ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಗತ್ಯ ವಸ್ತುಗಳ ಬೆಲೆ ಏರಿಕೆ: ಜನ ತತ್ತರ: ವೀಣಾ ಅಚ್ಚಯ್ಯ ಆಕ್ರೋಶ

ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ
Last Updated 7 ಏಪ್ರಿಲ್ 2022, 4:23 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳ ದುರಾಡಳಿತದಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿದ್ದಾರೆ’ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ದೂರಿದರು.

ಕುಟ್ಟ ಕೊಡವ ಸಮಾಜದಲ್ಲಿ ಬುಧವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್, ಡೀಸೆಲ್ ಬೆಲೆ 50 ಪೈಸೆ ಹೆಚ್ಚಾದರೂ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು. ಆದರೆ, ಈಗ ಅಡುಗೆ ಎಣ್ಣೆ, ಅನಿಲ, ವಿದ್ಯುತ್, ಪೆಟ್ರೋಲ್, ಡೀಸೆಲ್ ಹಾಗೂ ರಸಗೊಬ್ಬರ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿದೆ. ಜನಸಾಮಾನ್ಯರು ಬದುಕುವುದೇ ಕಷ್ಟವಾಗಿದೆ. ಆದರೆ, ಬಿಜೆಪಿಯ ನಾಯಕರು ತುಟಿ ಬಿಚ್ಚುತ್ತಿಲ್ಲ’ ಎಂದು ಕಿಡಿಕಾರಿದರು.

ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಮಾತನಾಡಿ, ‘ಎಲ್ಲಾ ಸಮುದಾಯದ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಕಾಂಗ್ರೆಸ್ ಪಕ್ಷ ಶ್ರಮಿಸುತ್ತಿದೆ. ಈಗ ಪಕ್ಷ ಸಂಕಷ್ಟದಲ್ಲಿದ್ದು, ಅದನ್ನು ಅಧಿಕಾರಕ್ಕೆ ತರಬೇಕಾಗಿದೆ. ನಮ್ಮ ಮುಂದಿನ ಪೀಳಿಗೆಯ ಉತ್ತಮ ಭವಿಷ್ಯಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ್ ಮಾಚಯ್ಯ ಮಾತನಾಡಿ, ‘ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕಿದೆ’ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ‘ಕಾಂಗ್ರೆಸ್‌ ಪಕ್ಷವು 70 ವರ್ಷ ಕಟ್ಟಿದ ದೇಶವನ್ನು ಬಿಜೆಪಿ ಕೇವಲ 7 ವರ್ಷಗಳಲ್ಲಿ ಹಾಳು ಮಾಡಿದೆ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಮಂಥರ್‌ ಗೌಡ ಮಾತನಾಡಿ, ‘ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹುಡುಕಬೇಕಾಗಿದೆ ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿಕೆ ನೀಡಿರುವುದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಧಾರ್ಮಿಕವಾಗಿ ಸಮಾಜವನ್ನು ಒಡೆಯಲು ಮುಂದಾಗಿದೆ. ಇದಕ್ಕೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.

ಮುಖಂಡ ಶಿವು ಮಾದಪ್ಪ ಮಾತನಾಡಿದರು. ಕುಟ್ಟ ವಲಯ ಕಾಂಗ್ರೆಸ್ ಅಧ್ಯಕ್ಷ ಎಚ್.ವೈ. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆ

ಕುಟ್ಟ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಮುಕ್ಕಾಟಿರ ನವೀನ್ ಅಯ್ಯಪ್ಪ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಇವರ ಜತೆಯಲ್ಲೇ ಕೆ.ಬಾಡಗದ ಮಾಚಿಮಾಡ ಅಪ್ಪಯ್ಯ, ಧ್ಯಾನ್‌ ದರ್ಶನ್, ಚಿಂಡಮಾಡ ಅಯ್ಯಪ್ಪ, ಉಮ್ಮರ್, ಮುಂಡುಮಾಡ ಚಂಗಪ್ಪ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು.

ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಮೀದೇರಿರ ನವೀನ್, ಮುಖಂಡ ಅಲೀರ ಎರ್ಮು ಹಾಜಿ, ಹಿಂದುಳಿದ ವರ್ಗದ ಅಧ್ಯಕ್ಷ ಬಾನಂಡ ಪೃಥ್ಯು, ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ಕೋಳೇರ ಭಾರತಿ, ರಾಜ್ಯ ಕಾಂಗ್ರೆಸ್ ಸೇವಾದಳದ ಪ್ರಧಾನ ಕಾರ್ಯದರ್ಶಿ ತೆರೆಸಾ ವಿಕ್ಟರ್, ಮುಖಂಡರಾದ ಪಲ್ವಿನ್ ಪೂಣಚ್ಚ ಹಾಜರಿದ್ದರು.

***
ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ನಡೆಯುವ ಸಾಧ್ಯತೆ ಇದೆ. ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ನಿಲ್ಲುವ ಅಭ್ಯರ್ಥಿಯನ್ನು ಗೆಲ್ಲಿಸಬೇಕು.
–ವೀಣಾ ಅಚ್ಚಯ್ಯ, ವಿಧಾನ ಪರಿಷತ್ ಸದಸ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT