ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು: ಕಾಡಾನೆ ಹಾವಳಿ, ಕೃಷಿ ಮಾಡದೇ ಭೂಮಿ ಪಾಳು ಬಿಟ್ಟ ರೈತರು

ವರ್ಷದ ಶ್ರಮ ಕೊನೆಯಲ್ಲಿ ಹಾಳು: ಕಾಡಾನೆ ಹಾವಳಿಗೆ ಕಂಗಾಲಾದ ಅನ್ನದಾತರು
Last Updated 26 ನವೆಂಬರ್ 2022, 5:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಕೆಲವು ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಗದ್ದೆಗಳಲ್ಲಿನ ಭತ್ತವನ್ನು ತಿಂದು, ತುಳಿದು ನಾಶಪಡಿಸುವ ಕಾಡಾನೆಗಳು ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಕಾಫಿಯನ್ನೂ ಬಿಡುತ್ತಿಲ್ಲ. ಇವುಗಳ ಉಪಟಳವನ್ನು ಸಹಿಸಲಾಗದ ಕೃಷಿಕರು ಈಗಾಗಲೇ ಬಹಳಷ್ಟು ಗದ್ದೆಗಳನ್ನು ಪಾಳು ಬಿಟ್ಟಿದ್ದಾರೆ. ಕೃಷಿ ಮಾಡಿದವರೂ ಕೂಡಾ ಕಣ್ಣೀರು ಹಾಕುತ್ತಿದ್ದಾರೆ.

ಕಾಡಾನೆ ಹಾವಳಿ, ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಭತ್ತದ ಕಣಜ ಎಂದು ಹೆಸರು ಪಡೆದಿದ್ದ ದಕ್ಷಿಣ ಕೊಡಗು ಇಂದು ಬರಿದಾದ ಕಣಜ ವಾಗಿದೆ. ಗೋಣಿಕೊಪ್ಪಲು ಬಳಿಯ ಕೈಕೇರಿ, ಕಳತ್ಮಾಡು, ಅತ್ತೂರು, ಕಾಡಾನೆಗಳ ಹಾವಳಿ ಮಿತಿ ಮೀರಿದೆ.

ಈ ಭಾಗದಲ್ಲಿ ರಾತ್ರಿ ವೇಳೆ ಇರಲಿ, ಹಗಲಿನಲ್ಲಿಯೂ ಧೈರ್ಯವಾಗಿ ನಡೆದಾಡಲಾಗದ ಸ್ಥಿತಿ ಎದುರಾಗಿದೆ. ಕಾಡು ಬಿಟ್ಟು ಊರು ಸೇರಿರುವ ಕಾಡಾನೆ ಹಿಂಡು ಕಾಫಿ ತೋಟವನ್ನೇ ನೆಲೆ ಮಾಡಿಕೊಂಡಿವೆ. ಹಗಲಿನ ವೇಳೆಯಲ್ಲಿಯೇ ಒಂದು ತೋಟದಿಂದ ಮತ್ತೊಂದು ತೋಟಕ್ಕೆ ನಿರಾತಂಕವಾಗಿ ಸಂಚರಿಸುತ್ತಿವೆ.

ಹಗಲಿನಲ್ಲಿ ಕಾಫಿ ತೋಟದಲ್ಲಿ ತಂಗುವ ಕಾಡಾನೆ ಹಿಂಡು ಸಂಜೆ ಯಾಗುತ್ತಿದ್ದಂತೆ ಭತ್ತದ ಗದ್ದೆಗಳಿಗೆ ನುಗ್ಗುತ್ತಿವೆ. ಇದರಿಂದ ಭತ್ತದ ಬೆಳೆ ಕೈಸೇರದಂತಾಗುತ್ತಿದೆ. ಹೀಗಾಗಿ, ರೈತರು ಕೃಷಿಯ ಸಹವಾಸವೇ ಬೇಡ ಎನ್ನುವ ಸ್ಥಿತಿಗೆ ತಲುಪಿದ್ದಾರೆ.

ಕೈಕೇರಿ ಅತ್ತೂರಿನ ಜಪ್ಪೆಕೋಡಿ ರಾಜ ಅವರ 3 ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಫಸಲನ್ನು ಸಂಪೂರ್ಣವಾಗಿ ತಿಂದು ಹಾಕಿವೆ. ಜತೆಗೆ, ತೋಟದಲ್ಲಿದ್ದ ಅಡಿಕೆ, ತೆಂಗುಗಳನ್ನು ಬುಡಸಮೇತ ಕಿತ್ತು ತಿಂದಿವೆ. ಮಾಯಮುಡಿ, ಭದ್ರಗೋಳ, ತಿತಿಮತಿ, ಹೆಬ್ಬಾಲೆ, ನೋಕ್ಯ, ದೇವರಪುರ ಭಾಗದಲ್ಲಿಯೂ ಇವುಗಳ ಉಪಟಳ ಅತಿಯಾಗಿದೆ. ನೊಕ್ಯದ ಚೆಪ್ಪುಡೀರ ಕಾರ್ಯಪ್ಪನವರ ಕುಟುಂಬಕ್ಕೆ ಸೇರಿದ ಕಾಫಿ ತೋಟದಲ್ಲಿಯೇ ಕಾಡಾನೆ ಹಿಂಡು ಹಗಲಿನಲ್ಲಿಯೇ ಕಾಣಿಸಿಕೊಳ್ಳುತ್ತಿವೆ. ರಾತ್ರಿ ವೇಳೆ ಸುತ್ತಾಡುವ ಈ ಆನೆಗಳು ಹಗಲಿನ ವೇಳೆ ಇಲ್ಲಿಗೆ ಬಂದು ಸೇರುತ್ತವೆ.

‘ತಿತಿಮತಿ ಭಾಗದಲ್ಲಿ ಕಾಡಾನೆ ಮಾತ್ರವಲ್ಲ ಕಾಡು ಹಂದಿ, ಮಂಗಗಳ ಹಾವಳಿಯೂ ಅತಿಯಾಗಿದೆ. ಯಾವ ಬೆಳೆಯನ್ನೂ ಬೆಳೆಯಲು ಸಾಧ್ಯ ವಾಗುತ್ತಿಲ್ಲ. ಜೀವನ ಬಹಳ ಯಾತ ನಾಮಯವಾಗಿದೆ. ಭೂಮಿ ಇದ್ದರೂ ಕಾರ್ಮಿಕರ ರೀತಿ ಬದುಕಬೇಕಾದ ಸ್ಥಿತಿ ಇದೆ’ ಎಂದು ನೋವು ತೋಡಿಕೊಳ್ಳುತ್ತಾರೆ ಅಲ್ಲಿನ ಪ್ರೇಮ.

‘ಕಾಡಾನೆಗಳ ನಿಯಂತ್ರಣಕ್ಕೆ ಅರಣ್ಯಾಧಿಕಾರಿಗಳು ನಾಗರಹೊಳೆ ಅರಣ್ಯದ ದಡದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ರೈಲ್ವೆ ಹಳಿ ನಿರ್ಮಿಸಿದ್ದಾರೆ. ಆದರೆ, ಅವುಗಳೆಲ್ಲ ಕಳಪೆ ಕಾಮಗಾರಿಯಿಂದ ಕೇವಲ 2 ವರ್ಷದಲ್ಲಿ ಕುಸಿದು ಬಿದ್ದಿವೆ. ಕೆಲವು ಕಡೆ ಬೇಲಿಯೇ ಇಲ್ಲದಂತಾಗಿವೆ.

ನಿರ್ವಹಣೆ ಕೊರೆತೆ ಒಂದು ಕಡೆಯಾದರೆ ಕಳಪೆ ಕಾಮಗಾರಿ ಮತ್ತೊಂದು ಕಡೆ. ಹೀಗಾಗಿ ಕೇಂದ್ರ ಸರ್ಕಾರದ ಈ ಮಹತ್ವದ ಯೋಜನೆ ಅರಣ್ಯಾಧಿಕಾರಿಗಳ ಭ್ರಷ್ಟಾಚಾರದಿಂದಾಗಿ ಮಣ್ಣು ಪಾಲಾಗಿದೆ’ ಎನ್ನುತ್ತಾರೆ ನೊಕ್ಯದ ಕಾಫಿ ಬೆಳೆಗಾರ ಚೆಪ್ಪುಡೀರ ಕಾರ್ಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT