ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈತರ ಆತ್ಮಹತ್ಯೆ: 2ನೇ ಸ್ಥಾನದಲ್ಲಿ ಕರ್ನಾಟಕ’

ರೈತ ಸಂಘದ ಸಭೆಯಲ್ಲಿ ಕಾಡ್ಯಮಾಡ ಮನು ಸೋಮಯ್ಯ ಹೇಳಿಕೆ
Last Updated 6 ಮೇ 2022, 4:57 IST
ಅಕ್ಷರ ಗಾತ್ರ

ಸೋಮವಾರಪೇಟೆ: ‘ರೈತರ ಆತ್ಮಹತ್ಯೆಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, ಕರ್ನಾಟಕ ಎರಡನೇ ಸ್ಥಾನದಲ್ಲಿದೆ’ ಎಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನುಸೋಮಯ್ಯ ಹೇಳಿದರು.

ರಾಜ್ಯ ರೈತ ಸಂಘದ ತಾಲ್ಲೂಕು ಘಟಕದಿಂದ ಸಫಾಲಿ ಸಭಾಂಗಣದಲ್ಲಿ ಗುರುವಾರ ನಡೆದ ರೈತರ ಸಮಾಲೋಚನಾ ಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು.

‘ಅಕಾಲಿಕ ಮಳೆ, ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯದಿಂದ ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಸಣ್ಣ ಬೆಳೆಗಾರರು ಸಾಲಗಾರರಾಗಿದ್ದಾರೆ. ಸರ್ಕಾರ ರೈತರು, ಕಾಫಿ ಬೆಳೆಗಾರರ ಬೇಡಿಕೆ ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತವೆ’ ಎಂದು ಎಚ್ಚರಿಸಿದರು.

‘ಕಾಫಿ ಬೆಳೆಗಾರರ 10 ಎಚ್.ಪಿ.ವರೆಗಿನ ಪಂಪ್ ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳು ಉಚಿತ ವಿದ್ಯುತ್ ನೀಡಲು ಸಾಧ್ಯವಿಲ್ಲ ಎಂದು
ತಿಳಿಸಿದ್ದಾರೆ. ಚುನಾಯಿತ ಸರ್ಕಾರದ ಆದೇಶಕ್ಕೆ ಬೆಲೆ ಇಲ್ಲದಂತಾಗಿದೆ. ಜನಪ್ರತಿನಿಧಿಗಳು ಚುನಾವಣೆ ಗಿಮಿಕ್ ಮಾಡಿದರೆ, ಕಾಫಿ ಬೆಳೆಯುವ ನಾಲ್ಕು ಜಿಲ್ಲೆಗಳ ರೈತರು ವಿಧಾನಸೌಧ ಮುತ್ತಿಗೆ ಹಾಕುತ್ತಾರೆ’ ಎಂದು ಎಚ್ಚರಿಕೆ ನೀಡಿದರು.

‘ದೇಶದಲ್ಲಿ ಕಾಫಿ ವಿದೇಶಿ ವಿನಿಮಯದಿಂದ ಸಾವಿರಾರು ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಬರುತ್ತಿದೆ. ರೈತರ ಎಲ್‌ಟಿಸಿಯಲ್ಲಿ ವಿದ್ಯುತ್ ಬಳಕೆದಾರರಿಗೆ ವಾರ್ಷಿಕ ₹25 ಕೋಟಿಗಳಷ್ಟು ಸಬ್ಸಿಡಿ ನೀಡಿದರೆ, ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯ. ಕಳೆದ ಹಲವಾರು ವರ್ಷಗಳಿಂದ ಉಚಿತ ವಿದ್ಯುತ್ ಬೇಡಿಕೆ ಇಟ್ಟು ಕಾಫಿ ಬೆಳೆಗಾರರು ಹೋರಾಟ ಮಾಡುತ್ತಿದ್ದಾರೆ. ಕೂಡಲೇ ಬೆಳೆಗಾರರ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಮಾಡುವುದರೊಂದಿಗೆ, ಉಚಿತ ವಿದ್ಯುತ್ ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.

‘ಕಾಫಿ ಬೆಳೆಗಾರರು ಬೀದಿಗಿಳಿದು ಹೋರಾಟ ಮಾಡದಿದ್ದರೆ ಯಾವ ಸೌಲಭ್ಯಗಳೂ ಸಿಗುವುದಿಲ್ಲ. ಹೋರಾಟದ ಮೂಲಕ ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕು’ ಎಂದು ಹೇಳಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಟ್ರುಮಾಡ ಸುಜು ಬೋಪಯ್ಯ, ಉಪಾಧ್ಯಕ್ಷ ಶಂಕರಪ್ಪ, ತಾಲ್ಲೂಕು ಅಧ್ಯಕ್ಷ ಕೆ.ಎಂ. ದಿನೇಶ್, ಉಪಾಧ್ಯಕ್ಷ ಜಿ.ಎಂ. ಹೂವಯ್ಯ, ಸಂಚಾಲಕ ಮಂದಣ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT