ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗಿನಲ್ಲಿ ‘ಕಕ್ಕಡ ಮಾಸ ಪದಿನೆಟ್’ ಸಂಭ್ರಮ

ಸಮುದ್ರಕ್ಕೆ ಹಾಲು ಸುರಿಯುವ ದಿನ: ಈ ಹಬ್ಬಕ್ಕೂ ಕೊರೊನಾ ಕರಿನೆರಳು
Last Updated 2 ಆಗಸ್ಟ್ 2020, 13:08 IST
ಅಕ್ಷರ ಗಾತ್ರ

ಶನಿವಾರಸಂತೆ: ಸೋಮವಾರ ಕರ್ಕಾಟಕ ಮಾಸದ 18ನೇ ದಿನದ ಸಂಭ್ರಮ. ಸಮುದ್ರಕ್ಕೆ ಹಾಲು ಸುರಿಯುವ ದಿನ. ಅಂದು ಕಡಲು ತನ್ನ ಒಡಲನ್ನು ಸಂಪೂರ್ಣ ತುಂಬಿ ಉಕ್ಕುವುದೆಂಬುದು ಪ್ರತೀತಿ. ಈ ಮಾಸ ಮಳೆಗಾಲದ ಮಧ್ಯ ಭಾಗವಾಗಿದೆ.

ಕೊಡಗಿನ ಜನರ ಕೃಷಿ ಚಟುವಟಿಕೆಯ ಕಕ್ಕಡ ಪದಿನೆಟ್ ಹಾಗೂ ತುಳು ಭಾಷಿಗರ ‘ಆಟಿ ಪದಿನೆಣ್ಮ’ ಆಚರಣೆಯು ಆಗಸ್ಟ್ 3ರಂದು ಸೋಮವಾರ ಕೊಡಗು ಜಿಲ್ಲೆಯಾದ್ಯಂತ ಸಂಪ್ರದಾಯಬದ್ಧವಾಗಿ ಆಚರಿಸಲ್ಪಡುತ್ತದೆ. ಕನ್ನಡ ಭಾಷಿಗರ ‘ಆಷಾಢ ’ ಎಂಬ ಪದವೇ ಕೊಡವರ ‘ಕಕ್ಕಡ’ ಹಾಗೂ ತುಳು ಭಾಷಿಗರ ‘ಆಟಿ’ ಆಚರಣೆಯಾಗಿದೆ. ಆದರೆ, ಈ ವರ್ಷ ಕೊರೊನಾ ಕರಿನೆರಳು ಹಬ್ಬದ ಮೇಲೂ ಆಗಿದೆ.

ಕೊಡಗಿನಲ್ಲಿ ಕಕ್ಕಡ ಮಾಸ ಅಥವಾ ಆಟಿ ತಿಂಗಳ 18ನೇ ದಿನವನ್ನು ಆಯುರ್ವೇದ ಸಂಬಂಧದ ಜಾನಪದ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಅಂದು ಸಂಪ್ರದಾಯದಂತೆ ಸಾಮೂಹಿಕವಾಗಿ ಗದ್ದೆಯಲ್ಲಿ ನಾಟಿ ಕಾರ್ಯ ಮಾಡಲಾಗುತ್ತದೆ. ಆ ನಂತರ ಮನೆಯಲ್ಲಿ ಮಧುಬನ ಅಥವಾ ಮದ್ದುಸೊಪ್ಪಿನ ಪಾಯಸ ಹಾಗೂ ಮರಕೆಸುವಿನ ಪತ್ರೊಡೆಯೊಂದಿಗೆ ಹಬ್ಬವನ್ನು ಸಂಭ್ರಮಾಚರಣೆ ಮಾಡಲಾಗುವುದು.

ಕಕ್ಕಡ ಪದಿನೆಟ್ ಹಾಗೂ ಆಟಿ ಪದಿನೆಣ್ಮದ ವೈಶಿಷ್ಟ್ಯವೇ ಮದ್ದುಸೊಪ್ಪಿನ ಪಾಯಸ ಸೇವನೆ.

ಮಧುಬನ ಹಸಿರು ಎಲೆಗಳಿಂದ ಕೂಡಿದ ಪೊದೆಯಂತೆ ಬೆಳೆಯುವ ಸಸ್ಯ. ಉದ್ದನೆಯ ಕಡ್ಡಿಯಲ್ಲಿ ಎಲೆಗಳು ತುಂಬಿರುತ್ತವೆ. ಕಕ್ಕಡ ಅಥವಾ ಆಟಿ ತಿಂಗಳ ಆರಂಭ ದಿನದಿಂದ ಹಿಡಿದು ಮಧುಬನ ಗಿಡದಲ್ಲಿ ಒಂದೊಂದು ವಿಧದ ಔಷಧಿಯ ಗುಣಗಳು ಸೇರಲಾರಂಭಿಸುತ್ತದೆಯಂತೆ. 18ನೇ ದಿನದಂದು 18 ವಿಧದ ಔಷಧಿಗಳು ಸೇರಿ ಸಂಪೂರ್ಣವಾಗುತ್ತದೆ ಎಂದು ಪ್ರತೀತಿ. ಈ ದಿನದಂದು ಮಾತ್ರ ಅದು ಸುವಾಸನಾಭರಿತವಾಗಿರುತ್ತದೆ.

‘ಮನೆಯ ಹಿತ್ತಲಲ್ಲಿ ಬೆಳೆಯುವ ಮಧುಬನ ಗಿಡದ ಸೊಪ್ಪನ್ನು ಕಕ್ಕಡ ಪದಿನೆಟ್‌ರಂದು ಕೊಯ್ದು ನಾವೂ ಅಕ್ಕಿಯೊಂದಿಗೆ ಪಾಯಸ, ಕೇಸರಿಬಾತ್ ಮಾಡಿ ಉಪಯೋಗಿಸುತ್ತೇವೆ. ಅಲ್ಲದೇ ಬಂಧುಗಳಿಗೆ, ಸ್ನೇಹಿತರಿಗೆ ಹಾಗೂ ಅಕ್ಕಪಕ್ಕದವರಿಗೆಲ್ಲಾ ಮದ್ದು ಸೊಪ್ಪು ಹಂಚಿ, ಖುಷಿಪಡುತ್ತೇವೆ’ ಎನ್ನುತ್ತಾರೆ ವಲ್ಲಂಡ ಗಂಗಮ್ಮ–ಬೆಳ್ಳಿಯಪ್ಪ ಕೊಡವ ದಂಪತಿ.

18ನೇ ದಿನದಂದು ಮಧುಬನವನ್ನು ತಂದು ಕೇಸರಿ ಬಾತ್ ಹಾಗೂ ಅಕ್ಕಿ ಪಾಯಸ ಇಲ್ಲವೇ ವಿವಿಧ ರೀತಿಯ ಅನ್ನದ ಅಡುಗೆಯನ್ನು ತಯಾರಿಸಿ ಸವಿಯಲಾಗುತ್ತದೆ. ಆರೋಗ್ಯಕ್ಕೆ ಒಳ್ಳೆಯದೆಂಬ ಭಾವನೆಯೇ ಮಧುಬನದ ಸೇವನೆಗೆ ಕಾರಣ ಎಂದು ಹೇಳಲಾಗುತ್ತದೆ.

ಮದ್ದುಸೊಪ್ಪನ್ನು ದಂಟಿನ ಸಹಿತ ನೀರಿನಲ್ಲಿ ಚೆನ್ನಾಗಿ ಬೇಯಿಸಲಾಗುತ್ತದೆ. ನಂತರ, ಆ ನೀರನ್ನು ಸೋಸಿ ಕಡುನೆರಳೆ ಹಣ್ಣಿನ ಬಣ್ಣದ ನೀರನ್ನು ಬಳಸಿ, ರವೆ, ಸಕ್ಕರೆ, ಗೋಡಂಬಿ– ದ್ರಾಕ್ಷಿ ಮತ್ತು ತುಪ್ಪ ಸೇರಿಸಿ ಕೇಸರಿಬಾತ್‌ ಸಹ ಮಾಡಲಾಗುತ್ತದೆ.

ಇಲ್ಲವೇ ಆ ನೀರಿನಲ್ಲಿ ಅಕ್ಕಿ, ಬೆಲ್ಲ, ಕಾಯಿತುರಿ ಸೇರಿಸಿ ಅನ್ನ ಮಾಡುತ್ತಾರೆ. ಸುವಾಸನೆಯುಕ್ತ ಕಡುಬಣ್ಣದ ಖಾದ್ಯ ಸವಿಯಲು ತುಂಬಾ ರುಚಿಯಾಗಿರುತ್ತದೆ. ಆರೋಗ್ಯದ ದೃಷ್ಟಿಯಿಂದ ಔಷಧೀಯ ಗುಣಗಳಿವೆ ಎಂಬ ಕಾರಣಕ್ಕಾಗಿಯೇ ಮಧುಬನ ಸೊಪ್ಪಿನ ಪಾಯಸವಾಗಲೀ ಸಿಹಿ ಅನ್ನವಾಗಲಿ ಇಲ್ಲವೇ ತುಪ್ಪದನ್ನವಾಗಲಿ ಮಕ್ಕಳಾದಿಯಾಗಿ ಹಿರಿಯರಿಗೂ ಇಷ್ಟವಾಗುತ್ತದೆ.

ಕರ್ಕಾಟಕ ಮಾಸದಲ್ಲಿ ಕಾಡಿನಲ್ಲಿ ಸಸ್ಯಗಳು ಸಮೃದ್ಧಿಯಾಗಿ ಬೆಳೆಯುತ್ತವೆ. ಕೊಡಗಿನಲ್ಲಿ ಮದ್ದುಸೊಪ್ಪಿನ ಜತೆ ಮರದ ಮೇಲೆ ಬಿಡುವ ‘ಮರಕೆಸ’ ಎಂಬ ಸೊಪ್ಪು ಕೂಡ ಔಷಧ ರೂಪ ತಾಳುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮರಕೆಸವನ್ನು ಬಳಸುತ್ತಾರೆ. ಆಟಿ ಮಾಸದಲ್ಲಿ ಯಾವ ದಿನವಾದರೂ ಈ ಸೊಪ್ಪನ್ನು ಉಪಯೋಗಿಸಿದರೆ ಆರೋಗ್ಯಕ್ಕೆ ತುಂಬ ಒಳ್ಳೆಯದು. ಮರಕೆಸದಿಂದ ಪತ್ರೊಡೆ ಮಾಡಿ ಸವಿಯುತ್ತಾರೆ.

‘ಹಬ್ಬ–ಹರಿದಿನಗಳು ಹಾಗೂ ಸಂಪ್ರದಾಯ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂಬುದಕ್ಕೆ ಮಧುಬನ ಹಾಗೂ ಮರಕೆಸದ ಸೇವನೆ ಉತ್ತಮ ನಿದರ್ಶನ. ಇವು ಮಳೆಗಾಲದ ಶೀತ ವಾತಾವರಣದಲ್ಲಿ ದೇಹದ ಉಷ್ಣಾಂಶವನ್ನು ಹೆಚ್ಚಿಸಿ ಶೀತ ಮತ್ತು ಚಳಿಯಿಂದ ರಕ್ಷಿಸುತ್ತದೆ’ ಎನ್ನುತ್ತಾರೆ ವಲ್ಲಂಡ ಬೆಳ್ಳಿಯಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT