ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾರಿಕೇಡ್‌ನಲ್ಲಿ ಸಿಕ್ಕಿಕೊಂಡ ಆನೆ

‘ಆಪರೇಷನ್ ಎಲಿಫೆಂಟ್’: ರಾತ್ರಿ ವೇಳೆಯೇ ರಕ್ಷಿಸಿ ಕಾಡಿಗಟ್ಟಿದ ಅರಣ್ಯ ಸಿಬ್ಬಂದಿ
Last Updated 20 ನವೆಂಬರ್ 2022, 15:35 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ನೀರು‌ ಕುಡಿಯಲು ಬಂದ ಆನೆಯೊಂದು‌ ಅರಣ್ಯ ಇಲಾಖೆ‌ ಅಳವಡಿಸಿದ್ದ ಕಾಂಕ್ರೀಟ್ ಬ್ಯಾರಿಕೇಡ್‌ನೊಳಗೆ ಸಿಕ್ಕಿಹಾಕಿಕೊಂಡ ಘಟನೆ ಸುಂಟಿಕೊಪ್ಪ ಸಮೀಪದ ತೊಂಡೂರು ಬಳಿ ಶುಕ್ರವಾರ ಮಧ್ಯರಾತ್ರಿ ನಸುಕಿನಲ್ಲಿ ನಡೆದಿದ್ದು, ಇಲಾಖೆಯವರು ವಿಶೇಷ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿ ಕಾಡಿಗೆ ಅಟ್ಟಿದ್ದಾರೆ.

ಸಮೀಪದ ಆನೆಕಾಡು ಮೀಸಲು ಅರಣ್ಯ ಅಂಚಿನಲ್ಲಿ ಬೀಡುಬಿಟ್ಟಿರುವ ಆನೆಗಳ ಪೈಕಿ ಹೆಣ್ಣಾನೆಯು ಕೆರೆಯಲ್ಲಿ ನೀರು ಕುಡಿಯಲು ಬರುವ ಅವಸರಲ್ಲಿ ಕಾಂಕ್ರೀಟ್ ಬ್ಯಾರಿಕೇಡ್‌ನೊಳಗೆ ನುಸುಳಿದೆ. ನುಗ್ಗಿದ ರಭಸಕ್ಕೆ ಹೊಟ್ಟೆಯ ಭಾಗ ಎರಡು ಕಂಬಗಳ ಮಧ್ಯೆ ಸಿಕ್ಕಿಹಾಕಿಕೊಂಡು‌ ಹೊರ ಬರಲಾರದೆ ನೋವಿನಿಂದ ಘೀಳಿಟ್ಟಿದೆ.‌ ಆ ಶಬ್ದಕ್ಕೆ ಅಕ್ಕಪಕ್ಕದ‌ ಜನ‌ ಹೊರಗೆ ಬಂದು ನೋಡಿ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಕುಶಾಲನಗರ ವಲಯ ಅರಣ್ಯಾಧಿಕಾರಿ ಶಿವರಾಮ್ ಮತ್ತು‌ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು. ಅಪಾಯದ ಸೂಚನೆ‌ ಅರಿತ ಸಿಬ್ಬಂದಿ ಕಾರ್ಯಾಚಾರಣೆ‌ ನಡೆಸಿ ಹೊರ ಬರುವಂತೆ ಮಾಡಿದರು.

ಕಾರ್ಯಾಚರಣೆ ಹೀಗಿತ್ತು: ರಾತ್ರಿ ಎರಡು ಮಣ್ಣು‌ ತೆಗೆಯುವ ಯಂತ್ರ, ಹಿಟಾಚಿ, ಸಾಕಾನೆ ವಿಕ್ರಂ‌ನ ಸಹಾಯದಿಂದ ಕಾರ್ಯಾಚರಣೆ ಆರಂಭಿಸಲಾಯಿತು. ಆನೆಯ ಮೈಗೆ ಸೋಪು ನೀರು, ಎಣ್ಣೆ ಹಾಕುವ‌ ಮೂಲಕ ಬ್ಯಾರಿಕೇಡ್‌ನಿಂದ ಹೊರಗೆ ತರಲಾಯಿತು. ಶನಿವಾರ ನಸುಕಿನಲ್ಲಿ ಕಾರ್ಯಾಚರಣೆ ಮುಗಿಯಿತು’ ಎಂದು ಶಿವರಾಮ್ ಮಾಹಿತಿ‌ ನೀಡಿದರು.

ಆನೆಗೆ ಹೆಚ್ಚಿನ ಗಾಯಗಳಾಗದಂತೆ ಬಹಳ ಎಚ್ಚರಿಕೆಯಿಂದ ಕಾರ್ಯಾಚರಣೆ ನಡೆಯಿತು. ಸಮೀಪದಲ್ಲೇ, 3-4 ಆನೆಗಳು ಘೀಳಿಡುತ್ತಿದ್ದ ಶಬ್ದ ಕೇಳಿಸುತ್ತಿತ್ತು. ಈ ಎಲ್ಲ ಅಪಾಯದ ನಡುವೆ ಕಾಡಾನೆ ರಕ್ಷಿಸುವಲ್ಲಿ ಅರಣ್ಯ ಸಿಬ್ಬಂದಿ ಯಶಸ್ವಿಯಾದರು.

ನಾಲ್ಕೈದು ಗಂಟೆಗಳ ಸುದೀರ್ಘ ಕಾರ್ಯಾಚರಣೆಯ‌ ನಂತರ ಕಾಡಾನೆ ಸಿಬ್ಬಂದಿ ಮೇಲೆ ದಾಳಿಗೆ ಮುಂದಾಗಿದೆ. ಸ್ವಲ್ಪ ದೂರದವರೆಗೆ ಅಟ್ಟಿಸಿಕೊಂಡು ಬಂದಿದೆ. ಸಿಬ್ಬಂದಿ ತಪ್ಪಿಸಿಕೊಂಡು ಜೀವ‌ ಉಳಿಸಿಕೊಂಡಿದ್ದಾರೆ.

ಉಪ ವಲಯ ಅರಣ್ಯಾಧಿಕಾರಿಗಳಾದ ಅನಿಲ್ ಡಿಸೋಜ, ದೇವಯ್ಯ, ರಂಜನ್, ಸುಬ್ರಯ, ಸಿಬ್ಬಂದಿ ಹಾಗೂ ಆರ್‌ಆರ್‌ಟಿ ತಂಡದ ಸದಸ್ಯರು, ಗ್ರಾಮಸ್ಥರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಸ್ಥಳಕ್ಕೆ ಮಡಿಕೇರಿ ಉಪ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ, ಸೋಮವಾರಪೇಟೆ ಉಪ ಸಂರಕ್ಷಣಾಧಿಕಾರಿ ಎ.ಎ.ಗೋಪಾಲ್‌ ‌ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT