ಸೋಮವಾರ, ಡಿಸೆಂಬರ್ 9, 2019
20 °C
ಜನವಸತಿ ಪ್ರದೇಶಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿರುವ ಆನೆಗಳು

‌ಕಟ್ಟೆಪುರ: ಕಾಡಾನೆ ದಾಂದಲೆ, ಬೆಳೆ ನಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶನಿವಾರಸಂತೆ: ಸಮೀಪದ ಕಟ್ಟೆಪುರ, ಆಗಳಿ, ನಿಲುವಾಗಿಲು ಗ್ರಾಮಗಳ ಸುತ್ತಮುತ್ತ ಕಳೆದ ಒಂದು ವಾರದಿಂದ ಕಾಡಾನೆಗಳು ದಾಂದಲೆ ಎಬ್ಬಿಸುತ್ತಿದ್ದು, ಬೆಳೆ ನಾಶಪಡಿಸುತ್ತಿವೆ.

9 ಆನೆಗಳ ಒಂದು ಗುಂಪು, 7 ಆನೆಗಳ ಮತ್ತೊಂದು ಗುಂಪು ಜತೆಗೆ 1 ಒಂಟಿ ಕಾಡಾನೆ ಕಾಫಿ ತೋಟಗಳಲ್ಲಿ, ಜನವಸತಿ ಪ್ರದೇಶಗಳಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ. ಹೇಮಾವತಿ ನದಿ ಹಿನ್ನೀರು ಪ್ರದೇಶದ ಉಂಬಳಿ ಬೆಟ್ಟದಿಂದ ಕಟ್ಟೆಪುರ ಅರಣ್ಯಕ್ಕೆ ಬಂದಿರುವುದಾಗಿ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಕೆ.ಕೊಟ್ರೇಶ್ ತಿಳಿಸಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾಡಾನೆಗಳನ್ನು ಕಟ್ಟೆಪುರ ಅರಣ್ಯದಿಂದ ಬೇರೆಡೆಗೆ ಅಟ್ಟಲು ಪ್ರಯತ್ನಿಸುತ್ತಿದ್ದರೂ ಸಾಧ್ಯವಾಗುತ್ತಿಲ್ಲ. ದಾಂದಲೆ ಎಬ್ಬಿಸುತ್ತಿದ್ದ ಒಂಟಿ ಕಾಡಾನೆಯನ್ನು ಕಟ್ಟೆಪುರ ಅರಣ್ಯಕ್ಕೆ ಅಟ್ಟಿರುವುದಾಗಿ ಅಧಿಕಾರಿ ತಿಳಿಸಿದ್ದಾರೆ.

ನೆರೆಯ ಹಾಸನ ಜಿಲ್ಲೆಯ ಕಾಡಿನಿಂದ ಆನೆಗಳು ತಮ್ಮ ಮರಿಗಳೊಂದಿಗೆ ಕಟ್ಟೆಪುರ ಅರಣ್ಯಕ್ಕೆ ಬಂದು ಗ್ರಾಮಗಳಲ್ಲಿ ಸುತ್ತಾಡುತ್ತಿವೆ. ಅರಣ್ಯ ಇಲಾಖೆ ಅಳವಡಿಸಿರುವ ಸೌರಬೇಲಿಯನ್ನು ಕಿತ್ತು ಆನೆಗಳು ಸರಾಗವಾಗಿ ಕಾಡಿನಿಂದ ನಾಡಿಗೆ ಲಗ್ಗೆ ಹಾಕುತ್ತಿವೆ. ಹಗಲಿನಲ್ಲಿ ತೋಟ–ಗದ್ದೆಗಳಿಗೆ ನುಗ್ಗಿ ಬೆಳೆಗಳನ್ನು ತಿಂದು ಹೇಮಾವತಿ ಹಿನ್ನೀರಿನಲ್ಲಿ ಚೆಲ್ಲಾಟವಾಡುತ್ತಿವೆ.

ಆನೆಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಈ ಭಾಗದ ರೈತರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಪ್ರತಿಕ್ರಿಯಿಸಿ (+)