ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಪೋವಾಗೆ ಆಘಾತ: ಸೆಮಿಗೆ ಮುಗುರುಜಾ

Last Updated 6 ಜೂನ್ 2018, 20:05 IST
ಅಕ್ಷರ ಗಾತ್ರ

ಪ್ಯಾರಿಸ್‌: ಅಮೋಘ ಆಟ ಆಡಿದ ಸ್ಪೇನ್‌ನ ಗಾರ್ಬೈನ್‌ ಮುಗುರುಜಾ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದಾರೆ.

ಬುಧವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಕ್ವಾರ್ಟರ್‌ಫೈನಲ್‌ ಹೋರಾಟದಲ್ಲಿ ಮುಗುರುಜಾ ಅವರು ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ ಅವರನ್ನು 6–2, 6–1ರಿಂದ ಸೋಲಿಸಿದರು.

ಎರಡು ವರ್ಷಗಳ ನಂತರ ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ಕಣಕ್ಕಿಳಿದಿರುವ ರಷ್ಯಾದ ಮರಿಯಾ ಅವರು ಸ್ಪೇನ್‌ನ ಮೂರನೇ ಶ್ರೇಯಾಂಕಿತ ಆಟಗಾರ್ತಿ ವಿರುದ್ಧ ಹೀನಾಯ ಸೋಲು ಕಂಡರು. ಪ್ರಶಸ್ತಿ ಗೆಲ್ಲುವ ಮೆಚ್ಚಿನ ಆಟಗಾರ್ತಿ ಎಂದೇ ನಿರೀಕ್ಷೆ ಹುಟ್ಟಿಸಿದ್ದ ಮರಿಯಾಅವರು 2012ರ ಆಸ್ಟ್ರೇಲಿಯನ್‌
ಓಪನ್‌ ಟೆನಿಸ್‌ನ ನಂತರ ಅನುಭವಿಸಿದ ಅತ್ಯಂತ ಕೆಟ್ಟ ಸೋಲು ಇದಾಗಿದೆ.

2016ರಲ್ಲಿ ಫ್ರೆಂಚ್‌ ಓಪನ್‌ ಗೆದ್ದಿದ್ದ ಮುಗುರುಜಾ ಅವರು ಪಂದ್ಯ ಆರಂಭದಿಂದಲೂ ಬಿರುಸಿನ ಆಟಕ್ಕಿಳಿದರು. ಮೊದಲ ಸೆಟ್‌ನಲ್ಲಿಯೇ ಎದುರಾಳಿಗೆ ಪ್ರಬಲ ಪೈಪೋಟಿ ಒಡ್ಡಿದರು. ಮುಗುರುಜಾ ಅವರ ಆಟದಿಂದ ಒತ್ತಡಕ್ಕೊಳಗಾದ ಶರಪೋವಾ ಮೊದಲನೇ ಸೆಟ್‌ನಲ್ಲಿ ಒಂದು ಬ್ರೇಕ್‌ ಪಾಯಿಂಟ್‌ ಪಡೆಯಲು ಸಾಧ್ಯವಾಗಲಿಲ್ಲ. 

ಆದರೆ, ಪಂದ್ಯ ಆರಂಭವಾಗಿ 29 ನಿಮಿಷಗಳ ನಂತರ ಶರಪೋವಾ ಅವರು ಕೆಲಕಾಲ ಗುಣಮಟ್ಟದ ಆಟ ಆಡಿದರು. ಆದರೆ, ಮುಗುರುಜಾ ಅವರ ಸವಾಲು ಮೀರುವಲ್ಲಿ ರಷ್ಯಾದ ಆಟಗಾರ್ತಿ ವಿಫಲವಾದರು. ಮುಗುರುಜಾ ಅವರು ಮೊದಲನೇ ಸೆಟ್‌ನಲ್ಲಿ ಐದು ವಿನ್ನರ್‌ಗಳನ್ನು ಗಳಿಸಿದರು. ಕಳೆದ ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದ ಶರಪೋವಾ ಅವರನ್ನು ತಬ್ಬಿಬ್ಬುಗೊಳಿಸಿದ ಗಾರ್ಬೈನ್‌ ಸುಲಭವಾಗಿ ಮೊದಲ ಸೆಟ್‌ ಅನ್ನು ತಮ್ಮದಾಗಿಸಿಕೊಂಡರು.

ಎರಡನೇ ಸೆಟ್‌ನಲ್ಲಿ ಶರಪೋವಾ ಅವರು ತಿರುಗೇಟು ನೀಡಲಿದ್ದಾರೆ ಎಂಬ ನಿರೀಕ್ಷೆಯೂ ಹುಸಿಯಾಯಿತು. ಹಲವು ತಪ್ಪುಗಳನ್ನು ಮಾಡಿದ ಅವರು ಸುಲಭವಾಗಿ ಗೇಮ್‌ಗಳನ್ನು ಕೈಚೆಲ್ಲಿದರು. ಹೀಗಾಗಿ ಮುಗುರುಜಾ ಪ್ರತಿ ಗೇಮ್‌ಗಳನ್ನೂ ಗೆದ್ದು ಮುನ್ನಡೆ ಗಳಿಸಿ ಸೆಟ್‌ ಮೇಲಿನ ಹಿಡಿತ ಬಿಗಿ ಮಾಡಿಕೊಂಡರು.

ಶರಪೋವಾ ಅವರು ಎರಡನೇ ಸೆಟ್‌ನಲ್ಲಿ ಒಂದು ಗೇಮ್‌ ಮಾತ್ರ ಜಯಿಸುವಲ್ಲಿ ಯಶಸ್ವಿಯಾದರು. ಆದರೆ, ಆ ಜಯದ ನಂತರ ಅವರ ಸಂತಸ ಬಹಳ ಕಾಲ ಉಳಿಯಲಿಲ್ಲ. ಮುಗುರುಜಾ ಮತ್ತೆ ಮೋಡಿ ಮಾಡಿದರು.

ದೀರ್ಘ ರ‍್ಯಾಲಿಗಳನ್ನು ಆಡಿದ ಸ್ಪೇನ್‌ನ ಆಟಗಾರ್ತಿ ಕ್ರಾಸ್‌ಕೋರ್ಟ್‌, ಬ್ಯಾಕ್‌ಹ್ಯಾಂಡ್‌ ಮತ್ತು ಫೋರ್‌ಹ್ಯಾಂಡ್‌ ಹೊಡೆತಗಳ ಮೂಲಕ ಎದುರಾಳಿಯನ್ನು ಅವಾಕ್ಕಾಗಿಸಿದರು. ಈ ಮೂಲಕ ಗೇಮ್‌ ಜಯಿಸಿದ ಅವರು ನಿರಾಯಾಸವಾಗಿ ಗೆಲುವಿನ ತೋರಣ ಕಟ್ಟಿದರು.

‘ಮತ್ತೊಮ್ಮೆ ಫ್ರೆಂಚ್‌ ಓಪನ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದು ಸಂತಸ ತಂದಿದೆ. ಶ್ರೇಷ್ಠ ಆಟಗಾರ್ತಿಯ ಎದುರೂ ನನ್ನ ಶಕ್ತಿ ಮೀರಿ ಆಡಿದೆ. ಅದರ ಫಲ ಈ ಅಮೋಘ ಜಯ’ ಎಂದು ಮುಗುರುಜಾ ಪಂದ್ಯದ ನಂತರ ಹರ್ಷ ವ್ಯಕ್ತಪಡಿಸಿದರು.

ಹಲೆಪ್‌ಗೆ ಜಯ: ಮಹಿಳೆಯರ ಇನ್ನೊಂದು ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ರುಮೇನಿಯಾದ ಸಿಮೊನಾ ಹಲೆಪ್‌ ಅವರು ಜರ್ಮನಿಯ ಏಂಜೆಲಿಕ್‌ ಕರ್ಬರ್‌ ಅವರ ವಿರುದ್ಧ ಜಯಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ವಿಶ್ವದ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರುಮೇನಿಯಾದ ಆಟಗಾರ್ತಿ ಏಂಜೆಲಿಕ್‌ ಅವರನ್ನು 6–7, 6–3, 6–2 ರಿಂದ ಮಣಿಸಿದರು. ಈ ಜಯದಿಂದಾಗಿ ಸೆಮಿಫೈನಲ್‌ ಪಂದ್ಯದಲ್ಲಿ ಹಲೆಪ್‌ ಹಾಗೂ ಮುಗುರುಜಾ ಅವರು ಎದುರಾಗಲಿದ್ದಾರೆ.

ಹಲೆಪ್‌ ಅವರು ಪಂದ್ಯ ಆರಂಭವಾದ 13 ನಿಮಿಷಗಳಲ್ಲಿ 5 ಗೇಮ್‌ಗಳನ್ನು ಜಯಿಸುವ ಮೂಲಕ ಎದುರಾಳಿಯ ಮೇಲೆ ಒತ್ತಡ ಸೃಷ್ಟಿಯಾಗುವಂತೆ ಮಾಡಿದರು. ಆದರೆ, ಕೂಡಲೇ ಎಚ್ಚೆತ್ತಿಕೊಂಡ ಏಂಜೆಲಿಕ್‌ ಎಚ್ಚರಿಕೆ ಆಟ ಆಡಿದರು.

ಗುಣಮಟ್ಟದ ಆಟ ಆಡಿದ ಅವರು ಸತತವಾಗಿ ಗೇಮ್ ಜಯಿಸಿದರು. ‘ಟ್ರೈ ಬ್ರೇಕರ್‌’ನಲ್ಲೂ ಅವರು ಮೋಡಿ ಮಾಡಿದರು. ಒಂದು ಹಂತದಲ್ಲಿ ಪ್ರಬಲ ಪೈಪೋಟಿಯಿಂದ ಕೂಡಿದ್ದ ಮೊದಲ ಸೆಟ್‌ನ ಕೊನೆಯಲ್ಲಿ ಒತ್ತಡ ಮೀರಿನಿಂತ ಏಂಜೆಲಿಕ್‌, ಛಲದಿಂದ ಹೋರಾಡಿದರು.

ದೀರ್ಘ ರ‍್ಯಾಲಿಗಳನ್ನು ಆಡಿದ ಏಂಜೆಲಿಕ್‌ ಸುಲಭವಾಗಿ ಗೇಮ್‌ ಜಯಿಸಿ ಮುನ್ನಡೆ ತಮ್ಮದಾಗಿಸಿಕೊಂಡರು. ಇದೇ ವೇಳೆ ಆಟದ ರೋಚಕತೆ ಹೆಚ್ಚಿತ್ತು. ನಿರ್ಣಾಯಕ ಎನಿಸಿದ್ದ ಕೊನೆಯ ಗೇಮ್‌ನಲ್ಲಿ ಪ್ರಾಬಲ್ಯ ಮೆರೆದ ಏಂಜೆಲಿಕ್‌ ಸೆಟ್‌ ಗೆದ್ದು ಸಂಭ್ರಮಿಸಿದರು.

ಎರಡನೇ ಸೆಟ್‌ನಲ್ಲೂ ಏಂಜೆಲಿಕ್‌ ಅವರು ಉತ್ತಮ ಆರಂಭ ಕಂಡರು. ಆದರೆ, ಅಷ್ಡರಲ್ಲೇ ಸಿಮೊನಾ ಅವರ ಆಟ ರಂಗೇರಿತು. ಈ ಮೂಲಕ ಅವರು ಎರಡನೇ ಸೆಟ್‌ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿನ ಗೆಲುವಿನ ವಿಶ್ವಾಸವನ್ನು ಅವರು ಮೂರನೇ ಸೆಟ್‌ನಲ್ಲೂ ಮುಂದುವರಿಸಿ ನಾಲ್ಕರ ಹಂತಕ್ಕೆ ಲಗ್ಗೆ ಇಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT