ಶನಿವಾರ, ನವೆಂಬರ್ 23, 2019
23 °C
ವಿರಾಜಪೇಟಬಹುದಿನಗಳ ಕೂಗಿಗೆ ಈಗ ಜೀವ, ₹ 14.5 ಕೋಟಿ ಬಿಡುಗಡೆ

ರಸ್ತೆ ವಿಸ್ತರಣೆ: ಪರ, ವಿರೋಧಕ್ಕೆ ವೇದಿಕೆ

Published:
Updated:
Prajavani

ವಿರಾಜಪೇಟೆ: ಪಟ್ಟಣದಲ್ಲೀಗ ಎಲ್ಲಿ ನೋಡಿದರೂ ರಸ್ತೆ ವಿಸ್ತರಣೆಯ ಪರ- ವಿರೋಧದ ಚರ್ಚೆ, ಪ್ರತಿಭಟನೆಗಳದ್ದೇ ಸದ್ದು ಕೇಳಿಸುತ್ತಿದೆ.

ಪಟ್ಟಣದ ಮುಖ್ಯರಸ್ತೆಯು ಅಗತ್ಯಕ್ಕೆ ತಕ್ಕಂತಿಲ್ಲದಿರುವುದರಿಂದ ವಾಹನ ಸಂಚಾರ, ನಿಲುಗಡೆ ಸೇರಿದಂತೆ ಪಾದಚಾರಿಗಳಿಗೆ ಸಮಸ್ಯೆ ಉಂಟಾಗುತ್ತಿದ್ದ ಹಿನ್ನೆಲೆಯಲ್ಲಿ ಮುಖ್ಯರಸ್ತೆಯನ್ನು ಈಗಿನ ಅಗತ್ಯಕ್ಕೆ ತಕ್ಕಂತೆ ವಿಸ್ತರಣೆಗೊಳಿಸಿ ಅಭಿವೃದ್ಧಿ ಪಡಿಸಬೇಕು ಎಂಬ ಕೂಗು ಹಿಂದಿನಿಂದಲೇ ಕೇಳಿ ಬರುತ್ತಿತ್ತು. ರಾಜ್ಯ ಹೆದ್ದಾರಿ– 91 ಅನ್ನು ಮೇಲ್ದರ್ಜೆಗೇರಿಸುವ ಉದ್ದೇಶದಿಂದ ಸಮೀಪದ ಅಮ್ಮತ್ತಿಯಿಂದ ಆರ್ಜಿ ಗ್ರಾಮದವರೆಗಿನ ರಸ್ತೆ ಅಭಿವೃದ್ಧಿಗಾಗಿ ಇದೀಗ ಸುಮಾರು ₹ 14.5 ಕೋಟಿ ಬಿಡುಗಡೆಯಾಗಿದೆ.

ಇದರಲ್ಲಿ ಪಟ್ಟಣ ಸುಂಕದಕಟ್ಟೆ ಬಳಿಯಿಂದ ಗಡಿಯಾರ ಕಂಬ ಮೂಲಕ ಮೀನುಪೇಟೆ ಕೊನೆಯವರೆಗಿನ ರಸ್ತೆ ವಿಸ್ತರಣೆ ಹಾಗೂ ಅಭಿವೃದ್ಧಿಯೂ ಒಳಗೊಂಡಿದೆ. ಇದೇ ವಿಚಾರ ಪಟ್ಟಣದಲ್ಲಿ ಇಂದು ಪರ–ವಿರೋಧ ಚರ್ಚೆ, ಪ್ರತಿಭಟನೆಗಳಿಗೆ ಕಾರಣವಾಗಿದೆ.

ಕೆಲದಿನಗಳ ಹಿಂದೆ ರಸ್ತೆ ವಿಸ್ತರಣೆಯ ಕುರಿತು ಶಾಸಕ ಕೆ.ಜಿ. ಬೋಪಯ್ಯ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ಸಭೆಯಲ್ಲಿ, ಕನಿಷ್ಠ ಪ್ರಮಾಣದಲ್ಲಿ ರಸ್ತೆ ವಿಸ್ತರಣೆಗೊಳಿಸುವಂತೆ ಹಾಗೂ ಆಗಬಹುದಾದ ನಷ್ಟಕ್ಕೆ ಸೂಕ್ತ ಪರಿಹಾರವನ್ನು ನೀಡುವಂತೆ ಮುಖ್ಯಬೀದಿಯ ನಿವಾಸಿಗಳು ಒತ್ತಾಯಿಸಿದ್ದರು.

ಕೆ.ಜಿ.ಬೋಪಯ್ಯ ಮಾತನಾಡಿ, ಇಂದಿನ ಸ್ಥಿತಿಗತಿಗಳನ್ನು ಅವಲೋಕಿಸಿ ಇಕ್ಕೆಲಗಳಲ್ಲಿ ತಲಾ 30 ಅಡಿಯಂತೆ ಒಟ್ಟು 60 ಅಡಿಗಳಷ್ಟು ರಸ್ತೆ ವಿಸ್ತರಣೆಗೆ ಎಲ್ಲರೂ ಸಹಮತ ಸೂಚಿಸಬೇಕು. ಜತೆಗೆ ರಸ್ತೆ ವಿಸ್ತರಣೆಯಿಂದ ನಷ್ಟಕ್ಕೆ ಒಳಗಾಗುವವರಿಗೆ ಪರಿಹಾರ ದೊರೆಕಿಸಲು ತಾನು ಪ್ರಮಾಣಿಕವಾಗಿ ಪ್ರಯತ್ನಿಸುವ ಭರವಸೆ ನೀಡಿದ್ದರು.

ಆದರೆ, ರಸ್ತೆ ವಿಸ್ತರಣೆಯಿಂದ ಮನೆ, ಕಟ್ಟಡ, ಜಾಗ ಕಳೆದುಕೊಳ್ಳಲಿರುವವರು ಹಾಗೂ ವರ್ತಕರು ಸೇರಿದಂತೆ ಹಲವರು ರಸ್ತೆ ವಿಸ್ತರಣೆಯನ್ನು ವಿರೋಧಿಸಿ ಪ್ರತಿಭಟನೆಯನ್ನು ನಡೆಸಿದ್ದಾರೆ. ಈ ಹಿಂದೆ ಎರಡು ಬಾರಿ ಪಟ್ಟಣದ ಮುಖ್ಯರಸ್ತೆಯಲ್ಲಿ ವಿಸ್ತರಿಸಿದಾಗ ಬಾಧಿತರಿಗೆ ಸರ್ಕಾರ ಯಾವುದೇ ಪರಿಹಾರ ನೀಡಲಿಲ್ಲ. ಅವೈಜ್ಞಾನಿಕ ರಸ್ತೆ ವಿಸ್ತರಣೆಯಿಂದ ಸಾಕಷ್ಟು ಬಡಕುಟುಂಬಗಳು ನಿರಾಶ್ರಿತರಾಗಲಿವೆ. ಮಲೆತಿರಿಕೆ ಬೆಟ್ಟದ ತಪ್ಪಲಿನಲ್ಲಿ ರಸ್ತೆಯು ಹಾದು ಹೋಗಿರುವುದರಿಂದ ಬೆಟ್ಟವು ಕುಸಿಯುವ ಅಪಾಯವಿದೆ. ನಿಯಮದಂತೆ ವಾಣಿಜ್ಯ ಕಟ್ಟಡಗಳ ನೆಲಮಹಡಿಯು ವಾಹನಗಳ ನಿಲುಗಡೆಗೆ ಮಾತ್ರ ಮೀಸಲಿಡಬೇಕು. ಆದರೆ, ಪಟ್ಟಣದ ಯಾವುದೇ ವಾಣಿಜ್ಯ ಕಟ್ಟಡಗಳಲ್ಲಿ ಈ ನಿಯಮವನ್ನು ಪಾಲಿಸದೆ, ನೆಲಮಹಡಿಯನ್ನು ಕೂಡ ಅಂಗಡಿ ಮಳಿಗೆಯನ್ನಾಗಿ ಪರಿವರ್ತಿಸಿ ಬಾಡಿಗೆಗೆ ನೀಡಲಾಗಿದೆ. ಈ ಕುರಿತು ಪಂಚಾಯಿತಿ ನಿಯಮದಂತೆ ಕ್ರಮಕೈಗೊಂಡರೆ ಪಟ್ಟಣದ ಬಹುಪಾಲು ವಾಹನ ನಿಲುಗಡೆಯ ಸಮಸ್ಯೆ ನಿವಾರಣೆ ಆಗಲಿದೆ ಎನ್ನುವುದು ರಸ್ತೆ ವಿಸ್ತರಣೆಗೆ ವಿರೋಧಿಸುತ್ತಿರುವವರ ವಾದ.

ಮತ್ತೊಂದು ಕಡೆ ಸಾರ್ವಜನಿಕರ ಹಿತದೃಷ್ಟಿಯಿಂದ ರಸ್ತೆ ವಿಸ್ತರಣೆ ಆಗಲೇಬೇಕು ಎಂದು ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯು ಸಂಘ– ಸಂಸ್ಥೆಗಳ ಸಹಯೋಗದಿಂದ ಪ್ರತಿಭಟನೆ ನಡೆಸಿ ಭವಿಷ್ಯದ ದೃಷ್ಟಿಯಿಂದ ಕನಿಷ್ಠ 80 ಅಡಿಗಳಷ್ಟು ರಸ್ತೆ ವಿಸ್ತರಣೆ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದೆ.

ಪಟ್ಟಣದಲ್ಲಿ ವಾಹನ ದಟ್ಟಣೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಸಾಕಷ್ಟು ಅವಘಡಗಳು ಸಂಭವಿಸಿದೆ. ಕೆಲವರು ಸ್ವಾರ್ಥಕ್ಕಾಗಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯೇ ಇಲ್ಲ. ರಸ್ತೆ ವಿಸ್ತರಿಸಬೇಕಾದ ಅಗತ್ಯವಿಲ್ಲ ಎನ್ನುತ್ತಿರುವುದು ಸರಿಯಲ್ಲ. ರಸ್ತೆ ವಿಸ್ತರಣೆ ಮಾಡಿದರೆ ಬೆಟ್ಟ ಕುಸಿಯುತ್ತದೆ ಎನ್ನುವವರೇ ತಮ್ಮ ಸ್ವಾರ್ಥಕ್ಕಾಗಿ ಮತ್ತೊಂದೆಡೆ ಬೆಟ್ಟವನ್ನು ಕೊರೆಯುತ್ತಿದ್ದಾರೆ. ಸ್ವಾರ್ಥದಿಂದ ರಸ್ತೆ ವಿಸ್ತರಣೆಗೆ ತಡೆವೊಡ್ಡಿದ್ದರೆ ಮತ್ತಷ್ಟು ಉಗ್ರ ಪ್ರತಿಭಟನೆ ನಡೆಸಲಾಗುವುದು. ರಸ್ತೆ ವಿಸ್ತರಣೆಯಿಂದ ತೊಂದರೆಗೊಳಗಾಗುವ ಅರ್ಹರಿಗೆ ಸರ್ಕಾರ ಪರಿಹಾರವನ್ನು ನೀಡಬೇಕು ಎನ್ನುವುದು ರಸ್ತೆ ವಿಸ್ತರಣೆ ಪರವಿರುವ ಮುಖಂಡರೊಬ್ಬರ ವಾದ.

ಕಾಮಗಾರಿ ಅವಧಿ 11 ತಿಂಗಳು
₹ 14.50 ಕೋಟಿ ಮೊತ್ತದ ಕಾಮಗಾರಿಯನ್ನು ಎಸ್‌.ಎಚ್‌ಡಿಪಿಯು ನಿರ್ವಹಿಸಲಿದ್ದು, ಲೋಕೋಪಯೋಗಿ ಇಲಾಖೆ ಸಹಕಾರವನ್ನು ನೀಡಲಿದೆ. ಕಾಮಗಾರಿ ಕುರಿತ ಟೆಂಡರ್ ಪ್ರಕ್ರಿಯೆ ಬಹುತೇಕ ಮುಕ್ತಾಯ ಹಂತದಲ್ಲಿದೆ. ಕಾಮಗಾರಿಯ ಅವಧಿ 11 ತಿಂಗಳು.

***

ರಸ್ತೆ ವಿಸ್ತರಣೆಯನ್ನು ವಿರೋಧಿಸುತ್ತಿರುವ ಅನೇಕರಲ್ಲಿ ಸೂಕ್ತ ದಾಖಲೆಗಳಿಲ್ಲದ್ದರಿಂದ ಭಯದಿಂದ ಪ್ರತಿಭಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನುವುದು ಸರಿಯಲ್ಲ. ರಸ್ತೆ ವಿಸ್ತರಣೆಯ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು. 

-ಟಿ.ಪಿ.ಕೃಷ್ಣ, ಸಂಚಾಲಕ, ರಸ್ತೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ

ಪಟ್ಟಣದ ಮುಖ್ಯರಸ್ತೆ ಕಿರಿದಾಗಿರುವುದರಿಂದ ವಾಹನ ಸವಾರರು, ಸಾರ್ವಜನಿಕರಿಗೆ, ಶಾಲಾ- ಕಾಲೇಜು ವಿದ್ಯಾರ್ಥಿಗಳು ಭಯದಿಂದ ಓಡಾಡುವಂತಾಗಿದೆ. ರಸ್ತೆ ವಿಸ್ತರಣೆಯಾಗಲೆಬೇಕು.

-ಪಟ್ರಪಂಡ ರಘು ನಾಣಯ್ಯ,  ಸಂಚಾಲಕ, ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ

ಪ್ರತಿಕ್ರಿಯಿಸಿ (+)