ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್‌ಹೋಲ್‌ಗೆ ಬಿದ್ದ ಮರಿಯಾನೆ ರಕ್ಷಣೆ

Last Updated 27 ಜುಲೈ 2021, 16:27 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ತಾಯಿಯೊಂದಿಗೆ ಸೋಮವಾರ ರಾತ್ರಿ ಸಂಚಾರ ನಡೆಸುತ್ತಿದ್ದ ವೇಳೆಯಲ್ಲಿ ಆಯ ತಪ್ಪಿ ಶೌಚಾಲಯದ ಗುಂಡಿಗೆ ಬಿದ್ದು ಜೀವನ್ಮರಣ ಹೋರಾಟ ನಡೆಸಿದ 5 ವರ್ಷದ ಗಂಡು ಮರಿ ಆನೆಯನ್ನು ದೇವರಪುರ ಭದ್ರಗೋಳದಲ್ಲಿ ಮಂಗಳವಾರ ರಕ್ಷಿಸಲಾಯಿತು.

ದೇವರಪುರ ಭದ್ರಗೊಳದ ಕಾಫಿ ಬೆಳೆಗಾರ ಸುಬ್ರಮಣಿ ಅವರ ಮನೆಯ ಸಮೀಪ ತಾಯಿಯೊಂದಿಗೆ ಬಂದ ಕಾಡಾನೆ ಮರಿ ಬಾಳೆ, ತೆಂಗು, ಅಡಿಕೆಯನ್ನು ತಿಂದು ಕಾಡಿನತ್ತ ಸಂಚರಿಸುವ ವೇಳೆಯಲ್ಲಿ ಮನೆಯ ಸಮೀಪದಲ್ಲೇ ಇದ್ದ ಶೌಚಾಲಯ ಗುಂಡಿಯ ಮೇಲಿನ ಸಿಮೆಂಟ್ ಹಾಸಿನ ಮೇಲೆ ಹೆಜ್ಜೆ ಇಟ್ಟಿದೆ. ಆನೆಯ ಭಾರ ತಡೆಯಲಾಗದೆ ಸಿಮೆಂಟ್ ಹಾಸು ಕುಸಿದಿದೆ. ಇದರೊಂದಿಗೆ ಆನೆ ಮರಿಯೂ ಕೂಡ ಗುಂಡಿಗೆ ಬಿದ್ದಿದೆ.

ಬೆಳಗ್ಗಿನ ಜಾವ 4 ಗಂಟೆ ವೇಳೆಯಲ್ಲಿ ಘಟನೆ ನಡೆದಿದ್ದು ಆನೆ ಮರಿ ಮೇಲೆ ಬರಲಾಗದೆ ಘೀಳಿಡತೊಡಗಿದೆ.ಇದನ್ನು ಕಂಡ ತಾಯಿ ಆನೆಯೂ ಕೂಡ ಜೋರಾಗಿ ಕಿರುಚತೊಡಗಿದೆ. ಶಬ್ದ ಕೇಳಿ ಮನೆಯಿಂದ ಇಣುಕಿ ನೋಡಿದ ಸುಬ್ರಮಣಿ ಹೊರಬರಲು ಹೆದರಿ ಬೆಳಕು ಹರಿಯುವ ತನಕ ಕಾದಿದ್ದಾರೆ. ಬಳಿಕ ಹೊರಬಂದು ನೋಡಿದಾಗ ಶೌಚಾಲಯದಲ್ಲಿ ಅನೆ ಮರಿ ಬಿದ್ದು ನರಳಾಡುತ್ತಿರುವುದು ಗೋಚರಿಸಿದೆ.

ಸುಬ್ರಮಣಿ ಶೌಚಾಲಯದ ಒಂದು ಬದಿಯ ಮಣ್ಣು ತೆಗೆದು ಆನೆಮರಿಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಅದು ಸಫಲವಾಗಲಿಲ್ಲ. ಬಳಿಕ ತಿತಿಮತಿ ಅರಣ್ಯಾಧಿಕಾರಿಗಳಿಗೆ ತಿಳಿಸಿದಾಗ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಉತ್ತಪ್ಪ ಮತ್ತಿಗೋಡು ಸಾಕಾನೆ ಶಿಬಿರದ ಕೃಷ್ಣ ಆನೆಯ ಸಹಾಯ ದಿಂದ ಮೇಲಕ್ಕೆ ಎತ್ತಿದರು. ಗುಂಡಿಯಿಂದ ಮೇಲಕ್ಕೆ ಬಂದ ಮರಿಯಾನೆ ಮೇಲೆ ಏಳಲು ಸ್ವಲ್ಪ ಹೊತ್ತು ತಡಬಡಿಸಿ ಬಳಿಕ ಮೆಲ್ಲನೆ ಎದ್ದು ಕಾಡಿನತ್ತ ತೆರಳಿತು.

ವನ್ಯ ಜೀವಿ ವೈದ್ಯಾಧಿಕಾರಿ ಡಾ.ಸನತ್ ಆನೆ ಮರಿಯ ಆರೋಗ್ಯ ತಪಾಸಣೆ ನಡೆಸಿದರು. ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್ ಹನುಗುಂದ, ಅರಣ್ಯ ವಲಯ ಸಂರಕ್ಷಕ ಉಮಾಶಂಕರ್, ಆರ್ ಆರ್ ಟಿ ತಂಡ ಹಾಗೂ ಅರಣ್ಯ ಸಿಬ್ಬಂದಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT