ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆ, ಕಾಲೇಜಿನಲ್ಲಿ ಚುನಾವಣಾ ಸಾಕ್ಷರತಾ ಕ್ಲಬ್

ಚುನಾವಣೆ ಬಗ್ಗೆ ಅರಿವು ಮೂಡಿಸಲು ಕ್ರಮ; ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳ ಆಯೋಜನೆ
Last Updated 14 ಡಿಸೆಂಬರ್ 2018, 18:16 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದು, ಒಂದು ಕಡೆ ರಾಜಕೀಯ ಪಕ್ಷಗಳು ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿವೆ. ಮತ್ತೊಂದು ಕಡೆ ಚುನಾವಣಾ ಆಯೋಗವೂ ಸಿದ್ಧತೆಯಲ್ಲಿ ತೊಡಗಿದೆ. ಈ ಸಂಬಂಧ ಪೂರ್ವ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಡಳಿತದ ಮೂಲಕ ಎಲ್ಲಾ ಇಲಾಖೆಗಳಿಗೂ ಸುತ್ತೋಲೆ ಕಳುಹಿಸಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆ ಎಂಬುದು ರಾಷ್ಟ್ರೀಯ ಹಬ್ಬವಿದ್ದಂತೆ. ಇದಕ್ಕೆ ಕಿಂಚಿತ್ತೂ ಲೋಪವಿಲ್ಲದಂತೆ ಚುನಾವಣೆ ನಡೆಸುವುದು ಜಿಲ್ಲಾಡಳಿತಕ್ಕೆ ಸವಾಲಿನ ಕೆಲಸವೇ ಆಗಿದೆ. ಚುನಾವಣೆಯಲ್ಲಿ ಲೋಪವಾದರೆ ದೇಶದ ಪ್ರಜಾಪ್ರಭುತ್ವದ ಬೇರು ಅಲುಗಾಡಲಿದೆ.

ಈ ಕಾರಣದಿಂದ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಸಬೇಕಾದರೆ ಎಲ್ಲರಿಗೂ ಚುನಾವಣೆ, ಮತದಾನ ಅರಿವು ಮೂಡಿಸುವುದು ಅಗತ್ಯ. ಇದನ್ನು ಮನಗಂಡಿ ರುವ ಜಿಲ್ಲಾಡಳಿತವು ಶಾಲಾ– ಕಾಲೇಜು ವಿದ್ಯಾರ್ಥಿಗಳ ಮೂಲಕ ಹೆಜ್ಜೆ ಇರಿಸಿದೆ.

ಶಾಲಾ– ಕಾಲೇಜುಗಳಲ್ಲಿ ‘ಚುನಾವಣಾ ಸಾಕ್ಷರತಾ ಕ್ಲಬ್’ ಸ್ಥಾಪಿಸಿ ಇದರ ಮೂಲಕ ವಿದ್ಯಾರ್ಥಿಗಳಿಗೆ ಪ್ರಬಂಧ, ರಸಪ್ರಶ್ನೆ, ಕೊಲಾಜ್ ತಯಾರಿಕೆ, ಚಿತ್ರ ಬಿಡಿಸುವುದು, ಪೋಸ್ಟರ್ ತಯಾರಿಕೆ ಮೊದಲಾದ ಸ್ಪರ್ಧೆಗಳನ್ನು ನಡೆಸಲು ಕಟ್ಟುನಿಟ್ಟಾಗಿ ಆದೇಶಿಸಿದೆ. ಶಾಲಾ ಕಾಲೇಜುಗಲ್ಲಿ ಆಯ್ಕೆ ಯಾದ ವಿದ್ಯಾರ್ಥಿಗಳನ್ನು ಜಿಲ್ಲಾಮಟ್ಟಕ್ಕೆ ಕಳುಹಿಸಿ ಅಲ್ಲಿಂದ ರಾಜ್ಯ ಮಟ್ಟದಲ್ಲಿ ಸ್ಪರ್ಧೆ ನಡೆಸಲು ಕ್ರಮಕೈಗೊಂಡಿದೆ.

ಇದರಂತೆ ಪೊನ್ನಂಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜು ಮತ್ತು ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಚುನಾವಣಾ ಸಾಕ್ಷರತಾ ಕ್ಲಬ್ ಸ್ಥಾಪಿಸಿ ಅದರ ಮೂಲಕ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು.

ವಿದ್ಯಾರ್ಥಿಗಳು ಚುನಾವಣೆ ನಡೆಸುವ ಪ್ರಕ್ರಿಯೆ, ಮತದಾನದ ವ್ಯವಸ್ಥೆ, ಚುನಾವಣಾ ಪ್ರಚಾರ, ಅಭ್ಯರ್ಥಿಗಳ ಮಾದರಿ ಭಾವಚಿತ್ರ, ವಿವಿಧ ಪಕ್ಷಗಳ ಮಾದರಿ ಚಿಹ್ನೆ ಮೊದಲಾದವುಗಳನ್ನು ಬಿಡಿಸಿದರು. ಜತೆಗೆ, ಮತದಾನದ ಮಹತ್ವ, ಚುನಾವಣಾ ವ್ಯವಸ್ಥೆಯನ್ನು ಚಿತ್ರಿಸಿ ಗಮನಸೆಳೆದರು.

ಪೊನ್ನಂಪೇಟೆ ಪಿಯು ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ರಮೇಶ್ ರಸಪ್ರಶ್ನೆ ನಡೆಸಿ ಕೊಲಾಜ್ ಮತ್ತು ಪೋಸ್ಟರ್ ತಯಾರಿಕೆ ಬಗ್ಗೆ ಮಾರ್ಗದರ್ಶನ ನೀಡಿದರು.

ಬಾಳೆಲೆ ವಿಜಯಲಕ್ಷ್ಮಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸ್ಪರ್ಧೆಯನ್ನು ಉಪನ್ಯಾಸಕರಾದ ಜೆ.ಸೋಮಣ್ಣ, ಎನ್.ಕೆ.ಪ್ರಭು ನಡೆಸಿಕೊಟ್ಟರು.

ವಿದ್ಯಾರ್ಥಿಗಳು ಚುನಾವಣಾ ಸಾಕ್ಷರತಾ ಕ್ಲಬ್‌ನಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಕೆಲವು ವಿದ್ಯಾರ್ಥಿಗಳು ಇಂಟರ್‌ನೆಟ್‌, ಗ್ರಂಥಾಲಯ ಮೊದಲಾದ ಕಡೆ ಚುನಾವಣೆಗೆ ಸಂಬಂಧಿಸಿದ ಚಿತ್ರಗಳನ್ನು ತಂದು ಕೊಲಾಜ್ ಅನ್ನು ತಯಾರಿಸಿದರು. ಚುನಾವಣೆ ಮತ್ತು ಮತದಾನವನ್ನು ಹಬ್ಬದಂತೆ ಸ್ವೀಕರಿಸಬೇಕು ಎಂಬ ಸಂದೇಶವನ್ನು ಸಾರಿದರು.

ವಿವಿಧ ಸ್ಪರ್ಧೆಗಳ ವಿಜೇತರು:

ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ.ಫಿರ್ದೋಸ್, ಎ.ಜೆ.ಮಾನಸಾ, ಕೆ.ಎ.ಸನಾ, ಕೊಲಾಜ್ ಸಿದ್ಧಪಡಿಸುವ ಸ್ಪರ್ಧೆಯಲ್ಲಿ ಎಂ.ಜೆ. ತನುಜಾ, ಕೆ.ಆರ್.ಮಮತಾ, ಎಂ.ಯು. ಅನಿತಾ, ಪೋಸ್ಟರ್ ತಯಾರಿಕೆಯಲ್ಲಿ ಕೆ.ಎ.ಸನಾ, ಎ.ಪಿ.ಯಶೋದಾ, ಪಿ.ಎಸ್.ಗಗನ್, ಪ್ರಬಂಧ ಸ್ಪರ್ಧೆಯಲ್ಲಿ ಕೆ.ವೈ.ಭೋಜಮ್ಮ, ಟಿ.ಸಿ. ಪ್ರೇಮಾ, ಎಚ್.ಕೆ.ನಯನಾ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT