ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ನೆಮ್ಮದಿ ಕಸಿದ ಕಾಡಾನೆಗಳು; ಆತಂಕ

ಯವಕಪಾಡಿ, ಪೇರೂರು, ಪಾಲಂಗಾಲ ಗ್ರಾಮಗಳಲ್ಲಿ ನಿಲ್ಲದ ಉಪಟಳ; ದಿನವೂ ತಪ್ಪದ ಭೀತಿ
Last Updated 6 ಜನವರಿ 2023, 11:18 IST
ಅಕ್ಷರ ಗಾತ್ರ

ನಾಪೋಕ್ಲು: ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿನ ರೈತರು ಕಾಡಾನೆಗಳ ಕಾಟದಿಂದ ಕಂಗೆಟ್ಟಿದ್ದಾರೆ. ಯವಕಪಾಡಿ, ಪೇರೂರು, ಪಾಲಂಗಾಲ ಗ್ರಾಮ ವ್ಯಾಪ್ತಿಯಲ್ಲಿ ನಿತ್ಯವೂ ಕಾಡಾನೆಗಳ ದಾಳಿ ಮುಂದುವರಿದಿದ್ದು, ಈ ಭಾಗದ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಕಕ್ಕಬ್ಬೆ-ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ನಿಯಂತ್ರಣ ಕೈಗೊಳ್ಳುವಂತೆ ಹಾಗೂ ಗ್ರಾಮಸ್ಥರಿಗೆ ಸಂಕಷ್ಟ ತಂದೊಡ್ಡುತ್ತಿರುವ ಪುಂಡಾನೆ ಸೆರೆ ಹಿಡಿಯುವಂತೆ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಅರಣ್ಯ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಯವಕಪಾಡಿ ಗ್ರಾಮವು ಬ್ರಹ್ಮಗಿರಿ ಮೀಸಲು ಅರಣ್ಯ ವ್ಯಾಪ್ತಿಯಲ್ಲಿದ್ದು ಅರಣ್ಯ ಹಕ್ಕು, ಸಮುದಾಯ ಅರಣ್ಯ ಹಕ್ಕು ಪ್ರದೇಶಗಳನ್ನು ಹೊಂದಿದೆ. ಅರಣ್ಯದಂಚಿನಲ್ಲಿ ವಾಸವಾಗಿರುವ ಗಿರಿಜನರು ಕಾಡಾನೆಗಳ ಉಪಟಳಕ್ಕೆ ಹೈರಾಣಾಗಿದ್ದಾರೆ. ಜಿಲ್ಲೆಯ ಅತ್ಯಂತ ಎತ್ತರದ ಶಿಖರ ಎಂಬ ಖ್ಯಾತಿಯ ತಡಿಯ೦ಡಮೋಳ್ ಬೆಟ್ಟ ಶ್ರೇಣಿಯು ಈ ವ್ಯಾಪ್ತಿಯಲ್ಲಿದ್ದು ಪ್ರವಾಸಿಗರು ವೀಕ್ಷಣೆಗೆ ಬರುತ್ತಿದ್ದಾರೆ. ಆದರೆ, ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದ್ದು, ಕೃಷಿ ಫಸಲು ನಾಶವಾಗುತ್ತಿದೆ. ಇಲ್ಲಿಯವರೆಗೆ 3 ಮಂದಿ ಗ್ರಾಮಸ್ಥರು ಕಾಡಾನೆಗಳ ತುಳಿತಕ್ಕೆ ಬಲಿಯಾಗಿದ್ದಾರೆ. ಕೃಷಿಕರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ,ಪ್ರವಾಸಿಗರು, ವಾಹನ ಚಾಲಕರು ಈ ವ್ಯಾಪ್ತಿಯಲ್ಲಿ ಭಯದಿಂದ ಸಂಚರಿಸುವಂತಾಗಿದೆ.

ಇನ್ನೂ ಪಾಲಂಗಾಲ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಒಂಟಿ ಸಲಗವೊಂದು ಇನ್ನಿಲ್ಲದ ಉಪಟಳ ನೀಡುತ್ತಿದೆ. ಬೆಟ್ಟದ ತಪ್ಪಲಿನಲ್ಲಿ ನೀರಿನ ಸಂಗ್ರಹ ಇಲ್ಲದಿರುವುದರಿಂದ ಕಾಫಿ ಬೆಳೆಗಾರರು ತೆಗೆಸಿರುವ ಕೆರೆಗಳೇ ಕಾಡಾನೆಗಳ ನೆಚ್ಚಿನ ತಾಣವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿ ಕಾಡಿಗಟ್ಟಿದರೂ ಮತ್ತೆ ಮತ್ತೆ ನಾಡಿಗೆ ವಾಪಾಸ್ಸಾಗುತ್ತಿವೆ ಎನ್ನುತ್ತಾರೆ ಗ್ರಾಮಸ್ಥರು.

ಮಲೆತಿರಿಕೆ ಬೆಟ್ಟದಿಂದ ಚೇಲಾವರ ಬೆಟ್ಟದವರೆಗೆ ಸರ್ಕಾರದ ಆನೆ ಕಂದಕ ಯೋಜನೆ ಇನ್ನೂ ಕಾರ್ಯಗತವಾಗಿಲ್ಲ. ಗ್ರಾಮದ ರೈತರ ಮಕ್ಕಳು ಬೆಂಗಳೂರಿನಲ್ಲಿ ಶಿಕ್ಷಣ, ಉದ್ಯೋಗದಲ್ಲಿದ್ದು ರಾತ್ರಿ ವೇಳೆ ಪಯಣಿಸುವವರನ್ನು ಭಯದಿಂದಲೇ ಕರೆತರಬೇಕಿದೆ. ಕಾಡಾನೆಗಳ ಉಪಟಳದಿಂದ ಗ್ರಾಮದಲ್ಲಿ ಹಣ್ಣಿನ ಗಿಡಗಳು, ಭತ್ತ, ಬಾಳೆ, ತೆಂಗು ಮತ್ತಿತರ ಕೃಷಿಭೂಮಿ ಹಾಳಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ನಿವೃತ್ತ ಪ್ರಾಂಶುಪಾಲರಾದ ಸುಲೋಚನಾ.

‘ಅರಣ್ಯ ಸಂರಕ್ಷಣಾಧಿಕಾರಿಗಳು ಯವಕಪಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಕೃಷಿಕರು ಬೆಳೆದ ಏಲಕ್ಕಿ, ಕಾಫಿ, ಬಾಳೆ, ಅಡಿಕೆ ನಾಶವಾಗಿದ್ದು ಸೂಕ್ತ ಪರಿಹಾರ ಒದಗಿಸಬೇಕು. ಅರಣ್ಯದಂಚಿನಲ್ಲಿರುವ ಗಿರಿಜನರ ಹಾಡಿಗೆ ತೆರಳುವ ರಸ್ತೆಯಲ್ಲಿ ಬೀದಿ ದೀಪಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರಾದ ಕಾವೇರಪ್ಪ, ರಮೇಶ್, ಪೊನ್ನಪ್ಪ, ಸೋಮಣ್ಣ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT