ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿಗೆ ಆಸರೆಯಾದ ಬೇಸಾಯ

ಖುಷಿಯಿಂದ ಕೃಷಿ ಮಾಡಿದರೆ ಉತ್ತಮ ಫಲ: ಪೋಡಮಾಡ ಮೋಹನ್‌ರ ಕೃಷಿ ಪ್ರೀತಿ
Last Updated 11 ನವೆಂಬರ್ 2020, 7:26 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ‘ಕೃಷಿಯನ್ನು ಖುಷಿಪಟ್ಟು ಮಾಡಿದರೆ ಉತ್ತಮ ಫಲ ಲಭಿಸಲಿದೆ. ಅರಿತು ಬೇಸಾಯ ಮಾಡಿದರೆ ಬದುಕಿಗೆ ಆಸರೆಯಾಗಲಿದೆ’ ಇದು ಬಾಳೆಲೆ ದೇವನೂರು ಗ್ರಾಮದ ಪ್ರಗತಿಪರ ಕೃಷಿಕ ಪೋಡಮಾಡ ಮೋಹನ್ ಅವರ ನುಡಿ.

ಸಾಮಾನ್ಯ ಕೃಷಿಕರಾದ ಮೋಹನ್‌, ಭತ್ತದ ಕೃಷಿ ಮಾಡುತ್ತಿರುವುದು ಕೇವಲ 2 ಹೆಕ್ಟೇರ್ ಪ್ರದೇಶದಲ್ಲಿ. ಆದರೆ, ವಾರ್ಷಿಕ ಸರಾಸರಿ 62 ಕ್ವಿಂಟಲ್ ಭತ್ತ ಬೆಳೆಯುತ್ತಿದ್ದಾರೆ. ಈ ಕಾರಣಕ್ಕೆ ಇವರಿಗೆ 2015-16 ನೇ ಸಾಲಿನಲ್ಲಿ ವಿರಾಜಪೇಟೆ ತಾಲ್ಲೂಕು ಮಟ್ಟದ ಉತ್ತಮ ಪ್ರಗತಿಪರ ಕೃಷಿಕ ಎಂಬ ಪ್ರಶಸ್ತಿ ಲಭಿಸಿದೆ.

ಬಾಳೆಲೆ ಪಟ್ಟಣದಿಂದ 1 ಕಿಮೀ ದೂರದಲ್ಲಿರುವ ಅವರ ಗದ್ದೆಯಲ್ಲಿ ಸದಾ ನೀರು ಇರುತ್ತದೆ. ಬೇಸಿಗೆಯಲ್ಲೂ ಬತ್ತುವುದೇ ಇಲ್ಲ. ಮಳೆ ಆಶ್ರಯದಲ್ಲೇ ಭತ್ತ ನಾಟಿ ಮಾಡಿ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಗದ್ದೆಯ ಯಾವುದೇ ಮೂಲೆ ನೋಡಿದರೂ ಬೆಳೆ ಒಂದೇ ಮಟ್ಟಕ್ಕೆ ಎರಕ ಹೊಯ್ದದಂತೆ ಕಾಣುತ್ತದೆ.

ಅತೀರ ಮತ್ತು ತುಂಗ ತಳಿಯ ಭತ್ತ ಬೆಳೆದಿದ್ದಾರೆ. ಅತೀರ ಬಲಿತು ಗೊನೆ ಬಾಗಿ ನಳನಳಿಸುತ್ತಿದ್ದರೆ, ತುಂಗ ಗೊನೆ ಬಿಟ್ಟು ಸುವಾಸನೆ ಬೀರುತ್ತಿದೆ. ಭತ್ತದ ಗದ್ದೆಯ ಬದುಗಳಲ್ಲಿ ನಡೆದಾಡುವುದೇ ಆನಂದ. ಬದುಗಳಲ್ಲಿನ ಹುಲ್ಲು ಕೊಯ್ದು, ಕಳೆ ಕಿತ್ತು ಅಚ್ಚುಕಟ್ಟಾಗಿ ಗದ್ದೆಯನ್ನು ನಿರ್ವಹಿಸಿದ್ದಾರೆ.

ಗೊಬ್ಬರ ಮಿಶ್ರಣ: ಭತ್ತ ನಾಟಿ ಮಾಡುವಾಗ ಡಿಎಪಿ ಯೂರಿಯಾ, ಪೊಟಾಷ್‌ಗಳನ್ನು ಮಿಶ್ರಣಮಾಡಿ ಒಂದು ಎಕರೆಗೆ 20 ಕೆ.ಜಿ ರಸ ಗೊಬ್ಬರ ಕೊಡಲಾಗುತ್ತದೆ. ಅದರ ಮೇಲೆ ನಾಟಿ ಮಾಡಿದರೆ ಭತ್ತದ ಪೈರು ಬೇಗನೆ ಚಿಗುರೊಡೆದು ಹಸಿರಾಗುತ್ತವೆ. ಒಂದು ತಿಂಗಳು ಕಳೆದ ಬಳಿಕ ಮತ್ತೆ ಇದೇ ಮಾದರಿಯಲ್ಲಿ ಗೊಬ್ಬರ ನೀಡಲಾಗುತ್ತದೆ. ಹೀಗೆ ಒಂದು ತಿಂಗಳ ಅಂತರದಲ್ಲಿ ಮೂರು ಬಾರಿ ಗೊಬ್ಬರ ನೀಡಿದರೆ ಬೆಳೆ ಚೆನ್ನಾಗಿ ಬರಲಿದೆ ಎನ್ನುತ್ತಾರೆ ಮೋಹನ್‌.

ನಿಪ್ಪುಣಿ (ಮೇಡು) ಗದ್ದೆಯ ಮೇಲು ಭಾಗಕ್ಕೆ ಗೊಬ್ಬರವನ್ನು ಶೇ 100 ರಷ್ಟು ನೀಡಿದರೆ, ಕಿಪ್ಪಣಿ (ಕೆಳಗಿನ) ಭಾಗಕ್ಕೆ ಶೇ 20 ರಷ್ಟು ನೀಡಲಾಗುವುದು ಎಂದು ಅವರು ಹೇಳಿದರು.

ಇವರ ಸುತ್ತಮುತ್ತಲಿನ ಕೆಲವು ಗದ್ದೆಗಳ ಭತ್ತಕ್ಕೆ ಬೆಂಕಿ ರೋಗ ಮತ್ತಿತರ ಕಾಯಿಲೆಗಳು ಬಂದಿದ್ದರೆ ಮೋಹನ್ ಅವರ ಬೆಳೆಗೆ ಮಾತ್ರ ಯಾವುದೇ ರೋಗ ಕಾಣಿಸಿಕೊಂಡಿಲ್ಲ. ಇವರು ನಾಟಿ ಮಾಡುವ ಮೊದಲೇ 15 ದಿನದ ಭತ್ತದ ಸಸಿಗೆ ಬೆವಿಷ್ಟಿನ್ ಮೊದಲಾದ ರೋಗ ನಿರೋಧಕ ಔಷಧಸಿಂಪಡಿಸುತ್ತಾರೆ. ಆನಂತರ 15 ದಿನ ಬಿಟ್ಟು ಸಸಿ ಕಿತ್ತು ನಾಟಿ ಮಾಡುತ್ತಾರೆ. ಇದರಿಂದ ಸಸಿ ಹಂತದಲ್ಲಿಯೇ ರೋಗ ನಿವಾರಣೆ ಮಾಡುವ ಕ್ರಮ ತೆಗೆದುಕೊಳ್ಳುತ್ತಿದ್ದಾರೆ.

ಕಳೆದ ವರ್ಷದ ಭತ್ತ; ಕೇಳುವವರೇ ಇಲ್ಲ: ಕಳೆದ ವರ್ಷ ಬೆಳೆದ ಭತ್ತ ಇನ್ನೂ ಮನೆಯಲ್ಲಿ 45 ಕ್ವಿಂಟಲ್ ಉಳಿದಿದೆ. ಕ್ವಿಂಟಲ್‌ಗೆ ₹ 1125 ಬೆಲೆ ಇದೆ. ಯಾರೂ ತೆಗೆದುಕೊಳ್ಳುವವರಿಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಕೊಡೋಣ
ವೆಂದರೆ ಅಲ್ಲಿಯೂ ಸೂಕ್ತ ಮೌಲ್ಯ ಸಿಗುತ್ತಿಲ್ಲ. ಇಂಥ ಪರಿಸ್ಥತಿಯಿಂದಲೇ ಬಹಳಷ್ಟು ರೈತರು ಭತ್ತ ಬೆಳೆಯುವುದನ್ನೇ ಬಿಟ್ಟಿದ್ದಾರೆ ಎಂದು ಮೋಹನ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT