ಸುಂಟಿಕೊಪ್ಪ: ಗದ್ದೆಯಲ್ಲಿ ಹುಲ್ಲು ಮೇಯುತ್ತಿದ್ದ ತೆನೆ (ಗಬ್ಬ) ಹಸುವೊಂದರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಯ ಹೊರೂರು ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಗಂಭೀರವಾಗಿ ಗಾಯಗೊಂಡ ಹಸು ಕಾಫಿ ಬೆಳೆಗಾರರಾದ ದೇವಿ ಪ್ರಸಾದ್ ಕಾಯರ್ ಮಾರ್ ಅವರಿಗೆ ಸೇರಿದೆ. ಹಸುವಿನ ಶಬ್ದ ಕೇಳಿ ಮಾಲೀಕರು ನೋಡಿದಾಗ ಕಾಡಾನೆ ದಾಳಿಯಿಂದ ಹೊಟ್ಟೆಯ ಭಾಗಕ್ಕೆ ಗಂಭೀರ ಗಾಯಗೊಂಡು ಕೆಳಗೆ ಬಿದ್ದು ಒದ್ದಾಡುತ್ತಿರುವುದು ಕಾಣಿಸಿದೆ.
ತಮ್ಮ ಗದ್ದೆಯ ಬಳಿ ಬಂದ ಕಾಡಾನೆಯ ವಿಚಾರ ತಿಳಿದ ಮಾಲೀಕರು ಮತ್ತು ಅಕ್ಕಪಕ್ಕದವರು ಆತಂಕಗೊಂಡಿದ್ದಾರೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತುರ್ತು ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಹಸುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ.