ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಣಿಕೊಪ್ಪಲು ಶಾಲೆಯಲ್ಲಿ ಧನ್ವಂತರಿ ವನ, ಔಷಧೀಯ ಸಸ್ಯಗಳ ಸಿರಿ

ಹಸಿರಿನಿಂದ ಕಂಗೊಳಿಸುವ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆ
Last Updated 5 ಜೂನ್ 2020, 4:23 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಕೊಡಗು ಪ್ರಾಕೃತಿಕ ಸೌಂದರ್ಯದ ಬೀಡು. ಇಲ್ಲಿ ಎಲ್ಲಿ ನೋಡಿದರೂ ಗಿಡಮರಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಶಾಲಾ ಕಾಲೇಜುಗಳ ಆವರಣದಲ್ಲಿಯೂ ಬಹಳಷ್ಟು ಗಿಡಮರಗಳು ಕಂಡು ಬರುತ್ತಿವೆ. ಅಂತಹ ಶಾಲೆಯಲ್ಲಿ ಗೋಣಿಕೊಪ್ಪಲು ಅನುದಾನಿತ ಪ್ರೌಢಶಾಲೆಯೂ ಒಂದು.

ಕಾವೇರಿ ಕಾಲೇಜಿನ ಪಕ್ಕದಲ್ಲಿರುವ ಈ ಶಾಲೆಯ ಆವರಣದಲ್ಲಿ ನೂರಾರು ಜಾತಿಯ ಗಿಡಮರ ಹಾಗೂ ಔಷಧಿ ಸಸ್ಯಗಳಿವೆ. ಗಿಡಮರಗಳ ಮೇಲೆ ಕುಳಿತು ಕೂಗುವ ಪಕ್ಷಿಗಳ ಕಲರವ, ಕಿವಿಗೆ ಇಂಪು ನೀಡುತ್ತದೆ. ಶಾಲೆಯ ಆವರಣದೊಳಗೆ ಕಾಲಿಟ್ಟ ಕೂಡಲೇ ನಮಗೆ ಧನ್ವಂತರಿ ವನ ಎದುರಾಗುತ್ತದೆ. ಇಲ್ಲಿ ಹತ್ತಾರು ಬಗೆಯ ಔಷಧಿ ಗಿಡಗಳಿವೆ. ಈ ಗಿಡಗಳ ಸಸ್ಯಶಾಸ್ತ್ರೀಯ ಹೆಸರುಗಳ ಫಲಕಗಳನ್ನೂ ಅಳವಡಿಸಲಾಗಿದೆ.

ಇದರ ಪಕ್ಕದಲ್ಲಿ ವೈವಿಧ್ಯಮಯ ಪಕ್ಷಿಗಳಿರುವ ಚಿತ್ರದ ಫಲಕವಿದೆ. ಗಂಧ, ತೇಗ, ಗುಲ್‌ಮೊಹರ್‌, ಗ್ಲೇರಿಸಿಡಿಯ, ಮಾವು, ಹಲಸು, ಸಪೋಟ, ಸೀಬೆ, ಆಲ, ಬೇವು, ಗೋಣಿ ಸೇರಿದಂತೆ ನೂರಾರು ಜಾತಿಯ ಗಿಡಮರಗಳಿವೆ. ಇವೆಲ್ಲ ಮುಂಗಾರು ಪೂರ್ವ ಮಳೆಗೆ ಚಿಗುರಿ ಕಂಗೊಳಿಸುತ್ತಿವೆ. ಶಾಲೆಯ ಆವರಣ ತಪೋವನದಂತಿದೆ.

ಈ ಉದ್ಯಾನದ ಸಂರಕ್ಷಕ ಶಾಲೆಯ ವಿಜ್ಞಾನ ಶಿಕ್ಷಕ ಡಿ.ಕೃಷ್ಣ ಚೈತನ್ಯ. ಪರಿಸರದ ಬಗ್ಗೆ ಅಪಾರ ಕಾಳಜಿ ಹೊಂದಿರುವ ಕೃಷ್ಣ ಚೈತನ್ಯ ವಿಜ್ಞಾನ ಪಾಠದ ಬೋಧನೆ ಜತೆಗೆ ಪರಿಸರದ ಪಾಠವನ್ನೂ ಹೇಳಿಕೊಡುತ್ತಾರೆ. ವರ್ಷದ ಎಲ್ಲ ಸಮಯದಲ್ಲಿಯೂ ಗಿಡಮರಗಳನ್ನು ನೆಡುವುದು ಅವರ ಕಾಯಕವಾಗಿದೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಬಳಿಕ ಆ ಗಿಡವನ್ನು ಶಾಲೆಯ ಆವರಣದಲ್ಲಿ ನೆಟ್ಟು ಪೋಷಿಸುತ್ತಿದ್ದಾರೆ. ಕಾರ್ಯಕ್ರಮದ ನೆನಪಿಗಾಗಿ ನೆಟ್ಟ ಗಿಡಮರಗಳೇ ಇಂದು ಉದ್ಯಾನ ವನವಾಗಿದೆ. ಕೈಗೆ ಸಿಕ್ಕಿದ ಗಿಡಗಳನ್ನೆಲ್ಲಾ ಕೃಷ್ಣ ಚೈತನ್ಯ ಶಾಲೆಯ ಆವರಣದಲ್ಲಿ ನೆಡುತ್ತಿದ್ದಾರೆ. ಅವುಗಳ ಪೋಷಣೆ ಹೊಣೆಯನ್ನು ವಿದ್ಯಾರ್ಥಿಗಳಿಗೆ ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT