ಬುಧವಾರ, ಸೆಪ್ಟೆಂಬರ್ 18, 2019
23 °C

ವನದೇವತೆಗೆ ಬೆಳ್ಳಿದಾರ ತೊಡಿಸಿದ ವರುಣ

Published:
Updated:
Prajavani

ಗೋಣಿಕೊಪ್ಪಲು: ಒಂದು ವಾರ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಪರ್ವತ ಸಾಲುಗಳಲ್ಲಿ ಹಲವು ಜಲಪಾತಗಳು ಮೈದಳೆದಿವೆ.

ಸಿದ್ದಾಪುರದಿಂದ ಮಡಿಕೇರಿಗೆ ತೆರಳುವ ಮಾರ್ಗದ ಚೆಟ್ಟಳ್ಳಿ ಬಳಿ ಹತ್ತಾರು ಜಲಪಾತಗಳು ಉದ್ಭವಿಸಿ ನೋಡುಗರ ಕಣ್ಮನ ತಣಿಸುತ್ತಿವೆ. 9 ಕಿ.ಮೀ ದೂರದ ಪರ್ವತದ ಮೇಲಿಂದ ವರುಣ, ವನದೇವತೆಯ ಕೊರಳಿಗೆ ಬೆಳ್ಳಿದಾರ ತೊಡಿಸಿದಂತೆ ಕಂಡು ಬರುವ ಜಲಪಾತಗಳು ನಯನ ಮನೋಹರವಾಗಿವೆ.

ಚೆಟ್ಟಳಿ ಬಿಟ್ಟು 1 ಕಿ.ಮೀ ತೆರಳುತ್ತಿದ್ದಂತೆ ಎಡ ಭಾಗದ ಬೃಹತ್ ಪರ್ವತದ ಮೇಲಿಂದ ಹಾಲ್ನೊರೆ ಚೆಲ್ಲುತ್ತಾ ಧುಮ್ಮಿಕ್ಕುತ್ತಿವೆ. ಪ್ರಯಾಣಿಕರು ಇವುಗಳ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾ, ಅವುಗಳ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಾ ಆನಂದಿಸುತ್ತಿದ್ದಾರೆ.

ಕಾರಿನಲ್ಲಿ ಪ್ರಯಾಣಿಸುವವರು ಕೆಲ ಹೊತ್ತು ನಿಂತು ಜಲಪಾತದ ಸೊಬಗನ್ನು ಅನುಭವಿಸಿದರೆ, ಬನ್‌ಗಳಲ್ಲಿ ಪ್ರಯಾಣಿಸುವವರು ಜಲಪಾತದ ಹಾಲ್ನೊರೆಗೆ ಕೈ ಒಡ್ಡುತ್ತಾ ಮುಂದೆ ಸಾಗುತ್ತಿದ್ದಾರೆ. ಪ್ರಕೃತಿ ಪ್ರಿಯರು ಜಲಪಾತದ ಸೊಬಗನ್ನು ಸವಿಯುವುದಕ್ಕಾಗಿಯೇ ಈ ಭಾಗದಲ್ಲಿ ಹೆಚ್ಚಾಗಿ ಪ್ರಯಾಣಿಸುತ್ತಿದ್ದಾರೆ.

Post Comments (+)