ತೋಟಗಾರಿಕೆ ಬೆಳೆಗಳಿಗೆ ರೋಗ ಭೀತಿ

7

ತೋಟಗಾರಿಕೆ ಬೆಳೆಗಳಿಗೆ ರೋಗ ಭೀತಿ

Published:
Updated:

ಮಡಿಕೇರಿ: ಜಿಲ್ಲೆಯಲ್ಲಿ ಮಳೆ ಹೆಚ್ಚಾದಂತೆ ಬೆಳೆಗಳಿಗೆ ರೋಗಬಾಧೆ ಕಾಣಿಸಿಕೊಂಡಿದ್ದು ರೋಗ ನಿಯಂತ್ರಣಕ್ಕೆ ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ಕಾಳು ಮೆಣಸು ಹಾಗೂ ಇತರೆ ಬೆಳೆಗಳಿಗೆ ಕೊಳೆರೋಗ, ಎಲೆಚುಕ್ಕೆ ರೋಗ, ಶುಂಠಿಗೆ ಕಾಂಡಕೊಳೆ ರೋಗ, ಗೆಡ್ಡೆ ಕೊಳೆರೋಗ, ಶಿಲೀಂಧ್ರ ಹಾಗೂ ಬ್ಯಾಕ್ಟೀರಿಯಾದಿಂದ ರೋಗ ಹರಡುವ ಸಂಭವವಿರುತ್ತದೆ.

ಬದುಗಳ ನಿರ್ಮಾಣ, ಚರಂಡಿ, ಕಾಲುವೆ ಸೋಸುವಿಕೆಯಿಂದ ನೀರು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಜತೆಗೆ ಮರ ಕಪಾತು, ನೆರಳು ನಿಯಂತ್ರಣ, ಮಳೆಯ ಬಿಡುವಿನಲ್ಲಿ ಅಂಟು ಮಿಶ್ರಣ ಮಾಡಿ ಸಿಂಪಡಣೆ ಮಾಡಬೇಕು.  ಒಂದು ವೇಳೆ ರೋಗ ಬಂದರೆ ಅದರ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಬಹುದು. ರೋಗದ ಲಕ್ಷಣ ಕಾಣಿಸಿಕೊಂಡಲ್ಲಿ ರಾಸಾಯನಿಕ ಬಳಕೆ ಅನಿವಾರ್ಯ. ಅವಧಿ ಮೀರಿದ, ಕಳಪೆ ಗುಣಮಟ್ಟದ ಔಷಧಿ ಬಳಸುವುದು ಬೇಡ. ಅಧಿಕೃತ ಮಾರಾಟಗಾರರಿಂದ ಗುಣಮಟ್ಟದ ಔಷಧ ಖರೀದಿಸಿ ಬಿಲ್‌ ಪಡೆಯಬೇಕು.

ಕಾಳು ಮೆಣಸು ಬಳ್ಳಿಯ ಎಲೆಗಳು ತಿರುಚಿಕೊಂಡು ಸುಳಿಎಲೆ ಹಾಗೂ ದಾರದಲ್ಲಿ ಕಂದುಬಣ್ಣದ ಚುಕ್ಕೆ ಕಂಡುಬಂದು ಉದುರುತ್ತಿದ್ದರೆ ಅದನ್ನು ನಿಯಂತ್ರಿಸಲು ಕಾರ್ಬನ್ ಡೈ ಸಿಮ್ ಎರಡು ಗ್ರಾಂ ಅನ್ನು ಒಂದು ಲೀಟರ್ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪಡಿಸಬೇಕು. ಮಿಲಿಬಗ್ ಹಾಗೂ ಗೆದ್ದಲು ಬಾಧೆ ಇದ್ದಲ್ಲಿ ಪೋರೆಟ್ ಹರಳುಗಳನ್ನು ಬುಡದ ಸುತ್ತ ಎರಡರಿಂದ ಮೂರು, ನಾಲ್ಕು ಇಂಚು ಆಳದ ಗುಣಿ ಮಾಡಿ 10 ಗ್ರಾಂನಂತೆ ಹಾಕಬೇಕು.

ಎಲೆಚುಕ್ಕೆ ರೋಗ ಹರಡದಂತೆ ತಡೆಯಲು ಬೋರ್ಡೋ ದ್ರಾವಣ ಸಿಂಪಡಿಸಬೇಕು. ಸೊರಗು ರೋಗ ಕಂಡುಬಂದಲ್ಲಿ ಪೊಟ್ಯಾಷಿಯಂ ಪಾಸ್ಫೋನೇಟ್ 3ರಿಂದ 5 ಮಿಲಿ/ಲೀಟರ್ ನೀರಿನಲ್ಲಿ, ಇಮ್ಮಿಡ ಕ್ಲೋಪ್ರಿಡ್ 0.5 ಮಿಲಿ ನೀರಿನಲ್ಲಿ ಮಿಶ್ರಣ ಮಾಡಿ ಬುಡಕ್ಕೆ ಸುರಿಯಬೇಕು. ರೋಗ ಹೆಚ್ಚಾಗಿರುವ ಗಿಡಗಳನ್ನು ಕಿತ್ತು ಸುಡುವುದು, ಹೊಸ ಗಿಡ ನೆಡಲು ಇದು ಸೂಕ್ತ ಕಾಲ.

ಶುಂಠಿ ಬೆಳೆಗೆ ಕಾಂಡಕೊರಕ ಹುಳದ ಬಾಧೆಯಿದ್ದಲ್ಲಿ ಕ್ವಿನಾಲ್ ಫಾಸ್, ಡೆಲ್ಟಮೆತ್ರಿನ್‌, ಲ್ಯಾಂಬ್ಡಸೈಲೋತ್ರಿನ್, ಕ್ಲೋರೋ ಫೈರಿಫಾಸ್‌ ಎರಡು ಮಿಲಿ ಗ್ರಾಂ ಒಂದು ಲೀಟರ್ ನೀರಿನಲ್ಲಿ ಸಿಂಪಡಣೆ ಮಾಡಬಹುದು. ಚರಂಡಿಯಲ್ಲಿ ಕಳೆ ತೆಗೆದು ನೀರು ನಿಲ್ಲದ ಹಾಗೆ ನೋಡಿಕೊಳ್ಳಬೇಕು ಎಂದು ಕೃಷಿ ವಿಜ್ಞಾನಿಗಳು ಸಲಹೆ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಷಯ ತಜ್ಞರು ತೋಟಗಾರಿಕೆ ಇಲಾಖೆ, ಮಡಿಕೇರಿ, ಮೊಬೈಲ್‌: 94484 01087 ಸಂಪರ್ಕಿಸಬಹುದು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !