ಸುಂಟಿಕೊಪ್ಪ: ‘ಕಲ್ಲಿನ ದೇವರನ್ನು ಪೂಜಿಸುವುದರ ಜೊತೆಗೆ ವಿದ್ಯೆ ಕಲಿಸಿದ ಗುರುಗಳನ್ನೂ ಪೂಜಿಸುವುದು ಅತ್ಯಂತ ಪವಿತ್ರವಾದದ್ದು’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ದಿವಾಕರ್ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಆಯೋಜಿಸಿದ್ದ ಉತ್ತಮ ಫಲಿತಾಂಶ ಪಡೆದ ಕಾಲೇಜಿನ ಉಪನ್ಯಾಸಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಗೌರವ ಸಮರ್ಪಣ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ರಾಜಕಾರಣಿಗಳು, ಉನ್ನತ ಹುದ್ದೆಯ ಅಧಿಕಾರಿಗಳು, ಸೈನಿಕರು ಸೇರಿದಂತೆ ಸಮಾಜ ಸೇವಕರಾಗಿ ಸೇವೆ ಸಲ್ಲಿಸಲು ಕಾರಣಕರ್ತರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವ ಮಟ್ಟಕ್ಕೆ ಹುಟ್ಟು ಹಾಕಿದ್ದೆ ಈ ಶಿಕ್ಷಕರು ಎಂಬ ದೇವರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವುದರ ಜೊತೆಗೆ ವಿದ್ಯಾರ್ಥಿಗಳು ಶಿಕ್ಷಕರನ್ನು ಗೌರವದಿಂದ ಕಂಡಾಗ ಮಾತ್ರ ಬದುಕು ಹಸನಾಗಲು ಸಾಧ್ಯ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೊಲೀಸ್ ಠಾಣೆಯ ಪಿಎಸ್ಐ ಸುರೇಶ್,‘ಶಿಕ್ಷಣ ಕಲಿತರೆ ಸಾಲದು ಗುರು ಹಿರಿಯರನ್ನು ಗೌರವಿಸಬೇಕು. ಇಲ್ಲವಾದಲ್ಲಿ ಸಾಧನೆ ಮಾಡಲು ಸಾಧ್ಯವಿಲ್ಲ. ಓದಿನಲ್ಲೂ ಶ್ರಮ ವಹಿಸಿದಾಗ ಮಾತ್ರ ಉತ್ತಮ ಅಂಕ ಬರಲು ಸಾಧ್ಯವಿದೆ. ದುಶ್ಚಟಗಳಿಂದ ದೂರವಾಗಿ ಪೋಷಕರಿಗೆ ಯಾವುದೇ ಒತ್ತಡವನ್ನು ಹಾಕಬಾರದು’ ಎಂದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಮಾತನಾಡಿ, ‘ಭವಿಷ್ಯದ ಸಮಾಜ ನಿರ್ಮಾಣಕ್ಕೆ ಯುವ ಜನಾಂಗದ ಪಾತ್ರ ಬಹಳ ಮುಖ್ಯ. ಹಾಗಾಗಿ ವಿದ್ಯಾಭ್ಯಾಸದ ಕಡೆ ಗಮನಹರಿಸಿ ಬಾಬಾಸಾಹೇಬ ಅಂಬೇಡ್ಕರ್ ಅವರ ದ್ಯೇಯೋದ್ದೇಶಗಳನ್ನು ಅನುಸರಿಸಿಕೊಂಡು ಹೋದಲ್ಲಿ ಸಮಾಜದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಿದೆ’ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ರಫೀಕ್ ಖಾನ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚಾರ್ಯರಾದ ಶ್ರೀಲತ ವಹಿಸಿದ್ದರು.
ನಂತರ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳು ಮತ್ತು ಕಾಲೇಜಿಗೆ ಶೇ100 ಫಲಿತಾಂಶ ಬರಲು ಕಾರಣರಾದ ಉಪನ್ಯಾಸಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಶಿವಮ್ಮ, ಸದಸ್ಯರಾದ ಶಬೀರ್, ಸೋಮನಾಥ್,ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ಹೆಚ್.ಜೆ.ಈರಪ್ಪ, ಗೌರವ ಸಲಹೆಗಾರ ದುರ್ಗಯ್ಯ,ಸುಂಟಿಕೊಪ್ಪ ಹೋಬಳಿ ಸಂಚಾಲಕ ಜಯಣ್ಣ,ಹಿರಿಯ ಉಪನ್ಯಾಸಕರಾದ ಕವಿತ, ಸುನೀತ, ಈಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.