ಚರಂಡಿ ಕೊರತೆ, ರಸ್ತೆಗಳು ಅಧ್ವಾನ

7
ರಸ್ತೆ ಮೇಲೆ ಹರಿಯುತ್ತಿರುವ ಮಳೆ ನೀರು, ಹಲವು ಬಡಾವಣೆಗಳಿಗೆ ಸಂಕಷ್ಟ

ಚರಂಡಿ ಕೊರತೆ, ರಸ್ತೆಗಳು ಅಧ್ವಾನ

Published:
Updated:
Deccan Herald

ಮಡಿಕೇರಿ: ನಗರ ವ್ಯಾಪ್ತಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೇ ನೀರು ರಸ್ತೆಯ ಮೇಲೇ ಹರಿಯುತ್ತಿದೆ. ಕಳೆದ ವಾರದಿಂದ ನಗರದಲ್ಲಿ ಸುರಿಯುತ್ತಿರುವ ಮಳೆಗೆ ಇಲ್ಲಿನ ಕಾವೇರಿ ಬಡಾವಣೆ, ಪ್ರಕೃತಿ ಬಡಾವಣೆ, ಅಬ್ದುಲ್‌ ಕಲಾಂ ಬಡಾವಣೆ, ಕರ್ಣಂಗೇರಿ ರಸ್ತೆ ಭಾಗದಲ್ಲಿ ಚರಂಡಿಯಲ್ಲಿ ಹರಿಯಬೇಕಿದ್ದ ನೀರು ಮನೆಯೊಳಗೆ ನುಗ್ಗಿ ಅವಾಂತರ ಸೃಷ್ಟಿಸಿತ್ತು.

ಚರಂಡಿ ವ್ಯವಸ್ಥೆ ಸರಿಯಿಲ್ಲದೆ ಮಳೆ ನೀರು, ಮನೆಗಳ ಶೌಚಾಲಯಗಳ ನೀರು, ನಿತ್ಯದ ಬಳಕೆ ನೀರು ಎಲ್ಲವೂ ರಸ್ತೆಯನ್ನು ಆವರಿಸುತ್ತಿದೆ. ಇದರಿಂದ ರಸ್ತೆಗೂ, ಚರಂಡಿಗೂ ವ್ಯತ್ಯಾಸವೇ ತಿಳಿಯದಂತಾಗಿದೆ.

ನಗರದ ಸೇಂಟ್ ಜೋಸೆಫ್ ಶಾಲೆಯ ರಸ್ತೆಯ ನೀರು ಚರಂಡಿಯಿಂದ ಹೊರಬಂದು ಕೆರೆಯಂತೆ ಆಗಿತ್ತು, ಇನ್ನು ಕಾಲೇಜು ರಸ್ತೆಯ ಆರ್ಮಿ ಕ್ಯಾಂಟೀನ್‌, ಗೌಳಿ ಬೀದಿ, ಹಾಲಿನ ಡೇರಿ ಬಳಿ ನದಿಯಂತೆ ನೀರು ಹರಿಯತೊಡಗಿದ್ದವು. ಮಳೆಯ ಪ್ರಮಾಣ ಹೆಚ್ಚಾಗುತ್ತಿದ್ದಂತೆ ರೇಸ್‌ ಕೋರ್ಸ್‌ ಬಳಿಯ ತೋಡಿನ ನೀರಿನ ಪ್ರಮಾಣ ಹೆಚ್ಚಾಗಿ ರಸ್ತೆಯ ಮೇಲೆ ನೀರು ಹರಿಯಲಾರಂಭಿಸಿದ್ದು ನಗರದ ಜನರನ್ನು ಭಯಗೊಳಿಸಿ ಇತ್ತ ನಗರಸಭೆಯನ್ನು ದೂರುವ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಜಿಲ್ಲಾ ಕ್ರೀಡಾಂಗಣ ಬಳಿಯ ರಸ್ತೆಯೂದ್ದಕ್ಕೂ ಚರಂಡಿ ಇಲ್ಲ. ನೀರು ರಸ್ತೆಯಲ್ಲಿ ಹರಿಯುತ್ತಿದೆ. ಯುಜಿಡಿ ಕಾಮಗಾರಿಗಾಗಿ ಮಾಡಿದ ಗುಂಡಿಗಳನ್ನು ಸರಿಯಾಗಿ ಮುಚ್ಚದೇ ಮಳೆ ನೀರು ಸರಾಗವಾಗಿ ಹರಿದು ಹೋಗದೇ ರಸ್ತೆಗಳು ಕೆಸರು ಗದ್ದೆಯಾಗಿ ಬದಲಾಗಿವೆ. ಇದರಿಂದ ಸ್ಥಳೀಯರ ಓಡಾಟಕ್ಕೂ ತೊಂದರೆ ಆಗುತ್ತಿದೆ ಎಂದು ನಗರದ ಜನರು ದೂರುತ್ತಿದ್ದಾರೆ.

‘ನಗರಸಭೆ ಮೊದಲು ಬಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಮಳೆಯ ನೀರು ರಸ್ತೆಗೆ ಬರದಂತೆ ಎಚ್ಚರಿಕೆ ವಹಿಸಬೇಕು’ ಎಂದು ಸ್ಥಳೀಯರು ಆಗ್ರಹಿಸುತ್ತಾರೆ.

ಮನೆಗಳಿಗೆ ಹಾನಿ
ಚಾಮುಂಡೇಶ್ವರಿ ನಗರದ ಸಾಕಮ್ಮ, ಭಾರತಿ, ಅಚ್ಚುತ್ತ, ರಘು ಎಂಬುವವರ ಮನೆಗಳ ಬಳಿ ಗುಡ್ಡ ಕುಸಿತದಿಂದ ಮನೆಗಳಿಗೆ ಅಲ್ಪ ಪ್ರಮಾಣದಲ್ಲಿ ಹಾನಿಯಾಗಿದೆ. ಇನ್ನು ಮಂಗಳಾದೇವಿ ನಗರ, ಇಂದಿರಾನಗರ, ಚಾಮುಂಡೇಶ್ವರಿ ನಗರದಲ್ಲಿ ಗುಡ್ಡ ಕುಸಿತದಿಂದ 10ಕ್ಕಿಂತ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. 20 ಮನೆಗಳಿಗೆ ಮುಂಜಾಗ್ರತಾ ಕ್ರಮವಾಗಿ ನಗರಸಭೆ ವತಿಯಿಂದ ಟಾರ್ಪಲ್‌ ವಿತರಣೆ ಮಾಡಲಾಗಿದೆ.

ಬಡಾವಣೆಯಲ್ಲಿ ಹೆಚ್ಚು ಮಳೆಯಾಗುವ ಸಂದರ್ಭ ಮನೆಯೊಳಗೆ ಚರಂಡಿ ನೀರು ಬರುತ್ತಿದೆ. ಈ ಬಗ್ಗೆ ನಗರಸಭೆ ಸದಸ್ಯರಿಗೆ ಮಾಹಿತಿ ನೀಡಿದ್ದೇವೆ. ಆದರೆ, ಯಾವುದೇ ಕ್ರಮ ಆಗಿಲ್ಲ.
-ದೀಕ್ಷಿತ್‌, ಕಾವೇರಿ ಬಡಾವಣೆ

 ಚರಂಡಿ ನೀರು ಮನೆಯ ಅಂಗಳಕ್ಕೆ ಬರುತ್ತಿದೆ. ಸರಿಯಾದ ಚರಂಡಿ ವ್ಯವಸ್ಥೆ ಆಗಬೇಕು.
- ಸೋನಿಯಾ, ಇಂದಿರಾನಗರ ನಿವಾಸಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !