ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪಿಯುಸಿಯಲ್ಲಿ ಯಾವ ಕಾಂಬಿನೇಷನ್ ಸೂಕ್ತ?’

Last Updated 11 ಮಾರ್ಚ್ 2018, 19:40 IST
ಅಕ್ಷರ ಗಾತ್ರ

1. ನನ್ನ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಮುಂದಿನ ವರ್ಷ ಪಿಯುಸಿಗೆ ಯಾವ ಕಾಂಬಿನೇಷನ್‌ಗೆ ಅವಳನ್ನು ಸೇರಿಸಬಹುದು? ಸೈನ್ಸ್ ಅಥವಾ ಕಾಮರ್ಸ್ ಎರಡರಲ್ಲಿ ಯಾವುದಕ್ಕೆ ಹೆಚ್ಚು ಸ್ಕೋಪ್ ಇದೆ?

–ಹೆಸರು, ಊರು ಬೇಡ

ಮುಂಚಿತವಾಗಿಯೇ ನೀವು ಸಿದ್ಧರಾಗುತ್ತಿರುವುದು ಸಂತೋಷ. ವಿಜ್ಞಾನ ಮತ್ತು ವಾಣಿಜ್ಯ – ಎರಡರಲ್ಲೂ ಸ್ಕೋಪ್‌ ಇದೆ. ನಿಮ್ಮ ಮಗಳ ಆಸಕ್ತಿ ಯಾವುದರಲ್ಲಿದೆ ಅನ್ನುವುದನ್ನು ಗುರುತಿಸಿದರೆ ಆಗ ನಿರ್ಧರಿಸುವುದು ಸುಲಭ. ಅವಳು ಫಿಸಿಕ್ಸ್‌, ಕೆಮಿಸ್ಟ್ರಿ, ಮ್ಯಾಥ್ಸ್‌, ಬಯಾಲಜಿಯಲ್ಲಿ ಎಷ್ಟು ಅಂಕವನ್ನು ಪಡೆಯುತ್ತಿದ್ದಾಳೆ. ಅವಳಿಗೆ ವಿಜ್ಞಾನದ ಪಾಠದಲ್ಲಿ ಆಸಕ್ತಿ ಇದೆಯೇ – ಎನ್ನುವುದನ್ನು ಗಮನಿಸಿ. ವಿಜ್ಞಾನವನ್ನು ತೆಗೆದುಕೊಂಡರೆ, ವಿಜ್ಞಾನದಲ್ಲಿ ಬಿಎಸ್ಸಿ/ಎಂಎಸ್‌ಸಿ/ಪಿಎಚ್‌ಡಿ ಸ್ಪೇಸ್‌ ಸೈನ್ಸ್‌, ನ್ಯೂಟ್ರಿಷನ್‌, ಎಂಜಿನಿಯರಿಂಗ್‌, ಬಯೋಟೆಕ್ನಾಲಜಿ, ಮೈಕ್ರೋ ಬಯಾಲಜಿ, ಜೆನಿಟಿಕ್ಸ್‌, ಮೆಡಿಕಲ್‌, ವೆಟರ್ನರಿ ಸೈನ್ಸ್‌ – ಈ ರೀತಿಯ ಹಲವು ಕೋರ್ಸ್‌ಗಳನ್ನು ಆರಿಸಬಹುದು. ವಾಣಿಜ್ಯದಲ್ಲಿ ಆಸಕ್ತಿ ಇದ್ದಲ್ಲಿ ಬಿಕಾಂ, ಎಂಕಾಂ, ಸಿಎ, ಐಸಿಡಬ್ಲ್ಯುಎಐ, ಸಿಎಸ್‌, ಎಕನಾಮಿಕ್ಸ್‌, ಬಿಬಿಎಂ, ಎಂಬಿಎ, ಬಿಸಿಎ – ಈ ರೀತಿಯ ಕೋರ್ಸ್‌ಗಳನ್ನು ಆರಿಸಬಹುದು. ಈ ಎರಡು ಕಾಂಬಿನೇಷನ್‌ಗಳ ವಿಷಯಗಳನ್ನು ನೋಡಿ, ನಿಮ್ಮ ಮಗಳಿಗೆ ಯಾವುದರಲ್ಲಿ ಆಸಕ್ತಿ ಮತ್ತು ಶಕ್ತಿ ಇದೆ ಎಂದು ನಿರ್ಧರಿಸಿ. ಆಪ್‌ಟಿಟ್ಯೂಡ್‌ ಟೆಸ್ಟ್‌ ಅನ್ನು ತೆಗೆದುಕೊಂಡರೆ, ಅವರ ಸಾಮರ್ಥ್ಯ ಹಾಗೂ ಆಸಕ್ತಿ ಯಾವುದರಲ್ಲಿದೆ ಎನ್ನುವುದನ್ನು ವೈಜ್ಞಾನಿಕವಾಗಿ ಪರೀಕ್ಷಿಸಿ, ಖಚಿತಗೊಳಿಸಬಹುದು.

2. ನಾನು ರಾಜ್ಯಶಾಸ್ತ್ರ ವಿಷಯದಲ್ಲಿ ಎಂ.ಎ. ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಈಗ ನಾನು ಬಿ.ಎಡ್‌. ಅನ್ನು ಭೂಗೋಳಶಾಸ್ತ್ರದಲ್ಲಿ ಮಾಡಬೇಕೆಂದುಕೊಂಡಿದ್ದೇನೆ, ಮುಂದೆ ಪಿ.ಯು. ಕಾಲೇಜು ಅಧ್ಯಾಪಕರ ನೇಮಕಾತಿಯ ಸಂದರ್ಭದಲ್ಲಿ ಇದು ತೊಂದರೆಯಾಗಬಹುದೆ? ಪದವಿಯಲ್ಲಿ ನನ್ನ ಐಚ್ಛಿಕ ವಿಷಯಗಳು ಇತಿಹಾಸ, ಭೊಗೋಳಶಾಸ್ತ್ರ, ರಾಜ್ಯಶಾಸ್ತ್ರ.

–ಈಶ್ವರ ಪಾಟೀಲ್, ಧಾರವಾಡ

ನೀವು ಈಗ ಎಂ.ಎ. (ಪೊಲಿಟಿಕಲ್‌ ಸೈನ್ಸ್‌) ಪದವಿಯನ್ನು ಪಡೆದಿದ್ದೀರಿ. ನೀವು ಬಿ.ಎಡ್‌. ಮಾಡುವ ಕಾರಣ, ಪಾಠ ಹೇಳುವ ಇಚ್ಛೆಯಿಂದ ನಿಮ್ಮ ಪದವಿಯನ್ನು ಎಂ.ಎ., ಬಿ.ಎಡ್‌. ಅಂತ ಗುರುತಿಸುತ್ತಾರೆ. ಬಿ.ಎಡ್‌. ಮಾಡುವಾಗ, ಎಜುಕೇಷನ್‌ ಇನ್‌ ಎಮರ್‌ಜಿಂಗ್‌ ಇಂಡಿಯಾ ಫಂಡಮೆಂಟಲ್ಸ್ ಆಫ್‌ ಎಜುಕೇಶನಲ್‌ ಸೈಕಾಲಜಿ, ಸ್ಕೂಲ್‌ ಮ್ಯಾನೇಜ್‌ಮೆಂಟ್‌, ಇನ್ಫರ್‌ಮೇಷನ್‌ ಅಂಡ್‌ ಕಮ್ಯೂನಿಕೇಶನ್‌ ಟೆಕ್ನಾಲಜಿ – ಈ ರೀತಿಯ ವಿಷಯಗಳನ್ನು ಓದುತ್ತೀರಿ.

ನೀವು 29 ಕಾಂಬಿನೇಷನ್‌ನಲ್ಲಿ, ಪೊಲಿಟಿಕಲ್‌ ಸೈನ್ಸ್‌, ಹಿಸ್ಟರಿ, ಜಿಯಾಗ್ರಫಿಗೆ ಹತ್ತಿರವಾದ ಕಾಂಬಿನೇಷನನ್ನು ತೆಗೆದುಕೊಳ್ಳಬೇಕು.

ಉದಾಹರಣೆ: ಜಿಯಾಗ್ರಫಿ, ಹಿಸ್ಟರಿ ಮತ್ತು ಸಿವಿಕ್ಸ್‌ – ಕಾಂಬಿನೇಷನ್‌ ತೆಗೆದುಕೊಳ್ಳಬೇಕು.

ನೀವು www.bangaloreunivericty.ac.in – ಇಲ್ಲಿ ಸಂಪೂರ್ಣ ವಿವರವನ್ನು ಪಡೆಯಬಹುದು.

ಬಿ.ಎಡ್‌. ಡಿಗ್ರಿ ಪಡೆದ ನಂತರ ಸಿಬಿಎಸ್‌ಸಿನವರು ನಡೆಸುವ ‘UGC NET’ ಪರೀಕ್ಷೆ ಬರೆದರೆ, ಅಸಿಸ್ಟೆಂಟ್‌ ಪ್ರೊಫೆಸರ್‌ ಅಥವಾ ಜ್ಯೂನಿಯರ್‌ ರಿಸರ್ಚ್ ಫೆಲೋಷಿಪ್‌ಗೆ ಅರ್ಹತೆ ಪಡೆಯುತ್ತೀರಿ.

ಈ ಪರೀಕ್ಷೆಯನ್ನು ಆನ್‌ಲೈನ್‌ ಮೂಲಕ ವರ್ಷಕ್ಕೊಮ್ಮೆ ನಡೆಸುತ್ತಾರೆ. ಈಗಾಗಲೇ ನೋಟಿಫಿಕೇಶನ್‌ ಫೆಬ್ರುವರಿ 1ರಂದು ಬಂದಾಯಿತು.

ಮಾರ್ಚ್‌ 6ನೇ ತಾರೀಖಿನಿಂದ ಆನ್‌ಲೈನ್‌ ಅಪ್ಲಿಕೇಷನ್‌ ಫಾರಂ ದೊರೆಯುತ್ತದೆ. ಜುಲೈ 8, 2018 ಪರೀಕ್ಷೆಯ ದಿನಾಂಕ.

ಅರ್ಹತೆ – ಸ್ನಾತಕೊತ್ತರ ಪದವಿ

ವಯಸ್ಸು– ಗರಿಷ್ಠ 30 ವರ್ಷ,  ಜನವರಿ 1ನೇ 2018ಕ್ಕೆ ಅನ್ವಯಿಸುವಂತೆ (ಜನರಲ್‌ ಕ್ಯಾಟಗರಿಗೆ)

ಆಧಾರ್‌ ಕಾರ್ಡ್‌ ಬೇಕೇ ಬೇಕು.

ಈ ವರ್ಷದ ಬದಲಾವಣೆ: 3 ಪೇಪರ್‌ ಬದಲು 2 ಪೇಪರ್‌. ಹೆಚ್ಚಿನ ವಿವರಕ್ಕೆನೋಡಿ: www.cbsenet.nic.in

3. 2017ರ NET and JRF ಎರಡರಲ್ಲೂ ಉತ್ತೀರ್ಣರಾದವರಿಗೆ ಅದರಿಂದಾಗುವ ಪ್ರಯೋಜನವೇನು?
ಅದರ ಮುಂದಿನ ಹಂತವೇನು?
–ಓಬಳೇಶ ಎನ್., ತುಮಕೂರು

ಮೇಲಿನ ಉತ್ತರದಿಂದ ಮಾಹಿತಿಯನ್ನು ಗಮನಿಸಿ. ಯುಜಿಸಿಯ ಪರವಾಗಿ ಸಿಬಿಎಸ್‌ಇ, NET ಪರೀಕ್ಷೆಯನ್ನು, ಅಸಿಸ್ಟೆಂಟ್‌ ಪ್ರೊಫೆಸರ್‌ ಹುದ್ದೆಗೆ ಮಾತ್ರ ಅಥವಾ ಅಸಿಸ್ಟೆಂಟ್‌ ಪ‍್ರೊಫೆಸರ್‌ ಮತ್ತು ಜೂನಿಯರ್‌ ರಿಸರ್ಚ್‌ ಫೆಲೋಷಿಪ್‌, ಭಾರತದ ವಿಶ್ವವಿದ್ಯಾಲಯಗಳಿಗೂ ಮತ್ತು ಕಾಲೇಜುಗಳಿಗೂ ಅರ್ಹತೆಯನ್ನು ಕಂಡುಹಿಡಿಯಲು ನಡೆಸುತ್ತಾರೆ.

JRFನಲ್ಲಿ ಪಾಸಾದವರು, ಸ್ನಾತಕೋತ್ತರ ಪದವಿಯ ವಿಷಯಗಳಲ್ಲೋ ಅಥವಾ ಅದಕ್ಕೆ ಸಂಬಂಧಪಟ್ಟ ವಿಷಯಗಳಲ್ಲೋ ಸಂಶೋಧನೆಯನ್ನು ಮಾಡಬಹುದು. ಭಾರತದ ವಿಶ್ವವಿದ್ಯಾಲಯ, ಐಐಟಿ ಮತ್ತು ಇತರ ರಾಷ್ಟ್ರೀಯ ಸಂಸ್ಥೆಗಳಲ್ಲಿ ಪೂರ್ಣಾವಧಿ ಸಂಶೋಧಕರಾಗಿಯೂ ಅವರನ್ನು ಆರಿಸಬಹುದು ನೀವು ಅಸಿಸ್ಟೆಂಟ್ ಪ್ರೊಫೆಸರ್ ಆಗುತ್ತೀರೋ ಸಂಶೋಧಕರಾಗುತ್ತೀರೋ – ನೀವೇ ನಿರ್ಧರಿಸಿ.

4. ನಾನು ಎಂಜಿನಿಯರಿಂಗ್ ಪದವೀಧರೆಯಾಗಿದ್ದು, ಈಗ 4 ವರ್ಷಗಳಿಂದ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನಗೆ ಇತಿಹಾಸ ಮತ್ತು ಪುರಾತತ್ವಶಾಸ್ತ್ರದಲ್ಲಿ (Ancient History and Archaeology) ಆಸಕ್ತಿ ಇದ್ದು, ಅದನ್ನು ವಿಸ್ತಾರವಾಗಿ ಓದಿ, ಕಲಿತು ಪದವಿ ಪಡೆಯಲು ಇಚ್ಛಿಸುತ್ತಿದ್ದೇನೆ. ವೈಯಕ್ತಿಕ ಕಾರಣಗಳಿಂದ ಪಿ.ಯು.ಸಿ. ನಂತರ ಈ ಕ್ಷೇತ್ರಕ್ಕೆ ಹೋಗಲು ಆಗಲಿಲ್ಲ. ಈ ವಿಷಯವನ್ನು ದೂರಶಿಕ್ಷಣದಲ್ಲಿ ಕಲಿಯುವ ಅವಕಾಶ ಇದೆಯೇ? ಇದ್ದಲ್ಲಿ, ವಿದ್ಯಾರ್ಹತೆ ಮತ್ತು ಶಿಕ್ಷಣ ಮಾರ್ಗವನ್ನು ದಯವಿಟ್ಟು ತಿಳಿಸಿ. (ಈ ವಿಷಯವನ್ನು ಕಲಿಯುವಾಗ – ಕ್ಷೇತ್ರಕಾರ್ಯ –  Field Work ಅತ್ಯಗತ್ಯವೆಂದು ಕೇಳಿದ್ದೇನೆ). ಅನುಕೂಲವಾಗಲೆಂದು ಈಗ ಮಾನವಶಾಸ್ತ್ರದ (Anthropology) ಪುಸ್ತಕಗಳನ್ನು ಓದುತ್ತಿದ್ದೇನೆ.

–ಹೆಸರು ಬೇಡ, ಮೈಸೂರು

ಪ್ರತಿಯೊಬ್ಬ ವಿದ್ಯಾರ್ಥಿ/ ವಿದ್ಯಾರ್ಥಿಗಳೂ ತಮ್ಮದೇ ಒಂದು ಆಸೆ–ಕನಸುಗಳು ಇರುತ್ತವೆ. ಕಾರಣಾಂತರಗಳಿಂದ ಅವನ್ನು ಪೂರೈಸಲು ಆಗುವುದಿಲ್ಲ. ನೀವು ಈಗಾಗಲೇ ಎಂಜಿನಿಯರಿಂಗ್ ಪದವಿ ಪಡೆದು ಒಳ್ಳೆಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ. ನನ್ನ ಸಲಹೆ – ನಿಮಗಿರುವ ಪದವಿಗೆ ಸಂಬಂಧಿಸಿದಂತೆ ಕೋರ್ಸ್ ಮಾಡಿ. ಆಗ ಅದು ನಿಮ್ಮ ಬಡ್ತಿಗೂ ಸಹಾಯವಾಗುತ್ತದೆ.

ಹಿಸ್ಟರಿ/ಆರ್ಕಿಯಾಲಜಿ ಕೋರ್ಸ್‌ಗಳನ್ನು ಪದವಿಯ ಹಂತದಿಂದಲೇ ಮಾಡಬೇಕು. ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ, ಎಂಫಿಲ್ ಮತ್ತು ಪಿಎಚ್‌ಡಿ ಸಹ ಪಡೆಯಬಹುದು. ನೀವು ದೂರಶಿಕ್ಷಣದ ಮೂಲಕ ಮಾಡಿದರೆ ಉದ್ಯೋಗಾವಕಾಶಗಳು ಅಷ್ಟೇನೂ ಆಕರ್ಷಕವಾಗಿರುವುದಿಲ್ಲ. ಹೀಗಾಗಿ ಎಂಜಿನಿಯರಿಂಗ್‌ಗೆ ಸಂಬಂಧಿಸಿದ ಕೋರ್ಸನ್ನೇ ಮಾಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT