ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರಿಹಾರ ನೀಡದಿದ್ದರೆ ಬೆಳೆಗಾರರು ಸರ್ವನಾಶ’

ಭಾಗಮಂಡಲ, ಕರಿಕೆ, ಕುಂದಚೇರಿ, ಅಯ್ಯಂಗೇರಿ ಭಾಗಗಳಲ್ಲಿ ಅಧಿಕ ನಷ್ಟ– ಬೆಳೆಗಾರರ ಅಳಲು
Last Updated 24 ಸೆಪ್ಟೆಂಬರ್ 2022, 5:44 IST
ಅಕ್ಷರ ಗಾತ್ರ

ಮಡಿಕೇರಿ: ಭಾಗಮಂಡಲ, ಕರಿಕೆ, ಕುಂದಚೇರಿ ಹಾಗೂ ಅಯ್ಯಂಗೇರಿ ಭಾಗಗಳಲ್ಲಿ ಈ ಬಾರಿ ಅಧಿಕ ಮಳೆ ಸುರಿದು ಕಾಫಿ, ಕರಿಮೆಣಸು, ಏಲಕ್ಕಿ, ತೆಂಗು, ಅಡಿಕೆ, ಭತ್ತದ ಬೆಳೆಗಳು ನಾಶವಾಗಿವೆ. ಸರ್ಕಾರ ಪರಿಹಾರ ನೀಡದಿದ್ದಲ್ಲಿ ಬೆಳೆಗಾರರು ಸರ್ವನಾಶವಾಗಲಿದ್ದಾರೆ ಎಂದು ಈ ಭಾಗದ ರೈತರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು.

‘ಕಳೆದ ವರ್ಷಕ್ಕಿಂತ ಅತ್ಯಂತ ಹೆಚ್ಚಿನ ಮಳೆ ಈ ಭಾಗದಲ್ಲಿ ಸುರಿದಿದೆ. ಇನ್ನೂ ತಲಕಾವೇರಿ, ತಣ್ಣಿಮಾನಿ, ತಾವೂರು ಮತ್ತು ಕುಂದಚೇರಿ ಭಾಗದ ಬೆಟ್ಟಗಳ ಸಾಲಿನಲ್ಲಿ ಮಳೆ ಸುರಿಯುತ್ತಿದೆ. ಬೆಳೆಗಾರರ ಸ್ಥಿತಿ ಚಿಂತಾಜನಕವಾಗಿದೆ’ ಎಂದು ರೈತ ಕೆ.ಜೆ.ಭರತ್ ತಿಳಿಸಿದರು.

ಕೊಳೆರೋಗದಿಂದ ಕಾಫಿಗಿಡಗಳ ಕಾಯಿ ಮತ್ತು ಎಲೆಗಳು ನೆಲಕ್ಕೆ ಬಿದ್ದು ನಾಶವಾಗಿವೆ. ಕಾಳು ಮೆಣಸಿನ ಬಳ್ಳಿಗಳಿಗೆ ಹಳದಿ ರೋಗ ತಗುಲಿದೆ. ಎಲ್ಲ ಬಳ್ಳಿಗಳೂ ಕೊಳೆರೋಗದಿಂದ ನಾಶವಾಗಿವೆ ಎಂದು ಹೇಳಿದರು.

‘ಮಿಶ್ರ ಬೆಳೆಯಾಗಿ ಬೆಳೆದಿರುವ ಅಡಿಕೆ ಕಾಯಿ ಕೊಳೆತು ಬಿದ್ದು ಹೋಗುತ್ತಿದೆ. ತೆಂಗು ಮತ್ತು ಅಡಿಕೆ ಬೆಳೆಯನ್ನು ನಂಬಿಕೊಂಡಿರುವ ಕರಿಕೆ ಭಾಗದ ಕೃಷಿಕರು ಕೊಳೆರೋಗದಿಂದ ಅತೀವ ನಷ್ಟ ಅನುಭವಿಸುವಂತಾಗಿದೆ’ ಎಂದು ಮತ್ತೊಬ್ಬ ರೈತ ಪಾಣತ್ತಲೆ ವಿಶ್ವನಾಥ್ ತಿಳಿಸಿದರು.

‘ಭತ್ತ ಬೆಳೆಯಬೇಕಿದ್ದ ಕೃಷಿಕರು ನಾಟಿ ಮಾಡಲು ಮಳೆ ಅವಕಾಶವನ್ನೇ ಕೊಡಲಿಲ್ಲ. ನಾಟಿ ಮಾಡಿರುವಂತಹ ಬೆಳೆಯೂ ಕೊಳೆಯುತ್ತಿದೆ. ಈ ವರ್ಷ ಭತ್ತ ಕೃಷಿಕರ ಗೋಳು ಹೇಳತೀರದಾಗಿದೆ’ ಎಂದರು.

ಬೆಳೆಗಾರ ಕೀರ್ತಿಕುಮಾರ್ ಮಾತನಾಡಿ, ‘ಏಲಕ್ಕಿ ಬೆಲೆ ಎರಡು ವರ್ಷಗಳಿಂದ ಕುಸಿಯುತ್ತಿದೆ. ಇದರಿಂದ ಈಗಾಗಲೇ ನಷ್ಟಕ್ಕೆ ಒಳಗಾಗಿರುವ ಬೆಳೆಗಾರರಿಗೆ ಮಳೆ ನೀಡಿರುವ ಕೊಳೆ ರೋಗ ಮತ್ತಷ್ಟು ನಷ್ಟ ತರಿಸಿದೆ’ ಎಂದು ಹೇಳಿದರು.

‘ಪರಿಸ್ಥಿತಿ ನಿಜಕ್ಕೂ ಹೇಗಿದೆ ಎಂದರೆ, ನಿತ್ಯ ಈಗಲೂ ಬರುತ್ತಿರುವ ಮಳೆಯಿಂದ ಕ್ರಿಮಿನಾಶಕ ಸಿಂಪಡಿಸಲು ಸಾಧ್ಯವಾಗುತ್ತಿಲ್ಲ. ಬೆಳೆಗಾರರ ಈ ವರ್ಷದ ಬದುಕು ಡೋಲಾಯಮಾನವಾಗಿದೆ’ ಎಂದು ಕೆದಂಬಾಡಿ ಸದು ತಿಳಿಸಿದರು.

‘ಸರ್ಕಾರ ಆರ್ಥಿಕ ಬೆಳೆಗಾರರು ಎಂದು ನಮಗೆ ಯಾವುದೇ ಸೌಲಭ್ಯ ಕೊಡುತ್ತಿಲ್ಲ. ಈಗ ಆಗುತ್ತಿರುವ ನಷ್ಟವನ್ನು ಗಮನಿಸಿ ಕೂಡಲೇ ಸೂಕ್ತ ಪರಿಹಾರ ನೀಡಬೇಕು’ ಎಂದು ಗಂಗಾಧರ ಮನವಿ ಮಾಡಿದರು.

ಬೆಳೆಗಾರ ಮನೋಜ್‌ಕುಮಾರ್ ಮಾತನಾಡಿ, ‘ಈಗಾಗಲೇ ಜಿಲ್ಲಾಧಿಕಾರಿಗೆ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್, ಸುಜಾ ಕುಶಾಲಪ್ಪ ಅವರಿಗೆ ಮನವಿ ಮಾಡಲಾಗಿದೆ. ಸರ್ಕಾರ ಇನ್ನಾದರೂ ನಮ್ಮ ನೆರವಿಗೆ ಬರಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT