ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯ್ಯಂಗೇರಿಯಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ಚಿನ್ನತಪ್ಪ ಉತ್ಸವ

Last Updated 17 ಫೆಬ್ರುವರಿ 2020, 13:54 IST
ಅಕ್ಷರ ಗಾತ್ರ

ನಾಪೋಕ್ಲು: ಶ್ರೀ ಕೃಷ್ಣನದು ಎನ್ನಲಾದ ಚಿನ್ನದ ಕೊಳಲನ್ನು ಸಾಂಪ್ರದಾಯಿಕವಾಗಿ ನುಡಿಸುವ ಚಿನ್ನತಪ್ಪ ಉತ್ಸವವುಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಸೋಮವಾರ ಶ್ರದ್ಧಾಭಕ್ತಿಯಿಂದ ಜರುಗಿತು. ಭಾನುವಾರ ಬೆಳಿಗ್ಗೆ ಉತ್ಸವಕ್ಕೆ ಚಾಲನೆ ನೀಡಲಾಯಿತು.

ವಿವಿಧ ಭಾಗಗಳಿಂದ ಅಧಿಕ ಸಂಖ್ಯೆಯ ಭಕ್ತರು ದೇವಾಲಯಕ್ಕೆ ಆಗಮಿಸಿ ಕೃಷ್ಣನ ಕೊಳಲಿನ ನಾದವನ್ನು ಆಲಿಸಿದರು. ಸೂರ್ಯಾಸ್ತವಾಗುತ್ತಿದ್ದಂತೆ ಸಮೀಪದ ಕಲ್ಲುಹೊಳೆಗೆ ತೆರಳಿದ ಮಂದಿ ಸಾಂಪ್ರದಾಯಿಕ ಪೂಜಾವಿಧಿವಿಧಾನಗಳನ್ನು ನೆರವೇರಿಸಿದರು.

ರಾತ್ರಿ ಎಂಟು ಗಂಟೆಯಿಂದ ಬೆಳಗಿನ ಜಾವ 4ಗಂಟೆಯವರೆಗೆ ಧಾರಾಪೂಜೆ ನೆರವೇರಿತು. ಸೋಮವಾರ ಮಧ್ಯಾಹ್ನ ದೇವಾಲಯದಿಂದ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆಯಲಾಯಿತು. ಪ್ರಮುಖರಾದ ಚಿಂಗಂಡ ಶಿವಾಜಿ ಕೊಳಲನ್ನು ಎತ್ತಿಕೊಂಡು ನಿರ್ದಿಷ್ಟ ಸ್ಥಳಗಳಲ್ಲಿ ಮೂರು ಬಾರಿ ನುಡಿಸುತ್ತಾ ಬಂದು ಮಧ್ಯಾಹ್ನ 1.15 ರ ವೇಳೆಗೆ ಊರ ಮಂದ್ ಗೆ ಆಗಮಿಸಿದರು.

ಅಶ್ವತ್ಥ ವೃಕ್ಷದ ಕೆಳಗೆ ನೆರೆದಿದ್ದ ಭಕ್ತರ ಸಮ್ಮುಖದಲ್ಲಿ ಕೃಷ್ಣನ ಕೊಳಲನ್ನು ನುಡಿಸಲಾಯಿತು. ಬಳಿಕ ನಾಳಿಯಂಡ ಮಾನಿ ಎಂಬಲ್ಲಿಂದ ಎತ್ತೇರಾಟದೊಂದಿಗೆ ಹೊರಟ ಶ್ವೇತವಸ್ತ್ರಧರಿಸಿದ ಮಹಿಳೆಯರು ಊರಮಂದ್ ಗೆ ಆಗಮಿಸಿದರು. ಬಳಿಕ ಊರಮಂದ್ ನ ಗದ್ದೆಯಲ್ಲಿ ಮೂರು ಸುತ್ತು ಎತ್ತೇರಾಟ ನಡೆಯಿತು. ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಹಬ್ಬದ ಕಟ್ಟು ಸಡಿಲಿಸಲಾಯಿತು. ಸಂಜೆ ಮೀನಿಗೆ ಅಕ್ಕಿ ಹಾಕುವ ಸಾಂಪ್ರದಾಯಿಕ ಆಚರಣೆ ಜರುಗಿತು.

ಸಂಜೆ ತೆರಳಿ ಪೂಜಾ ವಿಧಿವಿಧಾನಗಳನ್ನು ನೆರವೇರಿಸುವುದರೊಂದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಅಯ್ಯಂಗೇರಿಯಲ್ಲಿ ವರ್ಷಕ್ಕೊಮ್ಮೆ ನಡೆಯುವ ’ಚಿನ್ನತಪ್ಪ‘ ವಿಶೇಷತೆಯನ್ನು ಹೊಂದಿದೆ. ಜಿಲ್ಲೆಯಲ್ಲಿಯೇ ಏಕೈಕ ಕೃಷ್ಣ ದೇಗುಲವಿರುವ ಗ್ರಾಮ ಎಂಬ ಹೆಗ್ಗಳಿಕೆಯೂ ಇದಕ್ಕಿದೆ.

ಗೊಲ್ಲ ಜನಾಂಗದವರು ಹಾಗೂ ಊರಿನ ಇತರ ಜನಾಂಗದವರು ಒಗ್ಗೂಡಿ ಮೂರು ದಿನಗಳ ಕಾಲ ವಿವಿಧ ಸಂಪ್ರದಾಯದೊಂದಿಗೆ ಆಚರಿಸಿದರು. ಪ್ರತಿವರ್ಷ ಬೆಳಗ್ಗಿನ ಹಬ್ಬದೊಂದಿಗೆ ಆರಂಭಗೊಳ್ಳುವ ಉತ್ಸವ ಅಧಿಕ ಮಂದಿ ಭಕ್ತರ ಸಮ್ಮುಖದಲ್ಲಿ ಧಾರೆ ಪೂಜೆ, ಪಟ್ಟಣಿ ಹಬ್ಬದೊಂದಿಗೆ ವಿಜೃಂಭಣೆಯಿಂದ ಜರುಗಿತು.

ಪೌರಾಣಿಕ ಐತಿಹ್ಯ: ಶ್ರೀಕೃಷ್ಣ ಅಯ್ಯಂಗೇರಿಗೆ ಬಂದಾಗ ತನ್ನ ಮೆಚ್ಚಿನ ಕೊಳಲನ್ನು ಬಿಟ್ಟು ಹೋದನಂತೆ. ಆ ಕೊಳಲನ್ನು ಶ್ರೀಕೃಷ್ಣನ ನೆನಪಿನಲ್ಲಿ ಊರವರು ಜೋಪಾನವಾಗಿ ಕಾಯ್ದಿರಿಸಿ ಪೂಜಿಸುತ್ತಾ ಬಂದರು ಎನ್ನಲಾಗಿದೆ. ಶ್ರೀಕೃಷ್ಣನ ಅನುಗ್ರಹಕ್ಕೆ ಪಾತ್ರರಾಗಲು ಪಟ್ಟಣಿ ಹಬ್ಬದಂದು ಹೆಚ್ಚಿನ ಭಕ್ತರು ಆಗಮಿಸಿದ್ದರು. ಒಂದೊಂದು ಕುಟುಂಬದಿಂದ ಒಬ್ಬೊಬ್ಬ ಮಹಿಳೆ ಶ್ವೇತ ವಸ್ತ್ರ ಧರಿಸಿ ಹರಿವಾಣದಲ್ಲಿ ಹೂ ಅಕ್ಕಿ ದೀಪ ಹಿಡಿದು ಪಟ್ಟಣಿ ಹಬ್ಬದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಚಿನ್ನತಪ್ಪ ಉತ್ಸವದಲ್ಲಿ ಅಯ್ಯಂಗೇರಿ ಗ್ರಾಮದ ಅಧಿಕ ಸಂಖ್ಯೆಯ ಗೊಲ್ಲಜನಾಂಗ ಬಾಂಧವರೊಂದಿಗೆ ಗ್ರಾಮದ 14 ಕುಳದವರು ಭಾಗಿಯಾಗಿದ್ದರು. ಉತ್ಸವದಲ್ಲಿ ತಕ್ಕರಾಗಿ ಬಿದ್ದಿಯಂಡ ಸುಭಾಚ್‌ ಕಾರ್ಯ ನಿರ್ವಹಿಸಿದರು. ಬುಧವಾರ ಭಂಡಾರ ಹಾಕುವ ಕಾರ್ಯಕ್ರಮ ಹಾಗೂ ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT