಲ್ಲಾಡಳಿತವು ತಕ್ಷಣಕ್ಕೆ ಜನರ ಜೀವ ಉಳಿಸುವ ಕೆಲಸಕ್ಕೆ ಮುಂದಾಗಿದ್ದು, ತಜ್ಞರ ವೈದ್ಯರ ನೇಮಕಕ್ಕೆ ಮುಂದಾಗಿದೆ. ಈ ಹಿಂದೆಯೇ ವೈದ್ಯರು, ನರ್ಸ್‌ ಹಾಗೂ ಆರೋಗ್ಯ ಇಲಾಖೆಯ ಇತರ ಸಿಬ್ಬಂದಿಯ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿತ್ತು. ಆದರೆ, ನಿರೀಕ್ಷಿತಮಟ್ಟದಲ್ಲಿ ನೇಮಕಾತಿಗೆ ವೈದ್ಯರು ಹಾಗೂ ನರ್ಸ್‌ಗಳು ಆಗಮಿಸರಲಿಲ್ಲ. ಇದೀಗ ತಜ್ಞ ವೈದ್ಯರ ಅಗತ್ಯವಿದ್ದು, ಜಿಲ್ಲಾಡಳಿತವು ಜಾಹೀರಾತು ನೀಡಿದೆ. ಜನರಲ್ ಫಿಸಿಷಿಯನ್, ಶ್ವಾಸಕೋಶ ತಜ್ಞರು, ಹೃದ್ರೋಗ ತಜ್ಞ ಸೇರಿದಂತೆ 20ಕ್ಕೂ ವೈದ್ಯರ ನೇಮಕಾತಿಗೆ ಜಿಲ್ಲಾಡಳಿತವು ಮುಂದಾಗಿದೆ. ವೈದ್ಯರ ಮಾಸಿಕ ವೇತನವನ್ನೂ ₹ 2.50 ಲಕ್ಷಕ್ಕೆ ಹೆಚ್ಚಿಸಲಾಗಿದೆ. 100 ಮಂದಿ ನರ್ಸಿಂಗ್ ಆಫೀಸರ್‌, ಫಾರ್ಮಸಿಸ್ಟ್‌, ವಿವಿಧ ಪ್ರಯೋಗಾಲಯಕ್ಕೆ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಡಳಿತವು ಮುಂದಾಗಿದೆ. ಆರು ತಿಂಗಳ ಅವಧಿ ಅಥವಾ ಕೋವಿಡ್ ಪರಿಸ್ಥಿತಿ ಸುಧಾರಿಸುವ ತನಕ ಈ ನೇಮಕಾತಿ ಮಾಡಿಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.ಶ್ವಾಸಕೋಶ ತಜ್ಞರ ಕೊರತೆಯಿದ್ದು, ಸಾವು – ನೋವು ಹೆಚ್ಚುತ್ತಿದೆ.

ವೈದ್ಯರೇ ಸೇವೆಗೆ ಬನ್ನಿ: ಸಾಮಾನ್ಯವಾಗಿ ಸೌಲಭ್ಯಗಳ ಕೊರತೆ ಹಾಗೂ ಮಳೆಯ ಕಾರಣಕ್ಕೆ ಕೊಡಗು ಜಿಲ್ಲೆಯತ್ತ ವೈದ್ಯರು ಸೇವೆಗೆ ಬರುವುದು ಕಡಿಮೆ. ಇದೀಗ ಆರೋಗ್ಯ ಕ್ಷೇತ್ರದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗಿದ್ದು, ಮತ್ತಷ್ಟು ತಜ್ಞ ವೈದ್ಯರು ಜಿಲ್ಲೆಗೆ ಬಂದರೆ ಮಾತ್ರ ಈ ಕೋವಿಡ್‌ ಅನ್ನು ಸ್ವಲ್ಪಮಟ್ಟಿಗೆ ನಿಯಂತ್ರಣಕ್ಕೆ ತರಲು ಸಾಧ್ಯವಿದೆ ಎನ್ನುತ್ತಾರೆ ವೈದ್ಯರು.

ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು ಹಾಗೂ ನರ್ಸ್‌ಗಳು ತಮ್ಮ ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಮೂರು ತಿಂಗಳಿಂದ ತಮ್ಮ ಕುಟುಂಬ ಹಾಗೂ ಮಕ್ಕಳಿಂದ ಎಷ್ಟೋ ಮಂದಿ ದೂರವಿದ್ದಾರೆ. ಇನ್ನೂ ಜಿಲ್ಲಾ ಕೋವಿಡ್‌ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಹಲವರು, ತಮ್ಮ ಫೇಸ್‌ಬುಕ್‌ ವಾಲ್‌ನಲ್ಲಿ ಈ ಜಾಹೀರಾತು ಅಪ್‌ಲೋಡ್‌ ಮಾಡಿಕೊಂಡು, ‘ಸೇವೆಗೆ ಬನ್ನಿ...’ ಎಂದು ಹೊರ ಜಿಲ್ಲೆಯ ವೈದ್ಯರಲ್ಲಿ ವಿನಂತಿಸಿಕೊಂಡಿದ್ದಾರೆ.

ಸಾವು ಹೆಚ್ಚಳ ತಂದ ಆತಂಕ: ಕೋವಿಡ್ ನಡುವೆಯೇ ಬದುಕಬೇಕೆಂದು ಜನರು ಏಪ್ರಿಲ್‌ ಮೊದಲ ವಾರದ ತನಕವೂ ಜಿಲ್ಲೆಯಲ್ಲಿ ಸಾಮಾನ್ಯ ದಿನಗಳಂತೆಯೇ ಓಡಾಟ ನಡೆಸುತ್ತಿದ್ದರು. ಯಾವಾಗ ಪ್ರಕರಣಗಳು ದಿಢೀರ್‌ ಆಗಿ ಏರಿಕೆಯಾದವೋ ಅಂದಿನಿಂದಲೇ ಜನರು ಸ್ವಲ್ಪ ಓಡಾಟ ಕಡಿಮೆ ಮಾಡಿದರು. ಆದರೂ, ಪ್ರಕರಣಗಳು ನಿಯಂತ್ರಣಕ್ಕೆ ಬಂದಿಲ್ಲ.

ಪರ್ಯಾಯ ವ್ಯವಸ್ಥೆಯಾದರೂ ಏನು?: ಒಂದು ವೇಳೆ ಆಮ್ಲಜನಕ ಕೊರತೆ ಎದುರಾದರೆ ಪರ್ಯಾಯ ವ್ಯವಸ್ಥೆಯಾದರೂ ಏನೆಂಬ ಪ್ರಶ್ನೆ ವೈದ್ಯಾಧಿಕಾರಿಗಳಿಗೆ ಎದುರಾಗಿದೆ. 13 ಸಾವಿರ ಲೀಟರ್‌ ಸಾಮರ್ಥ್ಯದ ಲಿಕ್ವಿಡ್‌ ಆಮ್ಲಜಕನ ಟ್ಯಾಂಕ್‌ ಅನ್ನು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ ಕಳೆದ ವರ್ಷವೇ ಸ್ಥಾಪಿಸಲಾಗಿತ್ತು. ಆದರೆ, ಕೊರೊನಾ ಪೀಡಿತರು ಉಸಿರಾಟದ ತೊಂದರೆಗೆ ಒಳಗಾಗಿ ಕೊನೆಯ ಕ್ಷಣದಲ್ಲಿ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದ ಆಮ್ಲಜನಕದ ಹಾಸಿಗೆ ಅಗತ್ಯವು ಹೆಚ್ಚಾಗಿದೆ. ಸದ್ಯಕ್ಕೆ ಆಮ್ಲಜನಕ ಹಾಸಿಗೆಯ ತೊಂದರೆ ಎದುರಾಗಿಲ್ಲ. ಆದರೆ, ಒಂದು ವೇಳೆ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ರೋಗಿಗಳು ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ.

ಎಫ್‌ಐಆರ್‌ ದಾಖಲಿಸಿದರೆ ಅಂಗಡಿ ಬಂದ್‌: ಎಚ್ಚರಿಕೆ

ಮಡಿಕೇರಿ: ಕೊರೊನಾ ಹಾಗೂ ಲಾಕ್‍ಡೌನ್‍ನಿಂದ ಕಂಗಾಲಾಗಿರುವ ವರ್ತಕರ ಸಮುದಾಯದ ವಿರುದ್ಧ ಮಡಿಕೇರಿಯಲ್ಲಿ ಪೊಲೀಸರು ಅನವಶ್ಯಕ ಮೊಕದ್ದಮೆ ದಾಖಲಿಸುತ್ತಿದ್ದು, ಈ ಬಗ್ಗೆ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಮಡಿಕೇರಿ ಸ್ಥಾನೀಯ ಸಮಿತಿ ತೀವ್ರ ಕಳವಳ ವ್ಯಕ್ತಪಡಿಸಿದೆ.

ಅಂಗಡಿ ಮುಂಗಟ್ಟುಗಳ ಎದುರು ನಿಯಮ ಪಾಲಿಸದೇ ಗುಂಪು ಗುಂಪಾಗಿ ಜನ ಸೇರುತ್ತಿದ್ದು, ಅಂತಹ ಸಂದರ್ಭ ವರ್ತಕರನ್ನು ಗುರಿಯಾಗಿಸಿ, ಪೊಲೀಸರು ವಿವಿಧ ಕಾನೂನಿನ ಅಡಿ ಎಫ್‍ಐಆರ್ ದಾಖಲಿಸುತ್ತಿದ್ದು, ವರ್ತಕರ ಮೇಲಿನ ದಬ್ಬಾಳಿಕೆಯನ್ನು ಕೂಡಲೇ ನಿಲ್ಲಿಸುವಂತೆ ಒತ್ತಾಯಿಸಿದೆ.

ಶುಕ್ರವಾರದಂದು ಮಡಿಕೇರಿಯಲ್ಲಿ ನಿರೀಕ್ಷೆಗೂ ಮೀರಿದ ಜನಸಂದಣಿ ಉಂಟಾಗಿ ವ್ಯಾಪಾರಸ್ಥರು ಕೂಡ ತೊಂದರೆ ಅನುಭವಿಸಬೇಕಾಯಿತು. ಅಂಗಡಿ ಮುಂಗಟ್ಟುಗಳ ಎದುರು ಜನ ಮುಗಿಬಿದ್ದು ಆಹಾರ ಸಾಮಗ್ರಿಗಳನ್ನು ಖರೀದಿಸುತ್ತಿದ್ದರು. ವರ್ತಕರ ಮನವಿಗೆ ಸ್ಪಂದಿಸದ ಜನ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಿಲ್ಲ. ಇಂತಹ ಪರಿಸ್ಥಿತಿಯಲ್ಲಿ ವರ್ತಕರ ಮೇಲೆ ಮೊಕದ್ದಮೆ ದಾಖಲಿಸಿ ಇದೀಗ ನ್ಯಾಯಾಲಯ ಅಲೆಯುವಂತೆ ಮಾಡಿರುವುದು ಎಷ್ಟು ನ್ಯಾಯ ಎಂದು ಚೇಂಬರ್ ಪ್ರಶ್ನಿಸಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ವರ್ತಕರೊಂದಿಗೆ ಸೌಜನ್ಯದಲ್ಲಿ ವರ್ತಿಸಿದರೂ, ಕೆಲವು ಕಿರಿಯ ಅಧಿಕಾರಿಗಳು ವರ್ತಕರನ್ನು ತುಚ್ಛವಾಗಿ ಏಕವಚನದಲ್ಲಿ ಸಂಭೋದಿಸಿ, ಅಂಗಡಿಯಿಂದ ಹೊರ ಬರುವಂತೆ ಆದೇಶಿಸಿ ದಂಡ ವಿಧಿಸಿದ್ದು, ಇದರಿಂದ ವರ್ತಕರ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಚೇಂಬರ್ ಆಕ್ರೋಶ ವ್ಯಕ್ತಪಡಿಸಿದೆ.

ಘಟನೆ ಕುರಿತು ಅಂತರ್ಜಾಲ ಮೂಲಕ ಸಭೆ ನಡೆಸಿದ ಪದಾಧಿಕಾರಿಗಳು, ಹಲವು ಪೊಲೀಸರ ವರ್ತನೆ ಹಾಗೂ ಕ್ರಮವನ್ನು ತೀವ್ರವಾಗಿ ಖಂಡಿಸಿದರು.

ಇದೇ ಪರಿಸ್ಥಿತಿ ಮುಂದುವರಿದರೆ ಮಡಿಕೇರಿಯಲ್ಲಿ ಅಂಗಡಿಗಳನ್ನು ತೆರೆಯದೆ ಪ್ರತಿಭಟಿಸುವ ಅಭಿಪ್ರಾಯಗಳೂ ಕೇಳಿ ಬಂದವು. ವ್ಯಾಪಾರಿಗಳು ವ್ಯಾಪಾರದ ಜೊತೆ ಪರೋಕ್ಷವಾಗಿ ವಾರಿಯರ್ಸ್ ರೀತಿಯಲ್ಲಿಯೇ ಜನ ಸೇವೆ ಮಾಡುತ್ತಿರುವುದನ್ನು ಜನರು ಹಾಗೂ ಆಡಳಿತ ಅರ್ಥೈಸಿಕೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿತು.
ವರ್ತಕರು ಸಹ ಅಂಗಡಿ ಎದುರು ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಿಳಿ ಬಣ್ಣದಲ್ಲಿ ಗುರುತು ಹಾಕುವಂತೆ ಸೂಚಿಸಲು ನಿರ್ಧರಿಸಲಾಯಿತು.

ಸಭೆಯ ಬಳಿಕ ಡಿವೈಎಸ್‍ಪಿ ಬಾರಿಕೆ ದಿನೇಶ್ ಕುಮಾರ್ ಅವರನ್ನು ಚೇಂಬರ್ ನಿಯೋಗ ಭೇಟಿ ಮಾಡಿ, ಬೆಳವಣಿಗೆ ಕುರಿತು ಚರ್ಚಿಸಿತು.

ಕಳೆದ ವರ್ಷ ವರ್ತಕರು, ಪೊಲೀಸರು ಹಾಗೂ ಆಡಳಿತ ಹೊಂದಾಣಿಕೆಯಲ್ಲಿ ಕಾರ್ಯನಿರ್ವಹಿಸಿದಂತೆ ಈಗಲೂ ಮುಂದುವರಿಯುವ ಆಶಯ ವ್ಯಕ್ತಪಡಿಸಿತು. ವರ್ತಕರಿಗೆ ಜನರ ಸಾಲುಗಳನ್ನು ನಿಯಂತ್ರಿಸುವುದು ಕಷ್ಟವಾಗಿದ್ದು, ಪೊಲೀಸರು ಸಹಕರಿಸುವಂತೆ ಕೋರಲಾಯಿತು. ಪೊಲೀಸರ ಸಂಖ್ಯೆ ಕಡಿಮೆ ಇರುವುದರಿಂದ ಎಲ್ಲೆಲ್ಲೂ ಸಾಲು ವ್ಯವಸ್ಥೆಗೆ ಈ ಹಿಂದಿನಂತೆ ಪೊಲೀಸರನ್ನು ನಿಯೋಜಿಸಲು ಕಷ್ಟವಾಗಿದ್ದು, ಹೋಂಗಾರ್ಡ್‍ಗಳ ಕೊರತೆಯೂ ಇದೆ ಎಂದು ದಿನೇಶ್ ಅವರು ವಿವರಿಸಿದರು.

ನಿಯೋಗದಲ್ಲಿ ಮಡಿಕೇರಿ ಸ್ಥಾನೀಯ ಸಮಿತಿ ಅಧ್ಯಕ್ಷ ಧನಂಜಯ್, ಕಾರ್ಯದರ್ಶಿ ಸಂತೋಷ್ ಅಣ್ವೇಕರ್, ಜಿಲ್ಲಾ ಚೇಂಬರ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ ನವೀನ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ನಗರ ಸಮಿತಿ ಪದಾಧಿಕಾರಿಗಳಾದ ಅರವಿಂದ್ ಕೆಂಚೆಟ್ಟಿ, ಕಬೀರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT