ನಾಪೋಕ್ಲು: ಕೊಡಗು ಜಿಲ್ಲೆಯಾದ್ಯಂತ ಕೈಲ್ ಮುಹೂರ್ತ ಹಬ್ಬದ ಸಂಭ್ರಮ ಮನೆಮಾಡಿದ್ದು, ಮಂಗಳವಾರ ಸಾಂಪ್ರದಾಯಿಕ ಆಚರಣೆಗಳ ಜೊತೆಜೊತೆಯಲ್ಲಿ ಗ್ರಾಮೀಣ ಕ್ರೀಡಾಕೂಟಗಳು ಆರಂಭವಾಗಲಿವೆ.
ವಿವಿಧೆಡೆ ಕ್ರೀಡಾ ಮೈದಾನಗಳಲ್ಲಿ ಆಟೋಟಗಳು ನಡೆಯಲಿವೆ. ಗ್ರಾಮೀಣ ಕ್ರೀಡಾ ಸ್ಪರ್ಧೆಗಳು ವಿವಿಧ ವಯೋಮಾನದವರಿಗಾಗಿ ನಡೆಯಲಿದ್ದು, ಗ್ರಾಮೀಣ ಜನರನ್ನು ರಂಜಿಸಲಿವೆ. ಸಮೀಪದ ಕಿರು೦ದಾಡು ಗ್ರಾಮದ ಕಿಸಾನ್ ಯೂತ್ ಕ್ಲಬ್ ವತಿಯಿಂದ 4ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟ ಆಯೋಜಿಸಲಾಗಿದೆ. ಮೂರ್ನಾಡಿನ ಪಾಂಡಾನೆ ಕ್ರೀಡಾಂಗಣದಲ್ಲಿ ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಕ್ರೀಡಾಕೂಟಗಳು ಜರುಗಲಿವೆ. ಕಬಡಕೇರಿ, ಪೇರೂರು, ಬಲಮುರಿ ಸೇರಿದಂತೆ ಹಲವೆಡೆ ಯುವಕ ಸಂಘಗಳು ಕ್ರೀಡಾಕೂಟಗಳನ್ನು ಆಯೋಜಿಸಲು ಸನ್ನದ್ದವಾಗಿವೆ.
ಕೈಲ್ ಮುಹೂರ್ತ ಹಬ್ಬದ ಕ್ರೀಡಾಕೂಟಗಳು ಜಿಲ್ಲೆಯ ಹೊರಗೂ ನಡೆಯುತ್ತಿವೆ. ವಿವಿಧ ಜನಾಂಗದವರು ಒಗ್ಗೂಡಿ ಕ್ರೀಡಾಕೂಟಗಳನ್ನು ಆಯೋಜಿಸುತ್ತಿದ್ದಾರೆ. ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಭಾನುವಾರ ಕೈಲ್ ಮುಹೂರ್ತ ಪ್ರಯುಕ್ತ ಕ್ರೀಡಾಕೂಟ ಆಯೋಜಿಸಲಾಗಿತ್ತು. ಮೈಸೂರಿನ ವಿಶ್ವವಿದ್ಯಾಲಯ ಕ್ರೀಡಾ ಮೈದಾನದಲ್ಲಿ ಭಾನುವಾರ ಆಯೋಜಿಸಲಾದ ಕ್ರೀಡಾಕೂಟವನ್ನು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಉದ್ಘಾಟಿಸಿದರು. ಬಳಿಕ ನಡೆದ ಕ್ರೀಡಾಕೂಟದಲ್ಲಿ 5 ವರ್ಷದ ಮಕ್ಕಳಿಂದ ಹಿಡಿದು 70 ವರ್ಷ ವಯಸ್ಸಿನ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 2 ಸ್ಪರ್ಧೆಗಳಂತೆ ಒಟ್ಟು 40 ಸ್ಪರ್ಧೆಗಳು ನಡೆದವು. ಇದರೊಂದಿಗೆ ಸಾಂಪ್ರದಾಯಿಕ ಕಾಯಿಗೆ ಕಲ್ಲು ಹೊಡೆಯುವ ಸ್ಪರ್ಧೆಯೂ ನಡೆಯಿತು. ಕ್ರೀಡಾಕೂಟದ ಭಾಗವಾಗಿ ಪುರುಷರು ಮತ್ತು ಮಹಿಳೆಯರಿಗೆ ಷಟಲ್ ಬ್ಯಾಡ್ಮಿಂಟನ್ ಸ್ಪರ್ಧೆ, ಕ್ರಿಕೆಟ್ ಟೂರ್ನಿಗಳನ್ನು ನಡೆಸಲಾಯಿತು.
ಮೈಸೂರು ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ತೋಟಂಬೈಲು ಮನೋಹರ್, ಕ್ರೀಡಾ ಸಂಚಾಲಕ ಕೊಂಬಾರನ ಸುಬ್ಬಯ್ಯ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಚಂಡಿರ ಬಸಪ್ಪ ಭಾಗವಹಿಸಿದ್ದರು. ಸಮಾಜ ಬಾಂಧವರಿಗೆ ಸೆಪ್ಟೆಂಬರ್ 7ರಂದು ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. 8ರಂದು ಕೈಲುಮುಹೂರ್ತದ ಸಮಾರೋಪ ಸಮಾರಂಭದಲ್ಲಿ ಸಾಧಕರಿಗೆ ಸನ್ಮಾನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಕಿಸಾನ್ ಯೂತ್ ಕ್ಲಬ್ ವತಿಯಿಂದ ಕೈಲ್ ಮುಹೂರ್ತ:
ಸಮೀಪದ ಕಿರು೦ದಾಡು ಗ್ರಾಮದ ಕಿಸಾನ್ ಯೂತ್ ಕ್ಲಬ್ ವತಿಯಿಂದ 4ನೇ ವರ್ಷದ ಕೈಲ್ ಮುಹೂರ್ತ ಕ್ರೀಡಾಕೂಟವನ್ನು ಸೆ. 3ರಂದು ಮಧ್ಯಾಹ್ನ 2 ಗಂಟೆಗೆ ಕಿರು೦ದಾಡು ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ. ಕಿಸಾನ್ ಯೂಥ್ ಕ್ಲಬ್ ಅಧ್ಯಕ್ಷ ತಾಪ೦ಡ ವಿಜು ಕಾಳಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಪಾರಾಣೆಮ ಪಂಚಾಯಿತಿ ಅಧ್ಯಕ್ಷ ಪಾಡೆಯಿಂದ ಕಟ್ಟಿ ಕುಶಾಲಪ್ಪ ಉದ್ಘಾಟಿಸುವರು. ಮುಖ್ಯ ಅತಿಥಿಯಾಗಿ ಟಾಟಾ ಕಾಫಿ ಲಿಮಿಟೆಡ್‌ನ ನಿವೃತ್ತ ಸ್ಪೆಷಲ್ ಗ್ರೇಡ್ ಅಧಿಕಾರಿ ದೇವ ಜನ ಸುಬ್ಬಯ್ಯ ವೆಂಕಟೇಶ್, ಯುನೈಟೆಡ್ ಕಿಂಗ್‌ಡ೦ ಸಿ ಈ ಓ ಅಪ್ಪ ನೆರವ೦ಡ ಮನೋಜ್ ಮಂದಪ್ಪ ಹಾಗೂ ಗ್ರಾಮ ಪಂಚಾಯತಿ ಸದಸ್ಯೆ ಮುಕಾಟಿರ ದಾಕ್ಷಾಯಿಣಿ ಪಾಲ್ಗೊಳ್ಳಲಿರುವರು. ತೆಂಗಿನಕಾಯಿ ಗುಂಡು ಹೊಡೆಯುವುದು, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್, ಭಾರದ ಗುಂಡು ಎಸೆತ, ವಿಷದ ಚೆಂಡು, ವಿವಿಧ ಓಟದ ಸ್ಪರ್ಧೆಗಳು ನಡೆಯಲಿವೆ. ಎಂದು ಕ್ಲಬ್ಬಿನ ಅಧ್ಯಕ್ಷ ತಾಪಂಡ ವಿಜು ಕಾಳಪ್ಪ ಹಾಗೂ ಕಾರ್ಯದರ್ಶಿ ಬೆಳ್ಳಿಯಪ್ಪ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.